ವಿಶ್ವ ಜಲ ದಿನಅರಕಲಗೂಡು: ಜೀವ ಸಂಕುಲ ಬದುಕಲು ನೀರು ಅತ್ಯವಶ್ಯಕವಾಗಿದ್ದು ಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಜೆಎಂಎಫ್‌ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ ತಿಳಿಸಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭೂಮಿಯನ್ನು ಶೇ 78 ರಷ್ಟು ನೀರು ಆವರಿಸಿದ್ದರೂ ಇದರಲ್ಲಿ ಶೇ 97ರಷ್ಟು ಉಪಯೋಗಕ್ಕೆ ಬರುವುದಿಲ್ಲ. ಶೇ 3 ರಷ್ಟು ಮಾತ್ರ ಶುದ್ಧ ಜಲವಿದ್ದು ಇದನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.ನದಿ, ಸರೋವರ ಮುಂತಾದ ಜಲಮೂಲಗಳಲ್ಲಿ ಪ್ಲಾಸ್ಟಿಕ್ ಬಿಸಾಡುತ್ತಿರುವ ಪರಿಣಾಮ ಇದು ನೀರಿನೊಂದಿಗೆ ಸೇರಿ ಕ್ಯಾನ್ಸರ್‌ನಂತಹ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತಿದೆ. ಅಂತರ್ಜಲದ ಮಟ್ಟ ಕುಸಿಯುವಂತೆ ಮಾಡುತ್ತಿದೆ ಎಂದು ಸಮೀಕ್ಷೆಗಳ ವರದಿ ಹೇಳುತ್ತಿದೆ. ಜಲ ಮೂಲಗಳನ್ನು ರಕ್ಷಿಸಿಕೊಳ್ಳುವ ಜತೆಗೆ ಮಳೆ ಕೊಯ್ಲು, ನೀರಿನ ಮಿತ ಬಳಕೆ, ಅಂತರ್ಜಲ ಹೆಚ್ಚಿಸುವ ಕುರಿತು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಹಿರಿಯ ವಕೀಲ ಎಸ್.ಪಿ.ಜಯಪ್ಪ, ನೀರಿನ ಸಂರಕ್ಷಣೆಯ ಮಹತ್ವ ಮತ್ತು ಇದರಲ್ಲಿ ಜನರ ಪಾತ್ರ ಕುರಿತು ಉಪನ್ಯಾಸ ನೀಡಿದರು.ಪಪಂ ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಮಾತನಾಡಿ, ನೀರಿನ ಮಿತ ಬಳಕೆ ಕುರಿತು ಪಪಂ ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಿದೆ. ಪಟ್ಟಣದ ನೀರು ಸರಬರಾಜು ಯೋಜನೆಯನ್ನು ಉನ್ನತೀಕರಿಸಿ ನಲ್ಲಿಗಳಿಗೆ ಮೀಟರ್ ಅಳವಡಿಸಲು 23 ಕೋಟಿ ರು. ವೆಚ್ಚದ ಯೋಜನೆಯನ್ನು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ರೂಪಿಸಿದ್ದು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.
ಜೆಎಂಎಫ್‌ಸಿ ನ್ಯಾಯಾಧೀಶೆ ಪ್ರೀತಿ ಎಲ್.ಮಳವಳ್ಳಿ, ವಕೀಲರ ಸಂಘದ ಅಧ್ಯಕ್ಷ ಕೆ. ಆರ್.ವಿಜಯಕುಮಾರ್, ಕಾರ್ಯದರ್ಶಿ ರವಿಚಂದ್ರ, ಸರ್ಕಾರಿ ವಕೀಲ ಸತೀಶ್ ಕುಮಾರ್, ವಕೀಲ ಶಂಕರಯ್ಯ ಇದ್ದರು.ಅರಕಲಗೂಡಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮ ಉದ್ಘಾಟಿಸಿ ಜೆಎಂಎಫ್‌ಸಿ ನ್ಯಾಯಾಧೀಶ ಬಿ.ಕೆ.ನಾಗೇಶ ಮೂರ್ತಿ ಮಾತನಾಡಿದರು.