ಸೋಮರಡ್ಡಿ ಅಳವಂಡಿ
ತುಂಗಭದ್ರಾ ಜಲಾಶಯದ ಹೂಳು ಎತ್ತುವುದನ್ನು ಕೈಚಲ್ಲಿದ್ದಾಯಿತು. ಸಮಾನಾಂತರ ಜಲಾಶಯಗಳ ನಿರ್ಮಾಣ ಮರೆತದ್ದು ಆಯಿತು. ಈಗ ನವಲಿ ಸಮಾನಾಂತರ ಜಲಾಶಯಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಒಂದೆಡೆಯಾದರೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹನಿ ನೀರು ಕೊಪ್ಪಳ ಜಿಲ್ಲೆಯಲ್ಲಿ ಬಳಕೆಯಾಗುತ್ತಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಈಗ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳೇ ಸವೆದಿರುವುದು ಸಂಕಷ್ಟ ತಂದಿದೆ. ಹೀಗಾಗಿ, ನದಿ ನೀರು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು ರೈತರು ಆತಂಕಕ್ಕೆ ಕಾರಣವಾಗಿದೆ. ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆದು 15 ತಿಂಗಳ ಗಡುವು ನೀಡಲಾಗಿದೆ. ಅಂದರೆ ಅದು ಮುಗಿಯುವುದು ಮುಂದಿನ ವರ್ಷವೇ. ಆದರೆ, ಹೂಳು ತುಂಬಿದ್ದರಿಂದ ವ್ಯರ್ಥವಾಗಿ ಹೋಗುವ ನೀರು ಬಳಕೆ ಮಾಡಿಕೊಳ್ಳುವ ಯಾವೊಂದು ಯೋಜನೆಗಳು ಸಹ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿಲ್ಲ.
ತುಂಗಭದ್ರಾ ಜಲಾಶಯದಲ್ಲಿ ಬರೋಬ್ಬರಿ 28ರಿಂದ 30 ಟಿಎಂಸಿ ಹೂಳು ತುಂಬಿದೆ. ಇದಕ್ಕೆ ಪರ್ಯಾಯವಾಗಿ ಸಮಾನಾಂತರ ಜಲಾಶಯ ನಿರ್ಮಿಸುವ ಯೋಜನೆ 50 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗ ಇದಕ್ಕೆ ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರ ಡಿಪಿಆರ್ ಮಾಡಿದೆ. ಆದರೆ, ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಸಮ್ಮತಿ ಇನ್ನೂ ದೊರೆತಿಲ್ಲ. ಹೀಗಾಗಿ, ಯೋಜನೆ ನನೆಗುದಿಗೆ ಬಿದ್ದಿದೆ.ಈ ನಡುವೆ ನವಲಿ ಸಮಾನಾಂತರ ಜಲಾಶಯ ನಿರ್ಮಿಸಬೇಕೆಂದು ಕೆಲವರು ಹೇಳಿದರೆ, ಇನ್ನು ಕೆಲವರು ಈ ಜಲಾಶಯ ನಿರ್ಮಿಸಿದರೆ ರೈತರ ಭೂಮಿ ದೊಡ್ಡ ಪ್ರಮಾಣದಲ್ಲಿ ಮುಳುಗಡೆಯಾಗುತ್ತದೆ. ಹೀಗಾಗಿ, ಬೇಡ ಎನ್ನುವವರು ಇದ್ದಾರೆ. ಚಿಕ್ಕ ಚಿಕ್ಕ ಸಮಾನಾಂತರ ಜಲಾಶಯ ನಿರ್ಮಿಸಿದರೆ ಭೂಮಿ ಮುಳುಗಡೆ ಸಮಸ್ಯೆ ಇರುವುದಿಲ್ಲ ಎನ್ನುವುದು ಕೆಲವರ ವಾದ.
ಇದೇ ತುಂಗಭದ್ರಾ ನದಿಗೆ ಸಿಂಗಟಾಲೂರು ಬಳಿ ಏತನೀರಾವರಿ ಯೋಜನೆ ನಿರ್ಮಿಸಿದ್ದು ಲೋಕಾರ್ಪಣೆ ಮಾಡಿ 13 ವರ್ಷಗಳೇ ಕಳೆದಿವೆ. ಆದರೂ ಇದರ ಎಡಭಾಗದಲ್ಲಿ ಈ ವರೆಗೂ ನೀರಾವರಿಯಾಗಿಲ್ಲ. ಅದರಲ್ಲೂ ಕೊಪ್ಪಳ ಜಿಲ್ಲೆಯಲ್ಲಿ ಒಂದು ಹನಿ ನೀರು ಸಹ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಈ ನೀರು ಸಹ ವ್ಯರ್ಥವಾಗಿ ಹರಿದು ಹೋಗುತ್ತಿದೆ.
ಸರ್ಕಾರದ ಬೇಜವಾಬ್ದಾರಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಸರಾಸರಿ 150 ಟಿಎಂಸಿ ನೀರು ವ್ಯರ್ಥವಾಗುತ್ತದೆ. ಇದನ್ನು ಬಳಸಿಕೊಳ್ಳಲು ಹತ್ತು ಹಲವು ಯೋಜನೆಗಳು ಇದ್ದರೂ ಕಾರ್ಯಗತವಾಗದೆ ಇರುವುದು ಮಾತ್ರ ಸೋಜಿಗತ ಸಂಗತಿಯಾಗಿದೆ.ತುಂಗಭದ್ರಾ ನದಿಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ. ಇದರ ಪರಿಣಾಮ ಪ್ರತಿ ವರ್ಷ ನೂರಾರು ಟಿಎಂಸಿ ನೀರು ಹರಿದು ಹೋಗುತ್ತದೆ.ತಿಪ್ಪೇರುದ್ರಸ್ವಾಮಿ ಮಾಜಿ ಅಧ್ಯಕ್ಷ ಕಾಡಾ ತುಂಗಭದ್ರಾ