110 ಹಳ್ಳಿಗಳಿಗೆ ನೀರು ಕೊಟ್ಟ ಕ್ರೆಡಿಟ್‌ ಬಿಜೆಪಿಗೆ ಸಲ್ಲಬೇಕು: ಅಶೋಕ್‌

KannadaprabhaNewsNetwork |  
Published : Oct 17, 2024, 01:41 AM IST
ಆರ್‌.ಅಶೋಕ್‌ | Kannada Prabha

ಸಾರಾಂಶ

ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಸುತ್ತಿರುವ ಕ್ರೆಡಿಟ್‌ ಬಿಜೆಪಿಗೆ ಸಲ್ಲಬೇಕು. ಯೋಜನೆಗೆ ಹಣದ ವ್ಯವಸ್ಥೆಗೆ ಬಿಜೆಪಿ ಸರ್ಕಾರ ಅಸ್ಥೆ ವಹಿಸಿತ್ತು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯ ಕ್ರೆಡಿಟ್ ಬಿಜೆಪಿಗೆ ಸಲ್ಲಬೇಕು ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರತಿಪಾದಿಸಿದ್ದಾರೆ.

ಬುಧವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಟಿ.ಕೆ.ಹಳ್ಳಿಯಲ್ಲಿ ಇವತ್ತು ಮುಖ್ಯಮಂತ್ರಿ- ಉಪಮುಖ್ಯಮಂತ್ರಿಗಳು ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಕೊಡುವ ಯೋಜನೆಯನ್ನು ಉದ್ಘಾಟಿಸಿದ್ದಾರೆ. ತಾವೇ ಮುತುವರ್ಜಿ ವಹಿಸಿ ಹಣ ಬಿಡುಗಡೆ ಮಾಡಿ ಕ್ರಿಯಾ ಯೋಜನೆ ಮಾಡಿ ಕೆಲಸ ಅನುಷ್ಠಾನಕ್ಕೆ ತಂದಿರುವುದಾಗಿ ಜಂಬ ಕೊಚ್ಚಿಕೊಂಡಿದ್ದಾರೆ ಎಂದರು.

ಅವರು ಏನೇ ಹೇಳಿದರೂ ಸರಕಾರಿ ದಾಖಲೆಗಳು ಮಾತನಾಡುತ್ತವೆ. 2018ರ ಜ.24ರಂದು ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ₹5,500 ಕೋಟಿ ಮೊತ್ತದ ಸಾಲದ ಒಪ್ಪಂದಕ್ಕೆ ಸಹಿ ಹಾಕಿದ್ದರು. 90 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿತ್ತು. ಓರಿಯೆಂಟಲ್ ಕನ್ಸಲ್ಟೇಶನ್ ಮೊದಲಾದ ಕಂಪೆನಿಗಳಿಗೆ ಯೋಜನೆ ನಿರ್ವಹಿಸಲು ನೀಡಲಾಗಿತ್ತು ಎಂದು ವಿವರಿಸಿದರು.

ಯೋಜನೆ ಪ್ರಾರಂಭವಾದ ದಿನ 2019ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಹಣ ಪಡೆದು, ಸಾಲ ಪಡೆದು ಜಪಾನ್‌ ಕಂಪೆನಿ, ಓರಿಯೆಂಟಲ್ ಮೊದಲಾದ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಯೋಜನೆಗಳನ್ನು ಕೂಡ ಪ್ರಾರಂಭ ಮಾಡಿದ್ದೆವು ಎಂದು ತಿಳಿಸಿದರು.

ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಂತು. ನಾನು ಅದರಲ್ಲಿ ಸಚಿವನಾಗಿದ್ದೆ. ಶೇ.80ರಷ್ಟು ಕೆಲಸವನ್ನು ನಾವೇ ಮಾಡಿದ್ದು. ಅಲ್ಲಿ ನೆರೆ ಬಂದಾಗ ನಾನು, ಬೊಮ್ಮಾಯಿ ಅವರು ಭೇಟಿ ಕೊಟ್ಟಿದ್ದೆವು. ಪ್ಯಾಕೇಜ್‌ಗೆ ಡಿಪಿಆರ್ ಮಾಡಿದ್ದು ಯಾರು? ಹಣ ಹೊಂದಿಸಿ ಕೊಟ್ಟಿದ್ದು ಯಾರು? ಯಾರ ಸರ್ಕಾರದಲ್ಲಿ ಕೆಲಸ ಆರಂಭವಾಯಿತು ಎಂಬುದನ್ನೆಲ್ಲ ಮುಚ್ಚಿಟ್ಟಿದ್ದಾರೆ. ದೇವರನ್ನು ಕೂರಿಸಿದ್ದು ನಾವು. ಹೋಮ ಹವನ ಮಾಡಿದ್ದು ನಾವು. ಮಂಗಳಾರತಿ ಟೈಮಿನಲ್ಲಿ ಇವರು ಬಂದು ನಮ್ಮದು ಎಂದಿದ್ದಾರೆ ಎಂದು ಟೀಕಿಸಿದರು.

110 ಹಳ್ಳಿಗಳನ್ನು ಪಾಲಿಕೆಗೆ ನಾವೇ ಸೇರಿಸಿದ್ದು ಹೊರತು ಕಾಂಗ್ರೆಸ್ಸಿಗರು ಅಲ್ಲ. ನಾನು ಆಗ ಆರೋಗ್ಯ ಸಚಿವ ಮತ್ತು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಕನ್ನಡ ಉಳಿಯಲು, ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಾಗಬೇಕು ಎಂಬ ಉದ್ದೇಶ ಅದರ ಹಿಂದಿತ್ತು ಎಂದು ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