ಎರಡನೇ ಬೆಳೆಗೂ ನೀರು: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Sep 23, 2024, 01:24 AM IST
22ಕೆಪಿಎಲ್24 ಮುನಿರಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ  ಸಿದ್ದರಾಮಯ್ಯ  ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವುದು. | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಮುರಿದ 19ನೇ ಕ್ರಸ್ಟ್ ಗೇಟ್ ದುರಸ್ತಿ ಮಾಡಿದ ಮೇಲೆ ಸಂಪೂರ್ಣ ಭರ್ತಿಯಾಗಿದೆ. ಇನ್ನು ಮಳೆಯ ಬರುವ ವಿಶ್ವಾಸ ಇರುವುದರಿಂದ ಈ ಬಾರಿ ಎರಡನೇ ಬೆಳೆಗೂ ನೀರು ನೀಡಲಾಗುವುದು.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಶ್ರಮಿಸಿದವರಿಗೆ ಸನ್ಮಾನ ಸಮಾರಂಭಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯದ ಮುರಿದ 19ನೇ ಕ್ರಸ್ಟ್ ಗೇಟ್ ದುರಸ್ತಿ ಮಾಡಿದ ಮೇಲೆ ಸಂಪೂರ್ಣ ಭರ್ತಿಯಾಗಿದೆ. ಇನ್ನು ಮಳೆಯ ಬರುವ ವಿಶ್ವಾಸ ಇರುವುದರಿಂದ ಈ ಬಾರಿ ಎರಡನೇ ಬೆಳೆಗೂ ನೀರು ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ಮುನಿರಾಬಾದ್ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ದುರಸ್ತಿಗೆ ಶ್ರಮಿಸಿದವರಿಗೆ ಸನ್ಮಾನ ಮಾಡಿ ಅವರು ಮಾತನಾಡಿದರು.

ಗೇಟ್ ಮುರಿದು ಹೋಗಿದ್ದರೂ ಕೇವಲ ವಾರದಲ್ಲಿ ದುರಸ್ತಿ ಮಾಡಿದ್ದರಿಂದ ಸುಮಾರು 20 ಟಿಎಂಸಿ ನೀರು ಉಳಿಸಿದ್ದಾರೆ. ಹೀಗಾಗಿ, ನಾನು ಕನ್ನಯ್ಯ ನಾಯ್ಡು ಸೇರಿದಂತೆ ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಳೆದ ವರ್ಷ ಮಳೆಯ ಅಭಾವದಿಂದ ನೀರಿನ ಸಮಸ್ಯೆಯಾಗಿತ್ತು. ಆದರೆ, ಈ ವರ್ಷ ಮಳೆ ಬಂದಿದ್ದರೂ ಕ್ರಸ್ಟ್ ಗೇಟ್ ಕೊಚ್ಚಿಕೊಂಡು ಹೋಗಿ, ನೀರು ಪೋಲಾಗಿದ್ದರಿಂದ ಆತಂಕಗೊಂಡಿದ್ದರು. ಈ ವರ್ಷವೂ ಬೆಳೆಗೆ ನೀರು ಇಲ್ಲದಾಗುತ್ತದೆ ಎಂದು ಚಿಂತೆಗೀಡಾಗಿದ್ದರು.

