ಜಗಳೂರು: ಬರಪಡೀತ ಜಗಳೂರು ತಾಲೂಕಿನ ೫೭ ಕೆರೆಗಳ ತುಂಬಿಸುವ ತುಂಗಭದ್ರಾ ಏತ ನೀರಾವರಿ ಯೋಜನೆ ಕಳೆದ ವರ್ಷದಿಂದಲೇ ಆರಂಭವಾಗಿದ್ದು, ಈ ವರ್ಷವೂ ಕೆರೆಗಳಿಗೆ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಬೆಳಗ್ಗೆಯಿಂದಲೇ ಚಾಲನೆ ನೀಡಲಾಗಿದೆ. ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ನೀರು ಹರಿಯುವುದನ್ನು ಪರಿಶೀಲಿಸಿದ್ದು, ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ.
ಹರಿಹರದ ತುಂಗಭದ್ರಾ ನದಿಯ ನೀರಿನ ಹರಿವು ಹೆಚ್ವಿರುವ ಕಾರಣ ದೀಟೂರಿನ ಜಾಕ್‌ವೆಲ್‌ನಿಂದ ಪೈಪ್‌ಲೈನ್ ಮೂಲಕ ಈಗಾಗಲೇ ೩ ಮೋಟಾರ್‌ಗಳು ಪ್ರಾಯೋಗಿಕವಾಗಿ ರನ್ ಆಗುತ್ತಿದ್ದಿವೆ. ಚಟ್ನಳ್ಳಿ ಗಡ್ಡದ ರೈಸಿಂಗ್ ಮೇನ್ ನೀರು ಲಿಫ್ಟ್ ಆಗಿ ಮೊದಲಿಗೆ ತುಪ್ಪದಹಳ್ಳಿ ಕೆರೆಗೆ ಡಂಪ್ ಮಾಡಲಾಯಿತು. ಶನಿವಾರ ಬೆಳಗ್ಗೆ ಮುಷ್ಠಿಗರಹಳ್ಳಿ ದೊಡ್ಡಕೆರೆ, ಸಣ್ಣಕೆರೆ, ಮೆದಗಿನಕೆರೆ, ಜಗಳೂರು, ಕೊಡದಗುಡ್ಡ, ಅಸಗೋಡು, ಬಿಳಿಚೋಡು, ಗೋಡೆ, ತಾರೇಹಳ್ಳಿ, ಹಿರೇಅರಕೆರೆ ಸೇರಿದಂತೆ ಅನೇಕ ಗ್ರಾಮಗಳ ಕೆರೆಗಳಿಗೆ ನೀರು ಹರಿಯುತ್ತಿದೆ.ಎಇ ಆನಂದ್ ಮಾತನಾಡಿ, ತುಂಗಭದ್ರಾ ನದಿಯಿಂದ ಜಗಳೂರು ತಾಲೂಕಿನ ಕಟ್ಟಕಡೆಯ ಕೆರೆಗಳಿಗೆ ನೀರು ಹರಿಸುವ ಒಟ್ಟು ೨೫೦ ಕಿ.ಮೀ ದೂರವಿದ್ದು ನೀರು ಹರಿಯಲು ಸಮಯ ಬೇಕಾಗುತ್ತದೆ. ಯಾರೋ ಕಿಡಿಗೇಡಿಗಳು ಚಿಕ್ಕಅರಕೆರೆ ಕೆರೆಯ ವಾಲ್ವ್ ಕಿತ್ತು ಹೋಗಿದ್ದರಿಂದ ಆ ಕೆರೆಗೆ ನೀರು ಸ್ಥಗಿತಗೊಳಿಸಲಾಗಿದೆ. ದುರಸ್ತಿ ನಂತರ ನೀರು ಹರಿಸಲಾಗುವುದು. ಜುಲೈ ೧ರಿಂದ ಎಲ್ಲಾ ೫೩ ಕೆರೆಗಳಿಗೆ ನೀರು ಹರಿಸಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಕನ್ನಡಪ್ರಭಕ್ಕೆ ತಿಳಿಸಿದರು.
ನೀರಾವರಿ ನಿಗಮದ ಎಇಇ ಶ್ರೀಧರ್ ಮಾತನಾಡಿ, ಆರು ತಿಂಗಳು ಮೋಟಾರ್‌ಗಳು ರನ್ ಆಗದಿರುವ ಕಾರಣ ಮೋಟಾರ್‌ಗಳ ಸಾಧಕ- ಬಾಧಕಗಳನ್ನು ತಂತ್ರಜ್ಞರಿಂದ ಪರಿಶೀಲಿಸಿದ ನಂತರ ಒಂದೊಂದೇ ಮೋಟಾರ್‌ಗಳನ್ನು ಆನ್ ಮಾಡುತ್ತಿದ್ದೇವೆ. ಎಲ್ಲ ಮೋಟಾರ್‌ಗಳನ್ನು ಒಮ್ಮೆಲೆ ಆನ್ ಮಾಡಿದರೆ ಪೈಪ್‌ಗಳು ಒಡೆದು ಹೋಗುವ ಸಂದರ್ಭ ಬಂದರೆ ಕಷ್ಟವಾಗುತ್ತದೆ. ಹೀಗಾಗಿ ಪರಿಸ್ಥಿತಿ ಅವಲೋಕಿಸಿ ಪ್ರತಿ ಗ್ರಾಮದ ಕೆರೆಗಳಿಗೆ ಭೇಟಿ ನೀಡಿ, ಮೋಟಾರ್ ಆನ್ ಮಾಡಲು ಸೂಚನೆ ನೀಡುತ್ತಿದ್ದೇವೆ ಎಂದು ತಿಳಿಸಿದರು.- - -
-30ಜೆಎಲ್ಆರ್ಚಿತ್ರ2:ಜಗಳೂರು ತಾಲೂಕಿನ ತುಪ್ಪದಹಳ್ಳಿಕೆರೆ ನೀರು ಹರಿಯುತ್ತಿರುವುದನ್ನು ಕರ್ನಾಟಕ ನೀರಾವರಿ ನಿಗಮದ ಎಂಜಿನಿಯರ್‌ಗಳು ಪರಿಶೀಲಿಸಿದರು.