ಹಳ್ಳ, ಚರಂಡಿಯಲ್ಲಿ ತ್ಯಾಜ್ಯ; ಅನಾರೋಗ್ಯ ಭೀತಿ

KannadaprabhaNewsNetwork |  
Published : Jun 19, 2026, 03:00 AM IST
ದೇವರಹಿಪ್ಪರಗಿ ಪಟ್ಟಣದ ಮಧ್ಯಭಾಗದಲ್ಲಿರುವ ಹಳ್ಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶಲಿಸಿದರು. | Kannada Prabha

ಸಾರಾಂಶ

ಎರಡು ತಿಂಗಳು ಬಿರುಬಿಸಿಲಿಗೆ ಬೇಸತ್ತು ಹೋಗಿದ್ದ ತಾಲೂಕಿನ ಜನರು ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಒಂದೆಡೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದ್ದರೆ, ಇನ್ನೊಂದೆಡೆ ಜನರಿಗೆ ಅನೈರ್ಮಲ್ಯ ವಾತಾವರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಮಲ್ಲಿಕಾರ್ಜುನ ಪಟ್ಟಣಶೆಟ್ಟಿ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಎರಡು ತಿಂಗಳು ಬಿರುಬಿಸಿಲಿಗೆ ಬೇಸತ್ತು ಹೋಗಿದ್ದ ತಾಲೂಕಿನ ಜನರು ಮುಂಗಾರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಒಂದೆಡೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದ್ದರೆ, ಇನ್ನೊಂದೆಡೆ ಜನರಿಗೆ ಅನೈರ್ಮಲ್ಯ ವಾತಾವರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ. ಪ್ರತಿ ವರ್ಷ ಮಳೆಗಾಲ ಸಮೀಪಿಸಿದಾಗ ಪಟ್ಟಣದ ಬಡಾವಣೆಗಳಲ್ಲಿರುವ ಹಳ್ಳ, ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಒಂದೇ ಕಡೆ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಚರಂಡಿಯಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದರೆ ತೆರವು ಮಾಡುವುದು ಹಾಗೂ ಜನರ ಆರೋಗ್ಯಕ್ಕೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಪಟ್ಟಣ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯ ಕರ್ತವ್ಯ.

ಆದರೆ ಕನ್ನಡಪ್ರಭ ತಂಡ ಮಳೆಗಾಲದ ಸಿದ್ಧತೆಗೆ ಸ್ಥಳೀಯ ಆಡಳಿತ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಪರಿಶೀಲಿಸಲು ಪಟ್ಟಣದ ವಿವಿಧ ವಾರ್ಡ್‌ಗಳಿಗೆ ತೆರಳಿದಾಗ ಕಂಡಿದ್ದು ಕೆಟ್ಟ ವಾಸನೆ. ಮತ್ತೆ ಮಳೆ ಬಂದರೆ ರೋಗ ಬರುವ ಮುನ್ಸೂಚನೆ. ಅದರಲ್ಲಿಯೂ ವಿಶೇಷವಾಗಿ ಜೆ.ಎಂ.ಜೆ ಶಾಲೆಯ ಹತ್ತಿರ ಬಾವಿಯಿಂದ

ಸಿಂದಗಿ ರಸ್ತೆಯಲ್ಲಿರುವ ಮಲ್ಲಯ್ಯನ ದೇವಸ್ಥಾನ ಹತ್ತಿರ ಇರುವ ಹಳ್ಳದ ನೀರು ಸರಾಗವಾಗಿ ಹರಿದು ಹೋಗದೆ ಸಂಗ್ರಹವಾಗಿದೆ. ಸಿಂದಗಿ ರಸ್ತೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳು ತುಂಬಿ ಹರಿಯುತ್ತಿವೆ. ವಠಾರ ಸುತ್ತಮುತ್ತ ಪರದೇಶಿ ಮಠ, ಸದಯ್ಯಮಠಕ್ಕೆ ಹೋಗುವ ದಾರಿ ಹತ್ತಿರ, ವಡ್ಡರ ಓಣಿ ಹನುಮಾನ ದೇವಸ್ಥಾನ ಹತ್ತಿರ, ಶಾಲೆಯ ಅಕ್ಕಪಕ್ಕದ ರಸ್ತೆ, ಪ್ರತಿ ಸೋಮವಾರ ದನದ ಸಂತೆ ಘನತ್ಯಾಜ್ಯದ ರಾಶಿ ಅನೈರ್ಮಲ್ಯದ ಕೂಪವಾಗಿದೆ.

