ಕನ್ನಡಪ್ರಭ ವಾರ್ತೆ, ದಾವಣಗೆರೆ ನೀರು ಕೇವಲ ಸಂಪನ್ಮೂಲವಲ್ಲ. ಅದು ಇಡೀ ಜೀವಸಂಕುಲದ ಜೀವಾಮೃತ. ಆದ್ದರಿಂದ ನೀರಿನ ಬಳಕೆ ಕುರಿತಂತೆ ಎಚ್ಚರಿಕೆ ವಹಿಸಬೇಕು. ಜವಾಬ್ದಾರಿಯಿಂದ ನೀರನ್ನು ಬಳಸಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಡಿಎಲ್‌ಎಸ್‌ಎ ಅಧ್ಯಕ್ಷೆ ರಾಜೇಶ್ವರಿ ಎನ್. ಹೆಗಡೆ ಅಭಿಪ್ರಾಯಪಟ್ಟರು.
ಭೂಮಿಯಲ್ಲಿನ ಅಂತರ್ಜಲ ಕುಸಿಯುತ್ತಿದ್ದು, ಪ್ರತಿಯೊಬ್ಬರು ಅಂತರ್ಜಲ ರಕ್ಷನೆಗೆ ಮುಂದಾಗಬೇಕು. ಮುಂದಿನ ಪೀಳಿಗೆಗೆ ನಾವು ನೀರಿನ ಮೂಲಗಳನ್ನು ಉಳಿಸಿಬೇಕಾಗಿದೆ. ಮಳೆನೀರು ಮರುಪೂರಣದಿಂದ ಅಂತರ್ಜಲ ಹೆಚ್ಚಾಗುವಂತೆ ಮಾಡಬೇಕಾಗಿದೆ. ಜಾಗತಿಕ ಹವಾಮಾನ ಬದಲಾವಣೆಯಿಂದ ಕುಡಿಯುವ ನೀರಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ನೀರಿನ ಬಳಕೆ ಕುರಿತಂತೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಎಲ್.ಎಚ್. ಅರುಣ್‌ಕುಮಾರ್ ಅಧ್ಯಕ್ಷತೆ ವಹಿಸಿ, ವಕೀಲರು ಸಾಮಾಜಿಕ ಶಿಲ್ಪಿಗಳು. ಸಮಾಜದ ಎಲ್ಲ ಸ್ತರಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಜನಾಂಗೀಯ ಹತ್ಯೆ, ಇಂಧನಗಳ ಮೂಲಗಳಿಗಾಗಿ ಯುದ್ಧ ನಡೆದಿದೆ. ಮುಂಬರುವ ದಿನಗಳಲ್ಲಿ ನೀರಿಗಾಗಿಯೇ ಯುದ್ಧ ನಡೆಯುವ ಕಾಲ ದೂರವಿಲ್ಲ. ಹೀಗಾಗಿ, ನಮ್ಮ ನೀರಿನ ಮೂಲಗಳನ್ನು ಉಳಿಸೋಣ ಎಂದು ಸಲಹೆ ನೀಡಿದರು.1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ವಿ. ವಿಜಯಾನಂದ ಮಾತನಾಡಿ, ಮದುವೆ ಸೇರಿದಂತೆ ಇನ್ನಿತರೆ ಸಮಾರಂಭಗಳಲ್ಲಿ ನೀರನ್ನು ಪೋಲು ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಜಾಗೃತಿ ಮೂಡಿಸಬೇಕು ಎಂದರು.
ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಶ್ರೀಪಾದ, ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶ ದಶರಥ, 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣಕುಮಾರ್, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಸಿಜೆಎಂ ಶಿವಪ್ಪ ಗಂಗಪ್ಪ ಸಲಗರೆ, ಹಿರಿಯ ಸಿವಿಲ್ ನ್ಯಾಯಾಧೀಶ, ಡಿಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅನಿಲ್ ಬಿಹಾರಿ ಇತರರು ಇದ್ದರು.
- - - -22ಕೆಡಿವಿಜಿ36ಃ