ವಿಶೇಷ ವರದಿ
ನೀರಾವರಿ ಸಲಹಾ ಸಮಿತಿ ಸಭೆ ನಡೆದು ನಾಲ್ಕು ದಿನ ಕಳೆದರೂ ಕೆಆರ್‌ಎಸ್ ಜಲಾಶಯದಿಂದ ನಾಲೆಗಳಿಗೆ ನೀರು ಹರಿಯದ ಹಿನ್ನೆಲೆಯಲ್ಲಿ ಎಲ್ಲೆಡೆ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಷ್ಟು ದಿನಗಳವರೆಗೆ ಮೌನವಾಗಿದ್ದ ಜೆಡಿಎಸ್ ಪಕ್ಷದ ನಾಯಕರು ಹೋರಾಟಕ್ಕಿಳಿದಿದ್ದಾರೆ. ಇನ್ನೆರಡು ದಿನದಲ್ಲಿ ನಾಲೆಗಳಿಗೆ ನೀರು ಹರಿಸದಿದ್ದರೆ ಕೆಆರ್‌ಎಸ್ ಮುತ್ತಿಗೆ ಹಾಕುವ ಎಚ್ಚರಿಕೆಯನ್ನು ಬಿಜೆಪಿ ಹಾಕಿದೆ. ಇದರ ನಡುವೆ ರಾಜ್ಯ ಸರ್ಕಾರ ಮಾತ್ರ ನೀರು ಬಿಡುಗಡೆ ವಿಷಯದಲ್ಲಿ ತುಟಿಬಿಚ್ಚದೆ ಮೌನಕ್ಕೆ ಶರಣಾಗಿರುವುದು ರೈತರನ್ನು ಕಂಗೆಡಿಸಿದೆ.
ಜಿಲ್ಲೆಯ ೩೭೩೧೭ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಇದೆ. ಈ ಬೆಳೆಯನ್ನು ರಕ್ಷಣೆ ಮಾಡಬೇಕಾದರೆ ಸುಮಾರು ೯ ಟಿಎಂಸಿ ನೀರಿನ ಅಗತ್ಯವಿರುವುದಾಗಿ ನೀರಾವರಿ ಅಧಿಕಾರಿಗಳು ತಿಳಿಸಿದ್ದಾರೆ. ೯ ರಿಂದ ೧೨ ತಿಂಗಳ ಕಬ್ಬು ೨೪೪೭೬ ಹೆಕ್ಟೇರ್‌ನಲ್ಲಿದ್ದು, ಈ ಕಬ್ಬು ಶೇ.೪೦ ರಿಂದ ೬೦ರಷ್ಟು ಒಣಗಿಹೋಗಿದೆ. ಈ ಕಬ್ಬು ಬೆಳೆಯನ್ನು ರಕ್ಷಿಸಲು ೧೫ ದಿನ ನೀರು ಹರಿಸಿದರೆ ೫ ಟಿಎಂಸಿ ನೀರಿನ ಅಗತ್ಯವಿದೆ. ಈ ನೀರನ್ನು ಹರಿಸಿದರೂ ಬೆಳೆಯನ್ನು ಉಳಿಸಿಕೊಳ್ಳುವುದು ಕಷ್ಟವಿದೆ. ಹಾಗಾಗಿ ನೀರು ಹರಿಸಿದರೂ ಪ್ರಯೋಜನವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.ಪ್ರಸ್ತುತ ಕೃಷ್ಣರಾಜಸಾಗರ ಜಲಾಶಯದಲ್ಲಿ 92.54 ಅಡಿಯವರೆಗೆ ನೀರು ಸಂಗ್ರಹವಿದೆ. ಜಲಾಶಯಕ್ಕೆ 3685 ಕ್ಯುಸೆಕ್ ಒಳಹರಿವು ದಾಖಲಾಗಿದೆ. ನಾಲ್ಕು ದಿನಗಳ ಹಿಂದೆ ೧೨ ಸಾವಿರಕ್ಕೂ ಹೆಚ್ಚು ಇದ್ದ ಒಳಹರಿವು ಮಳೆ ಕೊರತೆಯಿಂದ ಕ್ಷೀಣಿಸಿದೆ. ಇದರ ನಡುವೆ ತಮಿಳುನಾಡಿಗೆ ನೀರು ಹರಿಸಬೇಕಾದ ಅನಿವಾರ್ಯತೆಯೂ ಇದೆ. ಕುಡಿಯುವ ನೀರು ಪೂರೈಕೆಗೂ ನೀರನ್ನು ಮೀಸಲಿಡಬೇಕಿರುವುದರಿಂದ ಇವೆಲ್ಲವನ್ನೂ ಸರ್ಕಾರ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಅಳೆದು ತೂಗಿ ನೋಡುತ್ತಿದ್ದಾರೆ.
ಜು.೧೦ರಂದು ನೀರಾವರಿ ಸಲಹಾ ಸಮಿತಿ ನಡೆದ ಬಳಿಕ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಾಲೆಗಳಿಗೆ ನೀರು ಹರಿಸುವ ನಿರ್ಧಾರ ಮಾಡುವುದಾಗಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೆಷ್ಟು ಅಷ್ಟೇ. ಆ ನಂತರದಲ್ಲಿ ಸಿಎಂ ಜೊತೆ ಮಾತನಾಡಿದರೋ ಇಲ್ಲವೋ ಗೊತ್ತಿಲ್ಲ. ನೀರು ಬಿಡುಗಡೆ ವಿಚಾರದಲ್ಲೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಟಿಬಿಚ್ಚದೆ ಮೌನವಾಗಿದ್ದಾರೆ.
ಕೆಆರ್‌ಎಸ್‌ನಲ್ಲಿ ೭೭ ಅಡಿ ಇದ್ದ ಸಮಯದಲ್ಲೂ ಬೆಳೆಗಳಿಗೆ ನೀರು ಹರಿಸಿರುವ ದಾಖಲೆಗಳಿವೆ. ಈಗ ೯೨ ಅಡಿ ಮೇಲೆ ನೀರಿದ್ದರೂ ನೀರು ಹರಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲವೇಕೆ ಎನ್ನುವುದು ವಿಪಕ್ಷಗಳ ಪ್ರಶ್ನೆಯಾಗಿದೆ. ಕೆಆರ್‌ಎಸ್ ಅಣೆಕಟ್ಟೆ ಇರುವುದು ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವುದಕ್ಕಲ್ಲ. ಕೃಷಿಗೆ ನೀರು ಕೊಡುವುದಕ್ಕೆ. ಕುಡಿಯುವ ನೀರಿಗೆ ಆರನೇ ಹಂತದವರೆಗೆ ಯೋಜನೆ ರೂಪಿಸಿ ಕೃಷಿಗೆ ನೀರು ಸಿಗದಂತೆ ಮಾಡಲಾಗುತ್ತಿದೆ ಎಂಬ ಆರೋಪ ರೈತಸಮುದಾಯದಿಂದ ಕೇಳಿಬರುತ್ತಿದೆ.
ಅತಿ ಹೆಚ್ಚು ಮಳೆ ಸುರಿದಾಗ ಅದನ್ನು ಹಿಡಿದಿಡುವಲ್ಲಿ ವಿಫಲವಾಗುವ ರಾಜ್ಯ ಸರ್ಕಾರ, ಮಳೆ ಬಾರದಿದ್ದಾಗ ಲೆಕ್ಕ ಹಾಕುತ್ತಾ ಕೂರುವುದು ಹಿಂದಿನಿಂದಲೂ ಬೆಳೆದುಬಂದಿರುವ ಸಂಪ್ರದಾಯ. ಮಳೆ ಕೊರತೆಯಾದಾಗ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ನೀತಿಪಾಠ ಹೇಳುವ ಸರ್ಕಾರ, ಹೆಚ್ಚುವರಿ ನೀರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ, ಅಂತರ್ಜಲ ರೂಪಿಸುವುದಕ್ಕೆ ಪರ್ಯಾಯ ಯೋಜನೆಗಳನ್ನು ರೂಪಿಸುತ್ತಿಲ್ಲವೇಕೆ ಎನ್ನುವುದು ರೈತರ ಪ್ರಶ್ನೆಯಾಗಿದೆ.ಕೆಆರ್‌ಎಸ್ ನೀರಿನ ಮಟ್ಟ
ಇಂದಿನ ಮಟ್ಟ - 92.54 ಅಡಿ
ಹೊರಹರಿವು -623 ಕ್ಯುಸೆಕ್