ರಾಮನಗರ: ಎರಡು ದಶಕಗಳ ತರುವಾಯ ಸಾವಿರಾರು ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಮಂಚನಬೆಲೆ ಜಲಾಶಯದ ಎಡ ದಂಡೆ ಕಾಲುವೆಗೆ ನೀರು ಹರಿಸುವ ಕಾರ್ಯಕ್ಕೆ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಚನಬೆಲೆ ಜಲಾಶಯದಿಂದ ಎಡದಂಡೆ ನಾಲೆಯಿಂದ ನೀರು ಹರಿಯುವುದನ್ನು ರೈತರ ಬಹು ವರ್ಷಗಳ ಕನಸಾಗಿತ್ತು. 20 ವರ್ಷಗಳಿಂದ ನಾಲೆಯಲ್ಲಿ ನೀರು ಹರಿಸಿರಲಿಲ್ಲ. ರೈತನ ಮಗನಾಗಿ ಮತ್ತು ರೈತನಾಗಿ ಆ ಕನಸನ್ನು ಸಾಕಾರಗೊಳಿಸುವ ಕೆಲಸ ಮಾಡಿರುವುದಕ್ಕೆ ಖುಷಿ ತಂದಿದೆ ಎಂದರು.
ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಾಲೆ ನಿರ್ಮಿಸಿದ್ದರೂ ಅದರ ಪ್ರಯೋಜನ ಪಡೆಯಲಿಲ್ಲ ಎಂಬ ಕೊರಗು ನೀಗಿದ್ದು, ಇದರಿಂದ ಹೈನುಗಾರಿಕೆ, ರೇಷ್ಮೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಅಂತರ್ಜಲವೂ ವೃದ್ಧಿಯಾಗಲಿದೆ ಎಂದು ತಿಳಿಸಿದರು.ಈಗ ಎಡ ದಂಡೆ ನಾಲೆಯನ್ನು 20 ಕಿ.ಮೀ.ವರೆಗೆ ಸ್ವಚ್ಛಗೊಳಿಸಿದ್ದು, ಅಲ್ಲಿವರೆಗೂ ನೀರು ಸರಾಗವಾಗಿ ಹರಿಯಲಿದೆ. ಮುಂದಿನ 15 ದಿನದೊಳಗೆ ಬಲದಂಡೆ ನಾಲೆಯನ್ನು ದುರಸ್ತಿಗೊಳಿಸಿ ನೀರು ಬಿಡಲಾಗುವುದು. ಎಡದಂಡೆ ನಾಲೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಕೈಲಾಂಚವರೆಗೂ ನೀರು ಹರಿಯುವುದರಲ್ಲಿ ಸಂಶಯ ಇಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಈ ಕಾರ್ಯಕ್ಕೆ ಪ್ರೋತ್ಸಾಹ ನೀಡಿದರು.
ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಕಾಲುವೆ ಬಂದ್ ಮಾಡಿದ್ದು, ಅಲ್ಲಿ ಕಾಲುವೆ ಮುಂದುವರೆಸಿ ನೀರು ಹರಿಸುತ್ತೇವೆ. ಜಲಾಶಯದ ನೀರನ್ನು ಮಾಗಡಿ ಹಾಗೂ ಬಿಡದಿ ಪಟ್ಟಣಕ್ಕೂ ಕುಡಿಯುವ ಉದ್ದೇಶಕ್ಕೂ ಪೂರೈಕೆ ಮಾಡಲಾಗುತ್ತಿದೆ. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದ್ದು, ಆನಂತರ ಕಟ್ಟು ಪದ್ಧತಿಯಲ್ಲಿ ನಾಲೆಯಲ್ಲಿ ನೀರು ಹರಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.
(ಒಂದು ಫೋಟೋ ಮಾತ್ರ ಸಾಕು)
1.ಮಂಚನಬೆಲೆ ಜಲಾಶಯದಲ್ಲಿ ಎಡದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು.