ಕನ್ನಡಪ್ರಭ ವಾರ್ತೆ ಯಾದಗಿರಿ
ಬೆಳಗಾವಿ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಮಂಗಳವಾರ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಪ್ರಸ್ತಾಪಿಸಿದ್ದ ಯಾದಗಿರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ವಿಷಯಗಳು ಸದ್ದುಗದ್ದಲದಲ್ಲಿ ಮುಳಗಿದ್ದ ಸದನವನ್ನು ಕೆಲಕಾಲ ಗಂಭೀರಕ್ಕೆ ಕರೆದೊಯ್ದಿತ್ತು.
ಮಾಜಿ ಶಾಸಕ, ಜೆಡಿಎಸ್ ಹಿರಿಯ ನಾಯಕ ನಾಗನಗೌಡ ಕಂದಕೂರು ಪುತ್ರ ಶರಣಗೌಡ ಕಂದಕೂರು, ಜಿಲ್ಲೆಯ ಸಮಸ್ಯಗಳ ಬಗ್ಗೆ ಮಾತನಾಡಿ ಗಮನ ಸೆಳೆದರಲ್ಲದೆ, ಪಕ್ಷಾತೀತ ಪರಿಹಾರಕ್ಕೆ ಆಗ್ರಹಿಸಿದರು. ಯಾದಗಿರಿ ಅನ್ನೋ ಜಿಲ್ಲೆಯೂ ಒಂದಿದೆ.ಉತ್ತರ ಕರ್ನಾಟಕ ಅಂದರೆ, ಹುಬ್ಬಳ್ಳಿ, ಧಾರವಾಡ, ವಿಜಯಪುರ ಮುಂತಾದವು ಅಷ್ಟೇ ಅಲ್ಲ, ರಾಜ್ಯದಲ್ಲಿ ಯಾದಗಿರಿ ಅನ್ನೋ ಜಿಲ್ಲೆಯೂ ಒಂದಿದೆ ಎನ್ನುವ ಮೂಲಕ ಆರಂಭದಲ್ಲೇ ಗಮನ ಸೆಳೆದ ಶಾಸಕ ಕಂದಕೂರು, ಜಿಲ್ಲೆಯ ಜನ-ಜೀವನ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲುವ ಯತ್ನ ನಡೆಸಿದರು.
ಗುರುಮಠಕಲ್ ಮತಕ್ಷೇತ್ರದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆಂದು ಸರ್ಕಾರ ಈ ಹಿಂದೆ 3 ಸಾವಿರಕ್ಕೂ ಹೆಚ್ಚು ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು, ಅಲ್ಲಿ ರಾಸಾಯನಿಕ ಕಾರ್ಖಾನೆಗಳ ಮೂಲಕ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಮಧ್ಯೆ, ಮತ್ತೇ ಹೊಸ ಯೋಜನೆಗಾಗಿ ಹೆಚ್ಚುವರಿಯಾಗಿ ಮತ್ತೆ 3300 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮೊದಲ ಹಂತದಲ್ಲೇ ಇನ್ನೂ ಪೂರ್ಣಗೊಂಡಿಲ್ಲ. ಹೀಗಾಗಿ ಮತ್ತೆ ಸಾವಿರಾರು ಎಕರೆ ಸ್ವಾಧೀನಕ್ಕೆ ಮುಂದಾಗಿರುವುದನ್ನು ಕೈಬಿಡುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಹೆಚ್ಚುವರಿ ಸ್ವಾಧೀನಪಡಿಸಿಕೊಂಡ ಜಮೀನು ರೈತರಿಗೆ ವಾಪಸ್ ನೀಡಿ, ಇಲ್ಲವಾದಲ್ಲಿ ಅಲ್ಲಿ ತೋಟಗಾರಿಕೆ ವಿವಿ ಸ್ಥಾಪಿಸಿ ರೈತರ ಬದುಕು ಹಸನಾಗಿಸಿ, ಇಸ್ರೇಲ್ ಮಾದರಿ ಕೃಷಿಗೆ ಇಲ್ಲಿ ಉತ್ತೇಜನ ನೀಡಿದರೆ ಒಳ್ಳೆಯದು ಎಂದರು.
ಶಾಲೆಗಳಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ..!
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ:
ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಮಂಗವಾರ ಬೆಳಗಾವಿ ಅಧಿವೇಶನದಲ್ಲಿ ಮಾತನಾಡಿದರು.