ತೆಲಂಗಾಣಕ್ಕೆ ನೀರು, ರಾಜ್ಯ ರೈತರ ಕಣ್ಣೀರು

KannadaprabhaNewsNetwork |  
Published : Oct 19, 2026, 01:15 AM IST
ಭಾರತೀಯ ಕೃಷಿಕ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷರಾದ ಮಲ್ಲಣ್ಣಗೌಡ ಹಗರಟಗಿ ನೇತೃತ್ವದಲ್ಲಿ ರೈತ ಮುಖಂಡರುಗಳು ಭಾನುವಾರ ಜಿಲ್ಲೆಯ ವಡಗೇರಾ ತಾಲೂಕಿನ ಗುರ್ಜಾಪುರ ಬ್ಯಾರೇಜ್ ಹಾಗೂ ಸಂಗಮನ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಹರಿಸಲಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದನ್ನು ಬಂದ್ ಮಾಡದಿದ್ದರೆ ನಾರಾಯಣಪುರ ಡ್ಯಾಂಗೆ ಮುತ್ತಿಗೆ ಹಾಕುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ. | Kannada Prabha

ಸಾರಾಂಶ

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಸಮೀಪದ ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಹರಿಸಲಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದನ್ನು ಬಂದ್ ಮಾಡದಿದ್ದರೆ ನಾರಾಯಣಪುರ ಡ್ಯಾಂಗೆ ಮುತ್ತಿಗೆ ಹಾಕುವುದಾಗಿ ಭಾರತೀಯ ಕೃಷಿಕ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಸಮೀಪದ ಬಸವಸಾಗರ ಡ್ಯಾಂನಿಂದ ತೆಲಂಗಾಣಕ್ಕೆ ನೀರು ಹರಿಸಲಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದನ್ನು ಬಂದ್ ಮಾಡದಿದ್ದರೆ ನಾರಾಯಣಪುರ ಡ್ಯಾಂಗೆ ಮುತ್ತಿಗೆ ಹಾಕುವುದಾಗಿ ಭಾರತೀಯ ಕೃಷಿಕ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಎಚ್ಚರಿಸಿದರು.

ಭಾನುವಾರ ಜಿಲ್ಲೆಯ ವಡಗೇರಾ ತಾಲೂಕಿನ ಗುರ್ಜಾಪುರ ಬ್ಯಾರೇಜ್ ಹಾಗೂ ಸಂಗಮನ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ಗುರ್ಜಾಪುರ ಬ್ಯಾರೇಜ್ ನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ತೆಲಂಗಾಣಕ್ಕೆ ಹರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಕೊನೆಭಾಗದ ರೈತರಿಗೆ ನೀರು ತಲುಪದೆ ಬೆಳೆ ಒಣಗುತ್ತಿದೆ. ಮಳೆ ಕೊರತೆಯಿಂದ ಡ್ಯಾಂ ನೀರು ಸಂಗ್ರಹ ಮಾಡಿ ರಾಜ್ಯದ ರೈತರಿಗೆ ಹಾಗೂ ಕುಡಿಯುವ ನೀರಿಗಾಗಿ ಪ್ರಾಮುಖ್ಯತೆ ನೀಡಬೇಕು. ಆದರೆ, ಕಾಲುವೆಗೆ ಸರಿಯಾಗಿ ರೈತರ ನಿರೀಕ್ಷೆ ತಕ್ಕಂತೆ ಹರಿಸದೇ ಸರ್ಕಾರ ತೆಲಂಗಾಣದ ಹಿತ ಕಾಪಾಡುತ್ತಿದೆ ಎಂದು ಹಗರಟಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಗಮದಿಂದ ತೆಲಂಗಾಣ ಗಡಿಭಾಗ ಸ್ವಲ್ಪ ದೂರದಲ್ಲಿದ್ದು, ನೀರು ತೆಲಂಗಾಣಕ್ಕೆ ಹೋಗುತ್ತಿದೆ. ಅಧಿಕಾರಿಗಳು ತೆಲಂಗಾಣಕ್ಕೆ ನೀರು ಹರಿಸುತ್ತಿಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ. ಆದರೆ, ನೀರು ಹೆಚ್ಚಿನ ಪ್ರಮಾಣದಲ್ಲಿ ತೆಲಂಗಾಣಕ್ಕೆ ಸೇರುತ್ತಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.

ಈ ವೇಳೆ ಜಿಲ್ಲಾ ಕಾರ್ಯಧ್ಯಕ್ಷ ಶಿವಶರಣಪ್ಪ ಸಾಹುಕಾರ್, ಬಸಯ್ಯ ಶಿವಪುರ, ಸೈದಪ್ಪ ಶಿವಪೂರ, ಶಿವು, ಶ್ರೀನಿವಾಸ ಕಲಾಲ್, ಶರಣಪ್ಪ ಬಟಗೇರಿ, ಸುರೇಶ್ ಮಡಿವಾಳ, ಮಲ್ಲು ಅಗ್ನಿ, ಸುರೇಶ್ ಗೌಡ ಮಾಲಿಪಾಟೀಲ, ಸಿದ್ದಲಿಂಗಗೌಡ, ಬಸವರಾಜ ಭಾಗಪ್ಪನೋರ್, ನರಸಪ್ಪ, ಬಾಬು ಕಾಡ್ಲುರು ಇದ್ದರು.

