ಅಗತ್ಯಕ್ಕೆ ತಕ್ಕಂತೆ ಕಾಲುವೆಗಳಿಗೆ ನೀರು

KannadaprabhaNewsNetwork |  
Published : Nov 12, 2025, 03:15 AM IST
ಸವದತ್ತಿಯ ಮಲಪ್ರಭಾ ಆಣೆಕಟ್ಟೆಯಲ್ಲಿ ಶಾಸಕರಾದ ವಿಶ್ವಾಸ ವೈದ್ಯ, ಎನ್.ಎಚ್.ಕೋನರೆಡ್ಡಿ, ವಿ.ಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸದುಗೌಡ ಪಾಟೀಲ ಮತ್ತು ಇತರರು ಮಲಪ್ರಭಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ತಾಲೂಕಿನ ಶಿಂಧೋಗಿ ಭಾಗದ ರೈತರಿಗೆ ಮಲಪ್ರಭಾ ಆಣೆಕಟ್ಟೆಯಿಂದ ಸೈಪನ್ ಮೂಲಕ ರೈತರ ಜಮೀನುಗಳಿಗೆ ಪೂರೈಕೆ ಮಾಡುವ ಪೈಪ್‌ಲೈನ್ ಒಡೆದು ಹೋಗಿದ್ದು, ಅದರ ಪುನರ್ ನಿರ್ಮಾಣಕ್ಕೆ ₹ ೧೯ ಕೋಟಿಗಳ ಅನುದಾನ ಮಂಜೂರಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ವಿಳಂಬ ಮಾಡದೆ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಪ್ರಯತ್ನ ಮಾಡಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ತಾಲೂಕಿನ ಶಿಂಧೋಗಿ ಭಾಗದ ರೈತರಿಗೆ ಮಲಪ್ರಭಾ ಆಣೆಕಟ್ಟೆಯಿಂದ ಸೈಪನ್ ಮೂಲಕ ರೈತರ ಜಮೀನುಗಳಿಗೆ ಪೂರೈಕೆ ಮಾಡುವ ಪೈಪ್‌ಲೈನ್ ಒಡೆದು ಹೋಗಿದ್ದು, ಅದರ ಪುನರ್ ನಿರ್ಮಾಣಕ್ಕೆ ₹ ೧೯ ಕೋಟಿಗಳ ಅನುದಾನ ಮಂಜೂರಾಗಿದೆ. ಈ ಹಿನ್ನಲೆಯಲ್ಲಿ ಅಧಿಕಾರಿಗಳು ವಿಳಂಬ ಮಾಡದೆ ಕೂಡಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸುವ ಪ್ರಯತ್ನ ಮಾಡಬೇಕೆಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಜಲಸಂಪನ್ಮೂಲ ಇಲಾಖೆ, ನೀರಾವರಿ ನಿಗಮ ಹಾಗೂ ಮಲಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡ ಮಲಪ್ರಭಾ ನದಿಗೆ ಬಾಗಿನ ಅರ್ಪಣೆ ಮತ್ತು ಕಾಡಾ ಸಮಿತಿಯ ಎರಡನೇ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸೈಪನ್ ಒಡೆದಿರುವ ಕಾರಣ ನಾಲ್ಕು ವರ್ಷಗಳಿಂದ ಶಿಂಧೋಗಿ ಭಾಗದ ಸುಮಾರು ೫ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ರೈತರಿಗೆ ಹೆಚ್ಚಿನ ತೊಂದರೆಯಾಗಿದೆ. ಈ ಹಿನ್ನಲೆಯಲ್ಲಿ ಆ ಸಮಸ್ಯೆಯನ್ನು ಕೂಡಲೇ ಪರಿಹರಿಸುವ ಪ್ರಯತ್ನ ಮಾಡಲಾಗುವುದು. ಅಲ್ಲದೇ, ಬಸಿಡೋಣಿ ಮತ್ತು ಶಿರಸಂಗಿ ಭಾಗದ ಕಾಲುವೆಗಳ ದುರಸ್ತಿ ಮಾಡುವ ಕಾರ್ಯ ಯೋಜನೆಯನ್ನು ರೂಪಿಸಲಾಗಿದೆ. ಈಗಾಗಲೇ ಅಬ್ಬರದ ಮಳೆಯಿಂದ ಮಲಪ್ರಭಾ ನದಿಯು ಸಂಪೂರ್ಣ ಭರ್ತಿಯಾಗಿದ್ದು, ಹಿಂಗಾರಿ ಹಂಗಾಮಿಗೆ ರೈತರ ಜಮೀನುಗಳಿಗೆ ಅವಶ್ಯಕತೆಗೆ ತಕ್ಕಂತೆ ಕಾಲುವೆಗಳಿಗೆ ನೀರನ್ನು ಬಿಡಲಾಗುತ್ತಿದೆ ಎಂದು ಹೇಳಿದರು.ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಸುತ್ತಲಿನ ನಾಲ್ಕು ಜಿಲ್ಲೆಗಳಿಗೆ ಮಲಪ್ರಭೆಯು ಜೀವನದಿಯಾಗಿದೆ. ಕಳಸಾ ಮತ್ತು ಬಂಡೂರಿ ನಾಲೆಗಳಿಂದ ಬರಬೇಕಾದ ೭.೩೬ ಟಿಎಮ್‌ಸಿ ನೀರನ್ನು ಪಡೆದುಕೊಳ್ಳಲು ನಾವು ಪಕ್ಷಾತೀತವಾಗಿ ಹೋರಾಟ ನಡೆಸಬೇಕಿದೆ ಎಂಬುದನ್ನು ತಿಳಿಸಿದರು.