ಆದರೆ, ನಮ್ಮ ಸಚಿವರಾದ ಶಿವರಾಜ ತಂಗಡಗಿ, ಜಮೀರ್ ಅಹ್ಮದ್ ಹಗಲು ರಾತ್ರಿ ಶ್ರಮಿಸಿ, ತಜ್ಞರೊಂದಿಗೆ ನಿರಂತರವಾಗಿ ಚರ್ಚೆ ಮಾಡಿ, ಸಮಸ್ಯೆ ನೀಗಿಸಿ, ನೀರು ಉಳಿಸಿ, ಸ್ಟಾಪ್ ಲಾಗ್ ಗೇಟ್‌ ಅಳವಡಿಸಿ, ರೈತರ ಚಿಂತೆ ದೂರ ಮಾಡಿದ್ದಾರೆ. ಪರಿಣಾಮ ಜಲಾಶಯದಲ್ಲಿ ಈಗ ಬರೋಬ್ಬರಿ 101 ಟಿಎಂಸಿ ನೀರು ಇರುವಂತೆ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಇನ್ನು ಕೂಡಾ ಮಳೆಗಾಲ ಇರುವುದರಿಂದ ಜಲಾಶಯ ಹಿಂಗಾರು ಅವಧಿಗೂ ಮತ್ತೊಮ್ಮೆ ಭರ್ತಿಯಾಗುವ ವಿಶ್ವಾಸದೊಂದಿಗೆ ಹೇಳುತ್ತೇನೆ, ಎರಡನೇ ಬೆಳೆಗೂ ನೀರು ಕೊಡುತ್ತೇವೆ ಎಂದರು.ನಿರ್ವಹಣೆ:

ಜಲಾಶಯಗಳ ಗೇಟ್‌ಗಳನ್ನು ಪ್ರತಿ 50 ವರ್ಷಕ್ಕೊಮ್ಮೆ ಬದಲಾಯಿಸಬೇಕು. ಆದರೆ, ತುಂಗಭದ್ರಾ ಜಲಾಶಯಕ್ಕೆ 68-70 ವರ್ಷವಾಗಿದ್ದರೂ ಬದಲಾಯಿಸಿಲ್ಲ. ಆದರೆ, ಉತ್ತಮ ನಿರ್ವಹಣೆ ಇರುವುದರಿಂದ ಕ್ರಸ್ಟ್ ಗೇಟ್‌ಗಳು ಏನೂ ಆಗಿಲ್ಲ. ಈಗ 19ನೇ ಕ್ರಸ್ಟ್ ಗೇಟ್ ಮುರಿದಿದ್ದರಿಂದ ಸಮಸ್ಯೆಯಾಗಿದ್ದು, ಇದನ್ನು ತಜ್ಞರ ಸಮಿತಿ ಸಲಹೆಯಂತೆ ಬದಲಾಯಿಸಲಾಗುವುದು ಎಂದರು.

ಗೇಟ್ ಮುರಿದಾಗ ವಿರೋಧಪಕ್ಷಗಳು ಬಾಯಿಗೆ ಬಂದಂತೆ ಮಾತನಾಡಿದರು. ಸರ್ಕಾರದ ನಿರ್ಲಕ್ಷ್ಯದಿಂದ ಹೀಗಾಗಿದೆ, ನೀರು ಅಷ್ಟು ಪೋಲಾಗುತ್ತದೆ ಎಂದೆಲ್ಲ ಟೀಕಿಸಿದ್ದರು. ಆದರೆ, ನಾವು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ದುರಸ್ತಿ ಮಾಡಿಸುವ ಮೂಲಕ ಉತ್ತರ ನೀಡಿದ್ದೇವೆ ಎಂದರು.

ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕೆಲಸವಾಗಿದೆ. ಹೀಗಾಗಿ, ನೀವು ಅವರ ಮಾತು ಕೇಳಬೇಡಿ ಎಂದರಲ್ಲದೆ, ನೀವು ಕೇಳುವುದಿಲ್ಲ ಬಿಡಿ, ಕಲ್ಯಾಣ ಕರ್ನಾಟಕ ಭಾಗದವರು ಐದು ಎಂಪಿ ಕ್ಷೇತ್ರದಲ್ಲಿ ಕಾಂಗ್ರೆಸ್ಸನ್ನೆ ಗೆಲ್ಲಿಸಿ, ಆಶೀರ್ವಾದ ಮಾಡಿದ್ದೀರಿ ಎಂದರು.

