ಕನ್ನಡಪ್ರಭ ವಾರ್ತೆ ಕೆ.ಆರ್.ಪುರ
ನೀರಿನ ಮಿತ ಬಳಕೆ ಹಾಗೂ ಉಳಿವಿಗಾಗಿ ಜಾಗೃತಿ ಜಾಥಾ ಮತ್ತು ಜನರ ಸಮಸ್ಯೆ ನಿವಾರಿಸಲು ಜನಸ್ಪಂದನ ಕಾರ್ಯಕ್ರಮವನ್ನು ಎಸ್‌ಕೆಎಫ್ ಫೌಂಡೇಶನ್ ವತಿಯಿಂದ ಮೇ 18ರಂದು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಕೆ.ಎಫ್ ಅಧ್ಯಕ್ಷೆ ಶಾಂತಾ ಕೃಷ್ಣಮೂರ್ತಿ ತಿಳಿಸಿದರು.ಕೆ.ಆರ್.ಪುರ ಕ್ಷೇತ್ರದ ರಾಮಮೂರ್ತಿನಗರ ಎನ್‌ಆರ್‌ಐ ಬಡಾವಣೆಯ ಎಸ್.ಕೆ.ಎಫ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಲಮಂಡಳಿ, ಬಿಬಿಎಂಪಿ ಹಾಗೂ ರಾಮಮೂರ್ತಿನಗರ ವಾರ್ಡಿನ ನಿವಾಸಿಗಳ ಸಹಯೋಗದೊಂದಿಗೆ ಮೇ18ರ ಶನಿವಾರ ಬೆಳಗ್ಗೆ 6.30ಕ್ಕೆ ರಾಮಮೂರ್ತಿ ನಗರ ಸಮೀಪದ ಎನ್‌ಆರ್‌ಐ ಬಡಾವಣೆಯ ಜ್ಯುಬಿಲಿ ಶಾಲೆಯಿಂದ ಜಾಗೃತಿ ಜಾಥಾ ಆರಂಭವಾಗಲಿದೆ ಎಂದರು.
ಬರಗಾಲದಿಂದ ಬೆಂಗಳೂರಿನಲ್ಲಿ ನೀರಿನ ಭವಣೆ ಉಂಟಾಗಿ ಪರದಾಡಿದ್ದನ್ನು ಪ್ರತಿಯೊಬ್ಬರೂ ಅನುಭವಿಸಿದ್ದು, ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಎಸ್‌ಕೆಎಫ್ ಸಂಸ್ಥಾಪಕ ಕಲ್ಕೆರೆ ಕೃಷ್ಣಮೂರ್ತಿ ಮಾತಮಾಡಿ, ಬೇಸಿಗೆ ಕಾಲದಲ್ಲಿ ಒಂದು ಹನಿ ನೀರು ಎಷ್ಟು ಮುಖ್ಯ ಎಂಬುದು ನಮಗೆ ಮನವರಿಕೆಯಾಗಿದೆ, ಮನೆ ಮೇಲೆ ಬಿದ್ದ ಮಳೆ ನೀರು ವ್ಯರ್ಥವಾಗಿ ಚರಂಡಿ, ಕಾಲುವೆ ಮೂಲಕ ಹರಿದು ಹೋಗದಂತೆ ನೋಡಿಕೊಳ್ಳಿ, ನೀರನ್ನು ಹಿಡಿದಿಟ್ಟುಕೊಂಡು ಮರು ಬಳಕೆ ಮಾಡಿ ಹೆಚ್ಚಿನ ನೀರನ್ನು ಮನೆಯ ಬಳಿಯೇ ಇಂಗುವಂತೆ ಮಾಡಿ ಅಂತರ್ಜಲ ವೃದ್ಧಿಸಿಕೊಳ್ಳಿ, ನೀರಿನ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ನೀರಿನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮೇ 18ರಂದು ಬೆಳಗ್ಗೆ 6.30ಕ್ಕೆ ಜಾಥಾ ಆರಂಭ ಆಗಲಿದ್ದು, ಸುಮಾರು ಐದು ಕಿ.ಮೀ ಸಾಗಲಿದೆ. ಬಳಿಕ ಜ್ಯುಬಿಲಿ ಶಾಲೆ ಬಳಿ ಬಿಡಬ್ಲ್ಯೂಎಸ್‌ಎಸ್‌ಬಿ, ಬಿಬಿಎಂಪಿ ಆಯುಕ್ತರು ಹಾಗೂ ಸ್ಥಳೀಯ ಶಾಸಕ ಬೈರತಿ ಬಸವರಾಜ ಅವರೊಂದಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಎದುರಿಸುತ್ತಿರುವ ರಸ್ತೆ, ಚರಂಡಿ, ತೆರಿಗೆ, ನೀರು, ಕಾವೇರಿ, ಯುಜಿಡಿ, ಅಕ್ರಮ ಸಕ್ರಮ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಪೃಥ್ವಿ, ಆನಂದ್, ಸುಬ್ರಮಣಿ, ಮೈಕಲ್, ಸತೀಶ್, ಹೀರೇಗೌಡ ಇದ್ದರು.