ನೀರಿಗಾಗಿ ಯಾದಗಿರಿ ರೈತರು ಹೋರಾಟ ಮಾಡುತ್ತಿದ್ದರೆ, ನಾರಾಯಣಪುರ ಡ್ಯಾಂನಿಂದ ನೀರು ತೆಲಂಗಾಣಕ್ಕೆ ಹರಿಸಲಾಗುತ್ತಿದೆ. ತೆಲಂಗಾಣಕ್ಕೆ ನೀರು ಹರಿಸುವದು ಬಂದ್ ಮಾಡದಿದ್ದರೆ ನಾರಾಯಣಪುರ ಡ್ಯಾಂ ಮುತ್ತಿಗೆ ಹಾಕಲಾಗುತ್ತದೆ ಎಂದು ಭಾರತೀಯ ಕೃಷಿಕ ಸಮಾಜದ ರಾಜ್ಯ ಕಾರ್ಯಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಹೇಳಿದರು.

ಸಚಿವರಿಗೆ ರಾಜೂಗೌಡ ಮನವಿ ಸಲ್ಲಿಕ: ತಾಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ವಾರಾಬಂದಿ ಪದ್ಧತಿಯನ್ನು ರದ್ದು, ನವೆಂಬರ್ 15 ವರೆಗೆ ಸತತವಾಗಿ ಕಾಲುವೆಗಳಿಗೆ ನಿರಂತರ ನೀರು ಹರಿಸಬೇಕಂದು ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಅವರು ಜಲ ಸಂಪನ್ಮೂಲ ಸಚಿವ ಎನ್.ಚಲುವನಾರಾಯಣಸ್ವಾಮಿಗೆ ಮನವಿ ಮಾಡಿ ಒತ್ತಾಯಿಸಿದರು.

ನಾರಾಯಣಪುರ ಬಸವಸಾಗರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಗೆ ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸಲು ಕೃಷ್ಣಾ ಭಾಗ್ಯ ಜಲ ನಿಗಮಿದ ನೀರಾವರಿ ಸಲಹಾ ಸಮಿತಿ ಅ.15 ರಂದು ನಡೆದ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ 10 ದಿನ ಚಾಲು, 8 ದಿನ ಬಂದ್. ಹಾಗೆಯೇ, ನವೆಂಬರ್ 12 ರವರೆಗೆ ನೀರು ಹರಿಸಲು ಕ್ರಮ ಕೈಗೊಂಡಿದ್ದು ಆವೈಜ್ಞಾನಿಕವಾಗಿದೆ. ಈ ಕಾಲುವೆಗಳ ವ್ಯಾಪ್ತಿಯಲ್ಲಿ ಮಳೆ ಬರದಿರುವ ಕಾರಣ, ಕಾಲುವೆಗಳ ಕೊನೆಭಾಗದ ರೈತರ ಬೆಳೆಗಳಿಗೆ ನೀರಿನ ಪ್ರಮಾಣ ಬಹಳ ಬೇಡಿಕೆ ಇದೆ ಎಂದರು.

ಈಗಾಗಲೇ ಕಾಲುವೆಯ ವ್ಯಾಪ್ತಿಯ ಬೆಳೆಗಳಾದ ಭತ್ತ, ಶೇಂಗಾ, ಸೂರ್ಯಪಾನ, ಸಜ್ಜಿ, ಹತ್ತಿ, ಮೆಣಸಿನಕಾಯಿ ಮುಂತಾದ ಈ ಅನೇಕ ಬೆಳೆಗಳು ಹೂ ಗಳ ಬಿಡುವ ಹಂತದಲ್ಲಿದ್ದು, ಭತ್ತ ಕಾಳು ಕಟ್ಟುವ ಹಂತದಲ್ಲಿದೆ. ಸದ್ಯ ಕಾಲುವೆಗೆ ವಾರಾ ಪದ್ಧತಿಯಲ್ಲಿ ನೀರು ಹರಿಸಿದರೆ ಕಾಲುವೆಗಳ ಕೊನೆ ಭಾಗದ ರೈತರಿಗೆ ನೀರು ತಲುಪದೇ ಇದರಿಂದ ಲಕ್ಷಾಂತರ ರುಪಾಯಿಯ ಬೆಳೆಗಳು ಹಾನಿಯಾಗುತ್ತವೆ. ಆದ್ದರಿಂದ, ಕೂಡಲೇ ವಾರಾಬಂದಿ ಪದ್ಧತಿಯನ್ನು ರದ್ದುಪಡಿಸಿ, ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನ.15 ವರೆಗೆ ನಿರಂತರ ನೀರು ಹರಿಸಿ ರೈತರಿಗೆ ಆಗುವ ಹಾನಿ ತಡೆಯಬೇಕಾಗಿದೆ. ಒಂದು ವೇಳೆ ತಾವು ಶೀಘ್ರವೇ ಕಾಲುವೆಗಳಿಗೆ ನಿರಂತರ ನೀರು ಹರಿಸಲು ಕ್ರಮ ಕೈಗೊಳ್ಳದೆ ಹೊದರೆ ರೈತರೊಂದಿಗೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜೂಗೌಡ ಎಚ್ಚರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅರಸೀಕೆರೆಯಲ್ಲಿ ಬೀದಿ ವ್ಯಾಪಾರದ ವಿಚಾರಕ್ಕೆ ಗಲಾಟೆ
ಗ್ಯಾರಂಟಿಗಾಗಿ ರೈತರ ಸಾಲಮನ್ನಾ, ಹಳೇ ಪಿಂಚಣಿ ಜಾರಿಯಿಲ್ಲ: ಬಿಕೆ ಹರಿಪ್ರಸಾದ್‌