ಬಲದಂಡೆಯ ೧೪೨ ಕಿ.ಮೀ ಕಾಲುವೆ ವ್ಯಾಪ್ತಿಯಲ್ಲಿ ೧,೨೧,೨೯೨ ಹೆಕ್ಟೇರ್‌ ಪ್ರದೇಶ ಬರುತ್ತಿದೆ. ಎಡ ದಂಡೆಯ ೧೫೦ ಕಿ.ಮೀ ಕಾಲುವೆ ವ್ಯಾಪ್ತಿಯಲ್ಲಿ ೪೭,೭೬೯ ಹೆಕ್ಟೇರ್ ಹಾಗೂ ಏತ ನೀರಾವರಿಯಲ್ಲಿ ೨೬,೯೭೧ ಹೆಕ್ಟೇರ್ ಪ್ರದೇಶ ಸೇರಿದಂತೆ ಒಟ್ಟು ೧,೯೬,೧೩೨ ಹೆಕ್ಟೇರ ಪ್ರದೇಶವು ನೀರಾವರಿ ಪ್ರದೇಶವಾಗಿರುವುದರಿಂದ ನಮಗೆ ಕಳಸಾ -ಬಂಡೂರಿ ನಾಲಾ ಜೋಡಣೆಯ ಕಾರ್ಯವೂ ಅತ್ಯವಶ್ಯವಾಗಿದೆ. ಕೇಂದ್ರದ ಅನುಮತಿಗೋಸ್ಕರ ಸಮಯ ಕಾಯಲಾಗುತ್ತಿದೆ ಎಂದರು.ಈ ವೇಳೆ ಮಲಪ್ರಭಾ ಆಣೆಕಟ್ಟೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಮಲಪ್ರಭ ನದಿಗೆ ಬಾಗಿನ ಅರ್ಪಣೆ ಮಾಡಲಾಯಿತು. ಮಹಾಮಂಡಳದ ಅಧ್ಯಕ್ಷ ಸದುಗೌಡ ಪಾಟೀಲ, ಕಾಡಾ ಅಧ್ಯಕ್ಷ ಯುವರಾಜ ಕದಮ, ಸಿ.ಪಿ.ಬಾಳಿ, ಡಿ.ಡಿ.ಟೋಪೋಜಿ, ಚಂದ್ರು ಜಂಬ್ರಿ, ಸುಪ್ರಿಟೆಂಡೆಂಟ್ ಇಂಜನಿಯರ್‌ ಸುಭಾಸ ನಾಯಕ, ಸಹಾಯಕ ಅಭಿಯಂತರ ಲಕ್ಷ್ಮಣ ನಾಯಕ, ಸುರೇಶ ಬಡಗಿಗೌಡರ, ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ ಹಾಗೂ ರೈತರು ಉಪಸ್ಥಿತರಿದ್ದರು. ಕೋಟ್‌

ಮಲಪ್ರಭಾ ನದಿಯಿಂದ ಬಿಟ್ಟಿರುವ ನೀರನ್ನು ರೈತರು ಸದ್ಭಳಕೆ ಮಾಡಿಕೊಳ್ಳಬೇಕು. ರೈತರಿಗೆ ಅನಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಲದಂಡೆ ಕಾಲುವೆ ಮೂಲಕ ಸದ್ಯಕ್ಕೆ ನೀರನ್ನು ಬಿಡಲಾಗುತ್ತಿದೆ. ಕೆಲವು ಭಾಗಗಳ ರೈತರ ಜಮೀನುಗಳಲ್ಲಿ ಕಬ್ಬು ಕಟಾವಿಗೆ ಬಂದಿದೆ. ಕಬ್ಬು ಕಟಾವು ಮುಗಿದ ನಂತರ ಆ ಭಾಗದಲ್ಲಿನ ಕಾಲುವೆಗಳಲ್ಲಿ ನೀರು ಬಿಡಲಾಗುತ್ತದೆ. ಕಬ್ಬು ಬೆಳೆದ ರೈತರು ಆದಷ್ಟು ಬೇಗನೆ ಕಬ್ಬು ಕಟಾವು ಮಾಡಿಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಸಾಧ್ಯವಾದ ಮಟ್ಟಿಗೆ ಹೆಚ್ಚಿನ ಗ್ಯಾಂಗ್‌ಗಳನ್ನು ನಾವು ವ್ಯವಸ್ಥೆ ಮಾಡಿಕೊಡುತ್ತೇವೆ.ಚನ್ನರಾಜ ಹಟ್ಟಿಹೊಳಿ, ವಿ.ಪ ಸದಸ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