ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು 4 ಗ್ರಾಮಗಳಲ್ಲಿ ₹1.10 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ
ಬೆಳವಾಡಿ ಕೆರೆಗೂ ಎತ್ತಿನಹೊಳೆಯ ಪೈಪ್ ಲೈನ್ ಮೂಲಕ ನೀರು ಹರಿಸಲು ಮುಖ್ಯಮಂತ್ರಿ ನೀರಾವರಿ ಇಲಾಖೆಗೆ ನಿರ್ದೇಶಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಸಖರಾಯಪಟ್ಟಣ, ಜೋಡಿ ಹೋಚಿಹಳ್ಳಿ, ನಾಗರಾಳು, ಚಿಕ್ಕದೇವನೂರು ನಾಲ್ಕು ಗ್ರಾಮಗಳಲ್ಲಿ ₹1.10 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿ ನಮ್ಮದು ಕೃಷಿ ನಂಬಿ ಬದುಕುತ್ತಿರುವ ದೇಶವಾಗಿದೆ. ಈ ಬಾರಿ ಉತ್ತಮ ಮಳೆಯಾಗಿಲ್ಲ. ಮಳೆಗಾಗಿ ದೇವರಲ್ಲಿ ಪ್ರಾರ್ಥಿಸಬೇಕಾಗಿದೆ. ರೈತರು ಕೆರೆ ತುಂಬಿಸಲು ಹೇಳಿದ್ದರು. ಬೆಳವಾಡಿ, ಮಾಚೇನಹಳ್ಳಿ, ಕುರುಬರಹಳ್ಳಿ ಕೆರೆಗಳು ಮಳೆ ಬಂದಾಗ ಮಾತ್ರ ಈ ಹಿಂದೆ ತುಂಬಿವೆ. ಎತ್ತಿನಹೊಳೆ ಯೋಜನೆ ಮೂಲಕ ಹಳೇಬೀಡು ಕೆರೆ ತುಂಬಿಸಲಾಗಿದೆ. ಬೆಳವಾಡಿ ಕೆರೆಗೂ ನೀರು ಹರಿಸಬೇಕೆಂದು ಮುಖ್ಯಮಂತ್ರಿಯಿಂದ ನೀರಾವರಿ ಇಲಾಖೆಗೆ ಸೂಚನೆ ಕೊಡಿಸಲಾಗಿದೆ ಎಂದು ತಿಳಿಸಿದರು.ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹50 ಕೋಟಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ನೀಡಿದ್ದರು. ಈ ಅನುದಾನದಲ್ಲಿ ಗ್ರಾಮೀಣ ಭಾಗದ ರಸ್ತೆಗಳಿಗೆ ₹10 ಕೋಟಿ ನೀಡಿ ಇದೀಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.
ಬಸವೇಶ್ವರಸ್ವಾಮಿ ದೇವಸ್ಥಾನ, ಯಲ್ಲಮ್ಮ ದೇವಸ್ಥಾನ, ರಂಗನಾಥ ಸ್ವಾಮಿ ದೇವಾಲಯದ ಯಾತ್ರಿ ನಿವಾಸಕ್ಕೆ ಅನುದಾನ ಕೊಡಲಾಗಿದೆ. ದೇವಾಲಯ, ಸಮುದಾಯ ಭವನಗಳಿಗೂ ಹಣ ನೀಡಲಾಗಿದೆ. ರಸ್ತೆಗೂ ಕೊಡಲಾಗಿದೆ. ಮಸೀದಿಗೆ ₹೨೦ ಲಕ್ಷ ನೀಡಲಾಗಿದೆ. ಹಳೆ ಹಟ್ಟಿ ದೇವಸ್ಥಾನಕ್ಕೆ ₹೧೦ ಲಕ್ಷ ನೀಡುವ ಮೂಲಕ ಅಭಿವೃದ್ಧಿ, ಜನರ ಬದುಕು ಮತ್ತು ದೇವರ ಮೇಲಿರುವ ಭಕ್ತಿಯಿಂದ ಹೆಚ್ಚು ಅನುದಾನ ನೀಡಲಾಗಿದೆ ಎಂದರು.
----ಬಾಕ್ಸ್---
ಚುನಾವಣೆ ನಡೆಯುವಾಗ ಒಂದು ಪಕ್ಷದ ಅಭ್ಯರ್ಥಿಯಾಗಿದ್ದೆ. ಗೆದ್ದ ಮೇಲೆ ಈ ಕ್ಷೇತ್ರದ ಶಾಸಕನಾಗಿದ್ದೇನೆ. ಹಾಗಾಗಿ, ಯಾವತ್ತು ಜಾತಿ - ಪಕ್ಷ ಬೇಧ ಮಾಡದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಸಿಕ್ಕಿರುವ ಈ ಒಂದು ಅವಕಾಶವನ್ನು ಎಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡಿದ್ದೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.