ನಾಪತ್ತೆ ಪೂರ್ವ ಯೋಜಿತವೇ..? ಶಾಸಕನನ್ನು ಖೆಡ್ಡಾಕ್ಕೆ ಬೀಳಿಸೋ ಪ್ಲಾನ್‌ ಇತ್ತೇ?

KannadaprabhaNewsNetwork | Updated : Oct 16 2024, 12:48 AM IST

ಸಾರಾಂಶ

Was the disappearance pre-planned? Was there a plan to drop the MLA

ಮನೆಯಿಂದ ಅರ್ಧ ಕಿಮೀ ದೂರದಿಂದ ಸುಗುರೆ ಕರೆದೊಯ್ದಿದ್ದ ಸ್ಫಿಫ್ಟ್‌ ಕಾರು

ಸ್ವಿಫ್ಟ್‌ ಕಾರಿನ ಮಾಲೀಕನ ಮೊಬೈಲ್‌ ಟಾವರ್‌ ನೀಡಿದ ಸ್ಥಳದ ಸುಳಿವು

--------ಪಾಯಿಂಟ್ಸ್‌.......

ದೆಹಲಿಗೆ ಹಾರಲು ತಯಾರಾಗಿದ್ದ ಸುಗುರೆ, ವಿಮಾನ ಟಿಕೆಟ್‌ ಬುಕ್‌ ಆಗಿತ್ತು

ಲಾಡ್ಜ್‌ನಲ್ಲಿ ಕಾದು ಕುಳಿತಿದ್ದಾಗ ಪೊಲೀಸ್‌ ಕಂಡು ಕಕ್ಕಾಬಿಕ್ಕಿಯಾದ ಸುಗುರೆ

ಸುಗುರೆ ನಾಪತ್ತೆ ಪೂರ್ವ ಯೋಜಿತ, ಆ ಇಬ್ಬರು ಯಾರ ವಿರೋಧಿಗಳು..?

ಕೋಟ್ಯಂತರ ರು. ವಹಿವಾಟು, ತೆರಿಗೆ ಇಲಾಖೆಯ ಕಿವಿ ನಿಮಿರೋ ಸಾಧ್ಯತೆ

ಕನ್ನಡಪ್ರಭ ವಾರ್ತೆ, ಬೀದರ್‌

ಮನೆಯಿಂದ ನಸುಕಿನ ಜಾವ ಹೊರ ಹೋಗಿ ನಾಪತ್ತೆಯಾಗಿದ್ದ ಉದ್ಯಮಿ ಸಂಜೀವಕುಮಾರ ಸುಗುರೆ ಪ್ರಕರಣ ಪೂರ್ವಯೋಜಿತ ಎಂಬ ಅನುಮಾನಗಳ ಜೊತೆ ಜೊತೆಗೆ ಕೋಟ್ಯಂತರ ರುಪಾಯಿ ಹಣಕಾಸು ವ್ಯವಹಾರ, ಚುನಾವಣೆಯಲ್ಲಿ ಹಣ ಹಂಚಿಕೆ ಮತ್ತಿತರ ಕುರಿತಾಗಿ ಪತ್ರದಲ್ಲಿರುವ ಉಲ್ಲೇಖಗಳು ತೆರಿಗೆ ಇಲಾಖೆಯವರ ಕಿವಿ ನಿಮಿರಿಸಿದರೆ ಅಚ್ಚರಿಯಿಲ್ಲ.

ನಂಬಲರ್ಹ ಸೂತ್ರಗಳ ಪ್ರಕಾರ ಅ. 13ರ ಬೆಳ್ಳಂಬೆಳಿಗ್ಗೆ 4.05ರ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಹೊರ ನಡೆದಿದ್ದ ಸುಗುರೆ ಹೈದ್ರಾಬಾದ್‌ನ ನಾಂಪಲ್ಲಿಯ ಲಾಡ್ಜವೊಂದರಲ್ಲಿ ಪತ್ತೆಯಾಗಿದ್ದು ಅವರ ಪತ್ತೆಗೆ ಜಾಲ ಬೀಸಿದ್ದ ಪೊಲೀಸರಿಗೆ ಸಿಕ್ಕು 14ರ ನಸುಕಿನ 4ಕ್ಕೆ ಬಸವಕಲ್ಯಾಣ ಪೊಲೀಸ್‌ ಠಾಣೆಗೆ ಕರೆತಂದು ಕುಟುಂಬಸ್ಥರಿಗೆ ಒಪ್ಪಿಸಿದ್ದು, ಮುಂದಿನ ದಿನಗಳಲ್ಲಿ ಪೂರಕ ದೂರುಗಳು ಬರುವವರೆಗೆ ಸುಗುರೆ ಪುತ್ರ ನೀಡಿದ್ದ ನಾಪತ್ತೆ ದೂರು ಸುಖಾಂತ್ಯಗೊಳ್ಳಲಿದೆ.