ಹಲವು ಬಡಾವಣೆಯ ಕೆಲವು ಓಣಿಗಳಲ್ಲಿ ಗಟಾರ ಜನವಸತಿ ಇರುವ ಪ್ರದೇಶದಲ್ಲಿ ಕೆಟ್ಟ ವಾಸನೆ ರಾಚುತ್ತದೆ. ಈ ಕುರಿತು ಪಪಂ ಮುಖ್ಯಾಧಿಕಾರಿ ಅಪ್ರೋಜ್‌ ಅಹ್ಮದ ಪಟೇಲ್‌ ಅವರಿಗೆ ಫೋನ್ ಮಾಡಿ ಮೆಸೇಜ್ ಮಾಡಿದರೂ ಮರಳಿ ಫೋನ್ ಮಾಡದೇ ಇರುವುದು ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿ ಫೋಟೋ ಸಮೇತ ಅವರ ಗಮನಕ್ಕೆ ತರಲಾಗಿದ್ದು, ಈಗಲಾದರೂ ಸ್ಥಳೀಯ ಆಡಳಿತ ಎಚ್ಚೆತ್ತುಕೊಳ್ಳುತ್ತಾರಾ ಎನ್ನುವುದು ಕಾದು ನೋಡಬೇಕಿದೆ.

ಪಟ್ಟಣದ ಮಧ್ಯೆ ಭಾಗದಲ್ಲಿ ಹರಿಯುವ ಚರಂಡಿ ಮುಂದೆಯೇ ಮನೆಯಲ್ಲಿ ವಾಸಿಸುತ್ತಿರುವ ಭಾಗಮ್ಮ ಅಂಬಲಗಿ ಎನ್ನುವ ಗೃಹಿಣಿ ಮಳೆ ನೀರಿನ ಜೊತೆಗೆ ಚರಂಡಿ ನೀರು, ತ್ಯಾಜ್ಯದ ರಾಶಿ, ಪ್ಲಾಸ್ಟಿಕ್‌ ಎಲ್ಲವೂ ಹರಿದು ಬರುತ್ತದೆ. ಸ್ವಲ್ಪ ಮಳೆ ಜೋರಾದರೂ ಮನೆಯ ಮೆಟ್ಟಿಲುತನಕ ನೀರು ಬರುತ್ತದೆ. ಮೊದಲು ಬೇರೊಂದು ಮನೆಯಲ್ಲಿ ವಾಸವಿದ್ದಾಗ ಚರಂಡಿ ನೀರಿನದ್ದೇ ಸಮಸ್ಯೆಯಿತ್ತು. ಇಲ್ಲಿಯೂ ಅದೇ ಸಮಸ್ಯೆ ಕಾಡುತ್ತಿದೆ. ಸಂಜೆಯಾಗುತ್ತಿದ್ದಂತೆಯೇ ಮನೆಯ ಎಲ್ಲ ಕಿಟಕಿ ಹಾಗೂ ಬಾಗಿಲು ಹಾಕಲೇಬೇಕು. ಇಲ್ಲವಾದರೆ ಸೊಳ್ಳೆಗಳ ಕಾಟ ತಡೆಯಲು ಆಗಲ್ಲ ಎಂದು ಕಾಳಮ್ಮ ಬಡಿಗೇರ ಅಳಲು ತೋಡಿಕೊಂಡರು. ಮನೆಯ ಮುಂದೆಯೇ ಖಾಲಿ ನಿವೇಶನವಿದೆ. ಬೇಡವೆಂದರೂ ಜನ ಅಲ್ಲಿ ಕಸ ಚೆಲ್ಲುವುದರಿಂದ ಸಾಮಾನ್ಯ ದಿನಗಳಲ್ಲಿಯೇ ಕೆಟ್ಟ ವಾಸನೆ ತಡೆಯಲು ಆಗಲ್ಲ. ಮಳೆಗಾಲ ಬಂದರಂತೂ ಚರಂಡಿ ತುಂಬಿ ರಸ್ತೆಗೆಲ್ಲ ಕೊಳಚೆ ನೀರು ಹರಿಯುತ್ತದೆ. ಕಳೆದ ವರ್ಷ ಮಳೆಯಿಂದಾಗಿ ಬಡಾವಣೆ ಜನರಿಗೆ ಸಮಸ್ಯೆಯಾದಾಗ ಬಂದಿದ್ದ ಜನಪ್ರತಿನಿಧಿಗಳು ಮತ್ತೆ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದರು. ಅದೇ ಬಡಾವಣೆಯ ಯುವಕ ಸುಭಾಷ ಹಳ್ಳದಮನಿ ಹಾಗೂ ಸುರೇಶ ಬಿರಾದಾರ ಶಿಕ್ಷಕರು ಇದಕ್ಕೆ ಧ್ವನಿಗೂಡಿಸಿದರು.

