ಕುಷ್ಟಗಿ:
ತಾಲೂಕಿನ ಬಳೂಟಗಿ ಗ್ರಾಮದಲ್ಲಿ ಸ್ಥಗಿತಗೊಂಡ ಸಿಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ತಾಲೂಕು ಪಂಚಾಯಿತಿ ಅಧಿಕಾರಿ ಸಂಗಪ್ಪ ನಂದಾಪೂರು ಹಾಗೂ ಶಿರಗುಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಣ್ಣ ದಾಸರ ಭೇಟಿ ನೀಡಿ ರಸ್ತೆ ಒತ್ತುವರಿಗೊಂಡ ಸ್ಥಳದ ಸರ್ವೇ ಕಾರ್ಯ ಮಾಡಿದರು.ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ₹ 40 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆಯ ಕಾಮಗಾರಿಗೆ ನಾಲ್ಕು ತಿಂಗಳ ಹಿಂದೆ ಚಾಲನೆ ನೀಡಲಾಗಿತ್ತು. ಆದರೆ, ಕೆಲ ಪ್ರಭಾವಿ ವ್ಯಕ್ತಿಗಳು ಮಾಡಿಕೊಂಡ ರಸ್ತೆ ಒತ್ತುವರಿ ತೆರವುಗೊಳಿಸದೆ ಇರುವುದರಿಂದ ಕಾಮಗಾರಿ ಸ್ಥಗಿತವಾಗಿತ್ತು. ಈ ಕುರಿತು ಕನ್ನಡಪ್ರಭ ಏ. 12ರಂದು ಒತ್ತುವರಿ ತೆರವಿಗೆ ಮೀನಮೇಷ, ರಸ್ತೆ ಕಾಮಗಾರಿ ಸ್ಥಗಿತ ಎಂಬ ತಲೆಬರಹದಡಿ ಸಮಗ್ರವಾದ ವರದಿ ಪ್ರಕಟಿಸಿತ್ತು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಂಗಳವಾರ ಬಳೂಟಗಿ ಗ್ರಾಮಕ್ಕೆ ಭೇಟಿ ನೀಡುವ ಮೂಲಕ ಸಿಸಿ ರಸ್ತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಒತ್ತುವರಿ ಕುರಿತು ಸರ್ವೇ ಮಾಡಿದರು. ನಂತರ ಒತ್ತುವರಿ ಮಾಡಿಕೊಂಡ ಮನೆಗಳ ಮಾಲೀಕರಿಗೆ ಗ್ರಾಮದ ಅಭಿವೃದ್ಧಿಗಾಗಿ ಸಿಸಿ ರಸ್ತೆ ಕಾಮಗಾರಿ ಕೈಗೊಂಡಿದ್ದು ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ. ಎಲ್ಲರು ಸಹಕಾರ ನೀಡಿದಾಗ ಮಾತ್ರ ಅಭಿವೃದ್ಧಿ ಕಾರ್ಯ ನಡೆಯಲು ಸಾಧ್ಯವಾಗುತ್ತದೆ. ಆದ ಕಾರಣ ಒತ್ತುವರಿ ಮಾಡಿಕೊಂಡವರು ಸ್ವಯಂಪ್ರೇರಿತರಾಗಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ನಾವೇ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಿ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಬಳೂಟಗಿ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಒತ್ತುವರಿ ಮಾಡಿಕೊಂಡ ಮನೆ ಮಾಲೀಕರಿಗೆ ತಿಳಿವಳಿಕೆ ನೀಡಲಾಗಿದೆ. ಇನ್ನೂ ಮುರ್ನಾಲ್ಕು ದಿನಗಳಲ್ಲಿ ಒತ್ತುವರಿ ತೆರವುಗೊಳಿಸದೆ ಹೋದರೆ ನಾವೇ ಮುಂದೆ ನಿಂತು ಜೆಸಿಬಿ ಮೂಲಕ ತೆರವುಗೊಳಿಸುತ್ತೇವೆ.ಸಂಗಪ್ಪ ನಂದಾಪುರು ತಾಲೂಕು ಪಂಚಾಯಿತಿ ಅಧಿಕಾರಿ ಕುಷ್ಟಗಿ