ಸ್ಫಿಫ್ಟ್‌ ಕಾರು ಜಾಡು ಹಿಡಿದು ತನಿಖೆ:

ಅ. 13ರ ಬೆಳ್ಳಂಬೆಳಿಗ್ಗೆ 4.05ರ ಸುಮಾರಿಗೆ ಮನೆಯಿಂದ ಯಾರಿಗೂ ಹೇಳದೆ ಮೊಬೈಲ್‌, ಎಟಿಎಂ, ವಾಹನ ಯಾವುದನ್ನೂ ಕೊಂಡೊಯ್ಯದೇ ಹೊರ ನಡೆದಿದ್ದ ಸಂಜೀವಕುಮಾರ ಸುಗುರೆ ಅವರು ರಸ್ತೆ ಮೇಲೆ ಹಲವು ಹೆಜ್ಜೆಗಳನ್ನಿಡುತ್ತಿದ್ದಂತೆ ಬಂದ ಸ್ಫಿಫ್ಟ್‌ ಕಾರು ಅವರನ್ನು ಹತ್ತಿಸಿಕೊಂಡು ನಡೆದಿರುವ ಸಿಸಿ ಕ್ಯಾಮರಾ ದೃಶ್ಯಗಳು ಪೊಲೀಸರಿಗೆ ದೊರಕಿದ್ದು ಇಡೀ ಪ್ರಕರಣ ಸುಖಾಂತ್ಯಗೊಳ್ಳಲು ಕಾರಣವಾಗಿದೆ. ಪ್ರಕರಣದಲ್ಲಿ ಪೊಲೀಸರ ಚಾಣಾಕ್ಷ ನಡೆ ಶ್ಲಾಘನೆಗೆ ಒಳಗಾಗಿದೆ.

ಮೊಬೈಲ್‌ ಟಾವರ್‌ ನೀಡಿದ ಸುಳಿವು:

ಸುಗುರೆ ಅವರನ್ನ ಕರೆದೊಯ್ದಿದ್ದ ಕಾರಿನ ನಂಬರ್‌ ಆಧಾರದ ಮೇಲೆ ಸಿಕ್ಕ ಮಾಲೀಕರ ಮೊಬೈಲ್‌ ನಂಬರ್‌ ಪತ್ತೆ ಹಚ್ಚಿದ್ದ ಪೊಲೀಸರಿಗೆ ಹೈದ್ರಾಬಾದ್‌ ನಾಂಪಲ್ಲಿ ಪ್ರದೇಶದಲ್ಲಿನ ಮೆಟ್ರೋ ಸ್ಟೇಷನ್‌ನಲ್ಲಿ ಮೊಬೈಲ್‌ ಸಿಗ್ನಲ್‌ಗಳು ಪತ್ತೆಯಾಗುತ್ತಿದ್ದಂತೆ ಚುರುಕಾಗಿದ್ದಾರೆ. ಬಸವಕಲ್ಯಾಣ ಪಿಎಸ್‌ಐ ಹಾಗೂ ತಂಡ ಖಾಸಗಿ ವಾಹನದಲ್ಲಿ ಸಂಜೆ ಅಲ್ಲಿಗೆ ಧಾವಿಸಿದೆ. ಅಲ್ಲಿ ಸುತ್ತಮುತ್ತಲಿನ ಕೆಲ ಹೋಟೆಲ್‌ಗಳನ್ನು ತಡಕಾಡಿದಾಗ ಸುಗುರೆ ಹೆಸರಿನಲ್ಲಿಯೇ ಕಾಯ್ದಿರಿಸಲಾಗಿದ್ದ ರೂಮ್‌ ಪತ್ತೆಯಾಗಿದೆ.

ರೂಮ್‌ನಿಂದ ಊಟಕ್ಕೆಂದು ಹೊರ ನಡೆದಿದ್ದ ಸುಗುರೆ ಬರೋಬ್ಬರಿ ರಾತ್ರಿ 9.30ರ ಸುಮಾರಿಗೆ ಕೊಠಡಿ ಪ್ರವೇಶಿಸುತ್ತಿದ್ದಂತೆ ಪೊಲೀಸರು ಎಂಟ್ರಿ ಕೊಟ್ಟಿದ್ದು ಸುಗುರೆ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸ್‌ ಹಿರಿಯ ಅಧಿಕಾರಿಗಳಿಗೆ ಮುಟ್ಟಿಸಿ ಅಲ್ಲಿಂದ ಅವರನ್ನು ಬಸವಕಲ್ಯಾಣಕ್ಕೆ ಬೆಳಗಿನ ಜಾವ 4.30ರ ಸುಮಾರಿಗೆ ವಾಪಸ್‌ ಕರೆತಂದಿದ್ದಾರೆ.