ಆರೋಗ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ. ಮನೆಗಳಿಗೆ ನೀರು ಸಂಗ್ರಹ ತೊಟ್ಟಿಗಳ ನಿರಂತರ ಸ್ವಚ್ಛತೆ ಹಾಗೂ ಮನೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಅರಿವು ಮೂಡಿಸಿದ್ದಾರೆ. ಆದರೆ ಪಟ್ಟಣ ಪಂಚಾಯತಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹಳ್ಳದಲ್ಲಿ ನೀರಿನ ಹರಿವು ಮಾಡದೆ ಇರುವುದು ಹಾಗೂ ಘನ ತ್ಯಾಜ್ಯ ವಸ್ತು ವಿಲೇವಾರಿ ಮಾಡದಿರುವುದು ಆಡಳಿತ ಯಂತ್ರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ನೀರು ಸಂಗ್ರಹ ಆಗದ ಹಾಗೆ ಹಾಗೂ ನೀರಿನ ಹರಿವು ಮಾಡುವುದು ಘನ ತ್ಯಾಜ್ಯ ವಸ್ತು ವಿಲೇವಾರಿ ಮತ್ತು ಚರಂಡಿಗಳನ್ನು ಸ್ವಚ್ಛಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗಮಿಸಿದ್ದಾರೆ.ಪಟ್ಟಣದ ಮಧ್ಯೆ ಹಾದು ಹೋಗುವ ಹಳ್ಳ ನೀರು, ಜೆ.ಎಂ.ಜೆ ಶಾಲೆಯಿಂದ ಸಿಂದಗಿ ರಸ್ತೆಯವರೆಗೆ ಚರಂಡಿ ನೀರು ಸರಾಗವಾಗಿ ಹರಿಯುವಂತೆ, ಘನತ್ಯಾಜ್ಯ ವಸ್ತು ವಿಲೇವಾರಿ ಮಾಡುವುದು ಹಾಗೂ ಹೊಸೂರ ವಾರ್ಡುಗಳಲ್ಲಿ ಚರಂಡಿಗಳನ್ನು ಸ್ವಚ್ಛ ಮಾಡಲು ಕ್ರಮ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯತಿಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿ ಸೊಳ್ಳೆಗಳಿಂದ ಕಾಪಾಡಲು ತಿಳಿಸಿದರು ಸ್ಪಂದಿಸದೆ ಇರುವುದು ವಿಪರ್ಯಾಸ.

-ಸುಭಾಷ ಹಳ್ಳದಮನಿ. ಯುವ ಮುಖಂಡರು (ವಾರ್ಡ ನಂ-14) ದೇವರಹಿಪ್ಪರಗಿ.

ಹಳ್ಳದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯುವ ಹಾಗೆ ಕ್ರಮ ಕೈಗೊಳ್ಳುತ್ತೇವೆ. ದನದ ಸಂತೆಯ ಘನತ್ಯಾಜ್ಯ ವಸ್ತು ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಈ ಕುರಿತು ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸಮಸ್ಯೆಯ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಪಪಂ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪಟ್ಟಣದ ಎಲ್ಲ ವಾರ್ಡ್ ಗಳಲ್ಲೂ ಚರಂಡಿ ಸ್ವಚ್ಛತೆಗೆ ನಿರ್ದೇಶನ ನೀಡಲಾಗುವುದು.

-ರಮೇಶ ಮಸಿಬಿನಾಳ ಪಪಂ ಉಪಾಧ್ಯಕ್ಷರು ದೇವರಹಿಪ್ಪರಗಿ

ಪಟ್ಟಣದ ಎಲ್ಲ ಬಡಾವಣೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆದಿದೆ. ಹಳ್ಳದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯುವಂತೆ ಜೆಸಿಬಿ ಮೂಲಕ ಮಾಡಲಾಗಿದ್ದು. ಅಗತ್ಯ ಬಿದ್ದರೆ ಹಿಟಾಚಿ ಮೂಲಕ ಸ್ವಚ್ಛಗೊಳಿಸುವ ಕೆಲಸ ಮಾಡುತ್ತೇವೆ. ಪಟ್ಟಣದ ಜನರು ಸಹಕಾರ ನೀಡಬೇಕು. ಪಟ್ಟಣದ ಸ್ವಚ್ಛತೆಗೆ ಪ.ಪಂ ಸಿಬ್ಬಂದಿ ವರ್ಗ ಯಾವಾಗಲೂ ಸಿದ್ಧವಾಗಿರುತ್ತಾರೆ.

-ಅಪ್ರೋಜ ಅಹ್ಮದ್ ಪಟೇಲ್.ಪ.ಪಂ ಮುಖ್ಯಾಧಿಕಾರಿ ದೇವರಹಿಪ್ಪರಗಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉನ್ನತ ಹುದ್ದೆಗಳಲ್ಲಿ ಶಿಕ್ಷಕ ಹುದ್ದೆ ಅತ್ಯಂತ ಶ್ರೇಷ್ಠ
ಪ್ರೊ.ಕೆ.ಎಸ್.ಭಗವಾನ್ ವಿರುದ್ಧ ಠಾಣೆಗೆ ದೂರು