ನಾಡಿನ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಬೆಳಗ್ಗೆ ಕುಮಾರಾಧಾರಾ ನದಿಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ವೈಭವದಿಂದ ನಡೆಯಿತು. ಕ್ಷೇತ್ರ ಆನೆ ಯಶಸ್ವಿ ನೀರಾಟವಾಡಿ ಸಂಭ್ರಮಿಸಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇದಕ್ಕೆ ಸಾಕ್ಷಿಯಾದರು.
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಬೆಳಗ್ಗೆ ಪುಣ್ಯ ನದಿ ಕುಮಾರಾಧಾರಾದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು.
ದೇವಳದ ಪ್ರಧಾನ ಅರ್ಚಕ ಸೀತಾರಾಮ ಯಡಪಡಿತ್ತಾಯರು ಧಾರ್ಮಿಕ ವಿದಿವಿಧಾನ ನೆರವೇರಿಸಿದರು. ಅರ್ಚಕರಾದ ರಾಜೇಶ್ ನಡ್ಯಂತಿಲ್ಲಾಯರು ಮತ್ತು ಸತ್ಯನಾರಾಯಣ ನೂರಿತ್ತಾಯ ಸಹಕರಿಸಿದರು. ಸಹಸ್ರಾರು ಭಕ್ತರು ಪಾಲ್ಗೊಂಡರು.
ಬೆಳಗ್ಗೆ ದೇವಳದ ದ್ವಾದಶಿ ಮಂಟಪದಲ್ಲಿ ಓಕುಳಿ ಪೂಜೆ ಮತ್ತು ಓಕುಳಿ ಚೆಲ್ಲಾಟ ನೆರವೇರಿತು. ಬಳಿಕ ದೇವರಿಗೆ ಓಕುಳಿ ಸಮರ್ಪಣೆಯಾಗಿ ಭಕ್ತಾದಿಗಳಿಗೆ ಓಕುಳಿ ಪ್ರೋಕ್ಷಣೆ ಮತ್ತು ಓಕುಳಿ ಚೆಲ್ಲಾಟ ನಡೆಯಿತು. ನಂತರ ಶ್ರೀ ದೇವರ ಅವಭೃತೋತ್ಸವ ಸವಾರಿ ಹೊರಟು, ಬಿಲದ್ವಾರದ ಕಟ್ಟೆಯಲ್ಲಿ ಕಟ್ಟೆಪೂಜೆ ನೆರವೇರಿತು.
ನಂತರ ಕುಮಾರಧಾರ ನದಿಯ ಮತ್ಸ್ಯತೀರ್ಥದಲ್ಲಿ ನೌಕಾವಿಹಾರ ನಡೆಯಿತು. ಮಾವು, ಬಾಳೆ, ತಳಿರು-ತೋರಣ ಮತ್ತು ಹೂವುಗಳನ್ನೊಳಗೊಂಡು ಬಿರುದಾವಳಿಗಳಿಂದ ಸಿಂಗರಿಸಲ್ಪಟ್ಟ ಅವಳಿ ದೋಣಿಗಳನ್ನು ಒಂದಾಗಿಸಿ ಅಚ್ಚುಕಟ್ಟಾಗಿ ನಿರ್ಮಿತವಾದ ತೆಪ್ಪದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ನೌಕಾವಿಹಾರ ನೆರವೇರಿತು.
ನಂತರ ಕುಮಾರಧಾರೆಯ ಮತ್ಸ್ಯತೀರ್ಥದ ಶ್ರೀ ದೇವರ ಜಳಕದಗುಂಡಿಯಲ್ಲಿ ದೇವರ ಅವಭೃತೋತ್ಸವ ನಡೆಯಿತು. ಕ್ಷೇತ್ರ ಪುರೋಹಿತ ಮದುಸೂಧನ ಕಲ್ಲೂರಾಯ ನೇತೃತ್ವದಲ್ಲಿ ಪುರೋಹಿತರು ಮಂತ್ರಘೋಷ ನೆರವೇರಿಸಿದರು. ಪ್ರಧಾನ ಅರ್ಚಕರು ಕುಮಾರಧಾರ ಪುಣ್ಯ ತೀರ್ಥವನ್ನು ಶಂಖದಲ್ಲಿ ದೇವರಿಗೆ ಸಮರ್ಪಿಸಿದರು. ಬಳಿಕ ಸೀಯಾಭಿಷೇಕ ಸೇರಿದಂತೆ ವಿವಿಧ ವೈಧಿಕ ವಿದಿವಿಧಾನಗಳನ್ನು ನಡೆಸಿದರು. ನಂತರ ಕುಮಾರಧಾರ ಪುಣ್ಯತೀರ್ಥದಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಜಳಕ ನೆರವೇರಿತು. ನದಿ ತೀರದ ಅವಭೃತಕಟ್ಟೆಯಲ್ಲಿ ದೇವರಿಗೆ ವಿಶೇಷ ಕಟ್ಟೆಪೂಜೆ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ ಬೆಂಗಳೂರು, ಶೋಭಾ ಗಿರಿಧರ್, ಮನೋಹರ ರೈ, ಲೋಕೇಶ್ ಮುಂಡುಕಜೆ, ಬ್ರಹ್ಮರಥ ದಾನಿಗಳಲ್ಲಿ ಓರ್ವರಾದ ಉದ್ಯಮಿ ಅಜಿತ್ ಶೆಟ್ಟಿ, ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಪವನ್ ಎಂ.ಡಿ. ಮತ್ತಿತರರಿದ್ದರು.
ಕ್ಷೇತ್ರದ ಆನೆ ಯಶಸ್ವಿಯು ಎಲ್ಲರಂತೆ ತಾನೂ ಕೂಡಾ ಸ್ನಾನ ಮಾಡಿ ನೀರಾಟವಾಡಿತು.
೨೪ರಂದು ನೀರಿನಲ್ಲಿ ಬಂಡಿ ಉತ್ಸವ:
೨೪ರಂದು ಮಾರ್ಗಶಿರ ಶುದ್ಧ ದ್ವಾದಶಿಯಂದು ಕೊಪ್ಪರಿಗೆ ಇಳಿಯುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೆ ಮುಕ್ತಾಯಗೊಳ್ಳಲಿದೆ. ಈ ದಿನ ರಾತ್ರಿ ದೇವಳದ ಹೊರಾಂಗಣದಲ್ಲಿ ನೀರಿನಲ್ಲಿ ಬಂಡಿ ಉತ್ಸವ ನಡೆಯಲಿದೆ.ಅಲ್ಲದೆ ಗೋಪುರ ನಡಾವಳಿ ನೆರವೇರಲಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.