ನಾಣಿಂಜ ಮಲೆ ರಕ್ಷಿತಾರಣ್ಯ ರಸ್ತೆ ಪಕ್ಕ ತ್ಯಾಜ್ಯ ವಿಲೇವಾರಿ ಸಮಸ್ಯೆ

KannadaprabhaNewsNetwork |  
Published : Feb 28, 2025, 12:48 AM IST
ತ್ಯಾಜ್ಯ | Kannada Prabha

ಸಾರಾಂಶ

ಅಳದಂಗಡಿ-ಸೂಳಬೆಟ್ಟು-ಫಂಡಿಜೆ ಮೂಲಕ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಗೊಂಡ ರಸ್ತೆ ನಾಣಿಂಜಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತದೆ. ಹೋಬಳಿ ಕೇಂದ್ರ ವೇಣೂರಿಗೆ ಸಂಪರ್ಕ ಸಾಧಿಸಲು ಇದು ಅತಿ ಹತ್ತಿರದ ದಾರಿ. ಇಲ್ಲಿ ರಸ್ತೆ ಪಕ್ಕ ಸಾರ್ವಜನಿಕರು ಎಸೆಯುವ ತ್ಯಾಜ್ಯ ಭಾರಿ ಸಮಸ್ಯೆ ಸೃಷ್ಟಿಸಿದೆ.

ದೀಪಕ ಅಳದಂಗಡಿ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಳಂಜ ಗ್ರಾಮ ಪಂಚಾಯಿತಿಯ ವೇಣೂರು ಅರಣ್ಯ ವಲಯದ ವ್ಯಾಪ್ತಿಯಲ್ಲಿರುವ ನಾಣಿಂಜ ಮಲೆ ರಕ್ಷಿತಾರಣ್ಯವೋ, ತ್ಯಾಜ ಸಂಗ್ರಹಣಾ ಜಾಗವೋ ಎಂಬ ಸಂಶಯ ಸಾರ್ವಜನಿಕರಲ್ಲಿ ಉಂಟಾಗಿದೆ. ಇಲ್ಲಿನ ಅರಣ್ಯದೊಳಗೆ ಅಲ್ಲಲ್ಲಿರುವ ಬಿದ್ದಿರುವ ತ್ಯಾಜ್ಯದ ರಾಶಿ ಬಗ್ಗೆ ಅರಣ್ಯ ಇಲಾಖೆಯವರು ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

ಅಳದಂಗಡಿ-ಸೂಳಬೆಟ್ಟು-ಫಂಡಿಜೆ ಮೂಲಕ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಅಭಿವೃದ್ಧಿಗೊಂಡ ರಸ್ತೆ ನಾಣಿಂಜಮಲೆ ರಕ್ಷಿತಾರಣ್ಯ ಮೂಲಕ ಹಾದು ಹೋಗುತ್ತದೆ. ಹೋಬಳಿ ಕೇಂದ್ರ ವೇಣೂರಿಗೆ ಸಂಪರ್ಕ ಸಾಧಿಸಲು ಇದು ಅತಿ ಹತ್ತಿರದ ದಾರಿ. ಸೂಳಬೆಟ್ಟಿನಿಂದ ಫಂಡಿಜೆಗೆ ಸಾಗುವ ಈ ರಸ್ತೆಯ ಇಕ್ಕೆಲದಲ್ಲಿ ಅರಣ್ಯ ವ್ಯಾಪಿಸಿದೆ. ಅದೇ ರೀತಿಯಲ್ಲಿ ತ್ಯಾಜ್ಯವೂ ಅಡ್ಡಾದಿಡ್ಡಿಯಾಗಿ ಪಸರಿಸಿದೆ. ಮರದ ಗೆಲ್ಲೊಂದನ್ನು ಕಡಿದರೆ ಧಾವಿಸಿ ಬಂದು ಪ್ರಕರಣ ದಾಖಲಿಸಿಕೊಳ್ಳುವ ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದ ಬಗ್ಗೆ ತಲೆ ಕೆಡಿಸಿದಂತಿಲ್ಲ. ಪ್ರತಿ ನಿತ್ಯ ಇಲಾಖಾ ಸಿಬ್ಬಂದಿ ಅಳದಂಗಡಿಯಿಂದ ವೇಣೂರಿಗೆ, ವೇಣೂರಿನಿಂದ ಅಳದಂಗಡಿಗೆ ಸಂಚಾರ ಮಾಡುತ್ತಾ ಅರಣ್ಯ ಸಂಪತ್ತಿನ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಆದರೆ ಅರಣ್ಯ ನಾಶಕ್ಕೆ ಕಾರಣವಾಗುವ ಪ್ಲಾಸ್ಪಿಕ್ ಮತ್ತು ಇತರೆ ತ್ಯಾಜ್ಯ ರಾಶಿ ರಾಶಿಯಾಗಿ ಬಿದ್ದಿರುವುದು ಇವರ ಗಮನಕ್ಕೆ ಬಂದ ಹಾಗಿಲ್ಲ.

ಈಗ ಬೇಸಿಗೆ ಕಾಲ. ಬಿಸಿಲಿನ ಬೇಗೆಗೆ ತ್ಯಾಜ್ಯದಲ್ಲಿ ಯಾವುದಾದರೂ ದಹನವಾಗುವ ವಸ್ತುವಿದ್ದರೆ ಕಾಡ್ಗಿಚ್ಚಿನ ಅಪಾಯ ಕಟ್ಟಿಟ್ಟ ಬುತ್ತಿ.