ದೆಹಲಿಗೆ ಹಾರಲು ತಯಾರಾಗಿ:

ಪೊಲೀಸರು ಇನ್ನೇನು ಸ್ವಲ್ಪ ತಡ ಮಾಡಿದ್ದರೂ ಸುಗುರೆ ಅಲ್ಲಿಂದ ದೆಹಲಿಗೆ ತೆರಳಿಬಿಡುತ್ತಿದ್ದರು. ಪ್ರಕರಣ ಮತ್ತಷ್ಟು ಜಟಿಲವಾಗುತ್ತಿತ್ತು. ಹೈದ್ರಾಬಾದ್‌ನಿಂದ ದೆಹಲಿಗೆ ತೆರಳಲು ವಿಮಾನದ ಟಿಕೆಟ್‌ ಕಾಯ್ದಿರಿಸಿದ್ದ ಸುಗುರೆ ಅವರು ಏರ್ಪೋರ್ಟ್‌ಗೆ ಹೊರಡಬೇಕಿದ್ದ ಸಮಯದಲ್ಲಿಯೇ ಪೊಲೀಸರ ಎಂಟ್ರಿಯಾಗಿದೆ.

ಆ ಇಬ್ಬರು ಯಾರ ವಿರೋಧಿಗಳು..?:

ಅಷ್ಟಕ್ಕೂ ಸುಗುರೆ ಮನೆಯಿಂದಾಚೆ ಸ್ವಲ್ಪ ದೂರ ಬರುತ್ತಿದ್ದಂತೆ ಹತ್ತಿದ ಕಾರಿನಲ್ಲಿ ಇಬ್ಬರು ಸವಾರರಾಗಿದ್ದರು. ಇವರಿಬ್ಬರೂ ಸುಗುರೆ ಜೊತೆ ದೆಹಲಿಗೆ ಹಾರುವ ತವಕದಲ್ಲಿದ್ದರು ಎಂಬ ಮಾಹಿತಿಯನ್ನು ಮೂಲಗಳು ಹೊರ ಹಾಕುತ್ತಿದ್ದಂತೆ ಸುಗುರೆ ನಾಪತ್ತೆ ಪ್ರಕರಣ ಪೂರ್ವಯೋಜಿತ ಎಂಬುವದು ಸ್ಪಷ್ಟವಾಗುತ್ತಿದೆ.

ಇದೀಗ ಸುಗುರೆ ನಾಪತ್ತೆಯಾಗಿದ್ದ ಪ್ರಕರಣ ಬಗೆಹರಿದಿರುವ ಬೆನ್ನಲ್ಲಿಯೇ ನಾಪತ್ತೆಯಾಗಲು ಸಾಥ್‌ ನೀಡಿರುವ ವ್ಯಕ್ತಿಗಳ್ಯಾರು, ಅವರು ಏಕೆ ಇಂಥದ್ದಕ್ಕೆ ಕೈಹಾಕಿದರು, ಅವರಿಗೇನು ಲಾಭ, ಅವರು ಯಾರ ಗೆಳೆಯರು, ಯಾರ ವಿರೋಧಿಗಳು, ಸುಗುರೆ ಬರೆದ ಪತ್ರದ ಮೂಲಕ ಶಾಸಕ ಶರಣು ಸಲಗರ ಅವರನ್ನು ಖೆಡ್ಡಾಕ್ಕೆ ಬೀಳಿಸೋ ಯೋಜನೆ ಇತ್ತೇ ಎಂಬಿತ್ಯಾದಿ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ರೋಚಕ ವಿಷಯಗಳು ಹೊರ ಬೀಳುವ ಮಾಹಿತಿ ಲಭ್ಯವಾಗಿದೆ.

ತೆರಿಗೆ ಇಲಾಖೆಯ ಕಿವಿ ನಿಮಿರೋ ಸಾಧ್ಯತೆ:

ಇನ್ನು ಕೋಟ್ಯಂತರ ರುಪಾಯಿ ಹಣ ನೀಡಿದ್ದರ ಕುರಿತು ಉಲ್ಲೇಖವಾದ ಪತ್ರದ ಜಾಡು ಹಿಡಿದು ಆದಾಯ ತೆರಿಗೆ ಇಲಾಖೆಯವರು ಫೀಲ್ಡ್‌ಗೆ ಇಳಿದಿದ್ದೆಯಾದಲ್ಲಿ ಯಾರೆಲ್ಲ ಉತ್ತರಿಸಬೇಕಾದೀತು ಎಂಬುದು ಸಹ ಕುತೂಹಲಕಾರಿ. ಒಟ್ಟಾರೆ ಪೊಲೀಸರ ಕಾರ್ಯಕ್ಷಮತೆ ಮೆಚ್ಚುವಂಥದ್ದು ಎಂದು ಜನ ಬೆನ್ನು ತಟ್ಟುತ್ತಿದ್ದಾರೆ.

Share this article