ರಾಮನಗರ: ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಕೃಷಿ ಚಟುವಟಿಕೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಹೆಚ್.ಎ.ಇಕ್ಬಾಲ್ ಹುಸೇನ್ ಅವರು ಗುರುವಾರ ಅಧಿಕೃತವಾಗಿ ಪೂಜೆ ಸಲ್ಲಿಸುವ ಮೂಲಕ ಮಂಚನಬೆಲೆ ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸಿದರು.
ರೈತರ ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಶಾಸಕ ಇಕ್ಬಾಲ್ ಹುಸೇನ್ ರವರು, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿ, ಎಡದಂಡೆ ನಾಲೆ ದುರಸ್ಥಿ ಪಡಿಸಿ ನಿಯಮಾನುಸಾರ ನೀರು ಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಎಡದಂಡೆ ನಾಲೆಯ ದುರಸ್ಥಿ ಕಾರ್ಯ ಪೂರ್ಣಗೊಳಿಸಿ ನೀರು ಹರಿಸಲಾಗಿದ್ದು, ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ಜೀವಕಳೆ ಬಂದಂತಾಗಿದೆ. ನಾಲೆಯಲ್ಲಿ ಹರಿಯುತ್ತಿದ್ದ ನೀರು ಕಂಡ ರೈತರು ಶಾಸಕರು ಹಾಗೂ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ನಾಲೆಗೆ ನೀರು ಹರಿಸಿದ ಬಳಿಕ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್ , ರೈತರ ಶ್ರೇಯೋಭಿವೃದ್ಧಿ ಮತ್ತು ಕೃಷಿ ಚಟುವಟಿಕೆಗಳಿಗೆ ಬೆಂಬಲ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ಭಾಗದಲ್ಲಿ ಪ್ರವಾಸ ಕೈಗೊಂಡಾಗ ಜನರು ಎರಡು ನಾಲೆಗಳ ದುರಸ್ಥಿ ಮಾಡಿಸಿ ನೀರು ಹರಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮಾರ್ಗದರ್ಶನದಲ್ಲಿ ನಾಲೆ ದುರಸ್ಥಿ ಪಡಿಸಲಾಯಿತು ಎಂದು ಹೇಳಿದರು.ರೈತರ ಬೆಳೆಗಳಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಜಲಾಶಯದಿಂದ ಹರಿಸಲಾಗುತ್ತಿರುವ ನೀರನ್ನು ರೈತರು ಪೋಲು ಮಾಡದೆ, ಮಿತವಾಗಿ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಂತರ್ಜಲ ಮಟ್ಟ ಹೆಚ್ಚಿಸಲು ಈ ಕಾರ್ಯ ಸಹಕಾರಿಯಾಗಲಿದೆ. ಬಲದಂಡೆ ನಾಲೆಯನ್ನು ದುರಸ್ಥಿ ಪಡಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಬಾಕ್ಸ್ ................
ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ ಮತ್ತು ಕೈಲಾಂಚ ಹೋಬಳಿ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಉದ್ದೇಶದಿಂದ ಮಂಚನಬೆಲೆ ಜಲಾಶಯದ ಎಡ - ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಿಸುವ 70 ಕೋಟಿ ರು.ವೆಚ್ಚದ ಪ್ರಸ್ತಾವನೆ ಅನುಮೋದನೆಗೊಂಡಿದ್ದು, ಅನುದಾನ ಬಿಡುಗಡೆಗೊಳ್ಳುವುದಷ್ಟೇ ಬಾಕಿ ಇದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ಮಂಚನಬೆಲೆಯ ಎಡ - ಬಲ ದಂಡೆ ನಾಲೆಗಳನ್ನು ತಲಾ 32 ಕಿ.ಮೀ ಉದ್ದದಷ್ಟು ಹೊಸದಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಇದು ವಿನೂತನವಾಗಿರಲಿದೆ. ಗುರುತ್ವಾಕರ್ಷಣೆ ಮೂಲಕ ನಾಲೆಯ ಕೊನೆ ಭಾಗಕ್ಕೂ ನೀರು ಹರಿಯುವಂತೆ ಮಾಡಲಾಗುವುದು. ಇದರಿಂದ ಕಸಬಾ ಮತ್ತು ಕೈಲಾಂಚ ಹೋಬಳಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಮಂಚನಬೆಲೆ ಜಲಾಶಯದಿಂದ ಎಡದಂಡೆ ನಾಲೆಯಲ್ಲಿ ನೀರು ಹರಿಯುತ್ತಿರುವುದನ್ನು ಶಾಸಕ ಇಕ್ಬಾಲ್ ಹುಸೇನ್ ರವರು ವೀಕ್ಷಣೆ ಮಾಡಿದರು.