ರಕ್ಷಿತಾರಣ್ಯದ ಮಧ್ಯಭಾಗದಿಂದ ಹಾದು ಹೋಗುವ ರಸ್ತೆ ಮೂಲಕ ನೂರಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಆದರೆ ಇದೀಗ ಕೆಲ ತಿಂಗಳುಗಳಿಂದ ಸಂಚಾರ ಮಾಡುವಾಗ ಮಾಸ್ಕ್ ಹಾಕಿಕೊಂಡು ಹೋಗುವ ಪ್ರಮೇಯ ಎದುರಾಗಿದೆ. ದಾರಿಯಲ್ಲಿನ ಕಿರುಸೇತುವೆಯಡಿಗೆ ಕಿಡಿಗೇಡಿಗಳು ಸುರಿಯವ ತ್ಯಾಜ್ಯದಿಂದಾಗಿ ಅರಣ್ಯವಿಡೀ ದುರ್ವಾಸನೆ ಪಸರಿಸಿದೆ.

ತ್ಯಾಜ್ಯದ ಮೇಲಿಂದ ಹಾರಾಡುವ ನೊಣಗಳ ಗುಂಪು ದ್ವಿಚಕ್ರ ವಾಹನ ಚಾಲಕರ ಮುಖಕ್ಕೇ ಬಡಿಯುತ್ತವೆ. ರಾಶಿಯಲ್ಲಿ ಬಹುತೇಕ ಕೋಳಿ ತ್ಯಾಜ್ಯವೇ ಹೆಚ್ಚಾಗಿದೆ ಎಂಬುದು ಅಳದಂಗಡಿ, ಸೂಳಬೆಟ್ಟು, ನಾಲ್ಕೂರು, ಡೆಪ್ಪುಣಿ, ಫಂಡಿಜೆ, ನಿಟ್ಟಡೆ ವೇಣೂರು, ಪ್ರದೇಶದ ನಾಗರಿಕರ ಆರೋಪ.

--------------------

ಸಾರ್ವಜನಿಕರುವ ಸುರಿಯುತ್ತಿರುವ ತ್ಯಾಜ್ಯದಿಂದ ಅರಣ್ಯಕ್ಕೂ ಅಪಾಯ, ವನ್ಯಜೀವಿಗಳಿಗೂ ತೊಂದರೆಯಾಗುತ್ತದೆ. ಅನೇಕ ಬಾರಿ ತ್ಯಾಜ್ಯದಲ್ಲಿರುವ ಮದುವೆ ಕಾಗದ, ರಸೀತಿ ಇತ್ಯಾದಿಗಳನ್ನು ನೋಡಿ ಅದರಲ್ಲಿರುವ ವಿಳಾಸ ಪತ್ತೆ ಹಚ್ಚಿ ಅವರ ಕೈಯಿಂದಲೇ ತ್ಯಾಜ್ಯವನ್ನು ವಿಲೇವಾರಿ ಮಾಡಿದ್ದೇವೆ. ಕೋಳಿ ತ್ಯಾಜ್ಯ ಹಾಕುವವರನ್ನು ಪತ್ತೆ ಹಚ್ಚಿ ಕ್ರಮಕೈಗೋಳ್ಳುತ್ತೇವೆ ಮತ್ತು ಅಲ್ಲಿನ ತ್ಯಾಜ್ಯವನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುತ್ತವೇವೆ.

- ಸುರೇಶ್ ಗೌಡ್ರು, ಉಪ ವಲಯ ಅರಣ್ಯಾಧಿಕಾರಿ, ಅಳದಂಗಡಿ.

--------------

ಕಾಡಿನಲ್ಲಿರುವ ತ್ಯಾಜ್ಯದ ವಿಚಾರ ಗಮನಕ್ಕೆ ಬಂದಿದೆ. ಕಾಡಿನೊಳಗೆ ಕಸ ಹಾಕುವವರನ್ನು ಪತ್ತೆ ಹಚ್ಚುವುದು ಸುಲಭದ ಕೆಲಸವಲ್ಲ. ಆದರೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಅರಣ್ಯ ಇಲಾಖೆಯವರೊಂದಿಗೆ ಸೇರಿಕೊಂಡು ತ್ಯಾಜ್ಯ ವಿಲೇಗೆ ವಾರದಲ್ಲಿ ಒಂದು ದಿನ ಕಾಡಿನ ಸ್ವಚ್ಛತೆಗೆ ಮೀಸಲಾಗಿಡಲಾಗುವುದು.

-ಶೋಭಾ, ಬಳಂಜ ಗ್ರಾ.ಪಂ. ಅಧ್ಯಕ್ಷೆ

PREV

Recommended Stories

‘ಚಾಮುಂಡೇಶ್ವರಿ ಬಗ್ಗೆ ಬಾನು ತಮ್ಮ ಗೌರವ ಸ್ಪಷ್ಟಪಡಿಸಲಿ’ : ವಿಜಯೇಂದ್ರ
ಗ್ಯಾರಂಟಿ ಯೋಜನೆಗಳ ಜತೆ ರಾಜ್ಯವು ಅಭಿವೃದ್ಧಿ