371 ಜಾರಿ ಮಾಡಲು ಎಸ್.ಎಂ. ಕೃಷ್ಣ ಕೇಂದ್ರಕ್ಕೆ ಪತ್ರ ಬರೆದಾಗ, ಆಗಿನ ಗೃಹ ಸಚಿವ ಎಲ್.ಕೆ. ಆಡ್ವಾಣಿ ಆಗುವುದಿಲ್ಲ ಎಂದು ಪತ್ರ ಬರೆದಿದ್ದರು. ಆದರೆ, ಪ್ರಧಾನಿ ಮನಮೋಹನ ಸಿಂಗ್ ಜಾರಿ ಮಾಡಿದರು. ಈಗ ನಾವು ಕಲ್ಯಾಣ ಕರ್ನಾಟಕ ಭಾಗಕ್ಕೆ ₹5 ಸಾವಿರ ಕೋಟಿ ನೀಡಿದ್ದೇವೆ, ಕೇಂದ್ರದವರು ವಿಶೇಷ ಅನುದಾನವಾಗಿ ₹ 5 ಸಾವಿರ ಕೋಟಿ ನೀಡಲಿ ಎಂದು ಆಗ್ರಹಿಸಿದರು.ಲೆಕ್ಕ ಆಗಲಿಲ್ಲ ಪಕ್ಕಾ:

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಆಗುವ ನೀರಾವರಿ ಪ್ರದೇಶದ ಲೆಕ್ಕವನ್ನು ಹೇಳಲು ಮುಂದಾದ ಸಿಎಂ ಸಿದ್ದರಾಮಯ್ಯ ಅವರಿವರಿಂದ ಮಾಹಿತಿ ಪಡೆಯಲು ಮುಂದಾದಾಗ ವೇದಿಕೆಯಲ್ಲಿ ಗೊಂದಲವಾಯಿತು. ಸಚಿವರು, ಶಾಸಕರು ಹೇಳುವ ಲೆಕ್ಕವೂ ತಾಳೆಯಾಗದೆ ಇದ್ದಾಗ ಸಿದ್ದರಾಮಯ್ಯ ಗರಂ ಆದರು. ಅಯ್ಯಾ, ನಡೀರಿ ಆ ಕಡೆ, ನಾನು ಹೇಳುವುದೇ ಸರಿಯಾಗಿದೆ ಎಂದರು.

ಇದಾದ ಮೇಲೆಯೂ ಅವರು ತಾವೂ ಹೇಳುತ್ತಲೇ ಅತ್ತಿತ್ತ ನೋಡುತ್ತಿದ್ದಾಗ ಅಧಿಕಾರಿಯೋರ್ವರು ಹೇಳಿದ ಲೆಕ್ಕವೂ ತಾಳೆಯಾಗಲೇ ಇಲ್ಲ. ಆಗ ಕೊನೆಗೆ ರಾಜ್ಯದ ವ್ಯಾಪ್ತಿಯಲ್ಲಿ 9.26 ಸಾವಿರ ಎಕರೆ ನೀರಾವರಿಯಾಗುತ್ತಿದ್ದರೆ ಆಂಧ್ರ ವ್ಯಾಪ್ತಿಯಲ್ಲಿ 6.75 ಸಾವಿರ ಎಕರೆ ಹಾಗೂ ತೆಲಂಗಾಣ ವ್ಯಾಪ್ತಿಯಲ್ಲಿ 87 ಸಾವಿರ ಎಕರೆ ನೀರಾವರಿಯಾಗುತ್ತದೆ ಎಂದು ಘೋಷಣೆ ಮಾಡಿದರು. ಅಷ್ಟಕ್ಕೆ ಸುಮ್ಮನಾಗದ ಅವರು, ಇದನ್ನು ನನಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಹಾಗೊಂದು ವೇಳೆ ಇದು ತಪ್ಪಾದರೆ ಖಂಡಿತವಾಗಿಯೂ ಅವರ ಮೇಲೆ ಕ್ರಮವಹಿಸುತ್ತೇನೆ ಎಂದು ವೇದಿಕೆಯಲ್ಲಿಯೇ ಖಡಕ್ ಎಚ್ಚರಿಕೆ ನೀಡಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