ಗದಗ: ನಗರದ ಹೃದಯ ಭಾಗದಲ್ಲಿರುವ ಜವಳಿ ಗಲ್ಲಿಯ ರಾಜಕಾಲುವೆಯು ನಾಗರಿಕರ ಪಾಲಿಗೆ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಒಂದೆಡೆ ಚರಂಡಿ ನೀರಿನಲ್ಲೇ ಕುಡಿಯುವ ನೀರಿನ ಪೈಪ್‌ಲೈನ್ ಹರಿಯುತ್ತಿದ್ದರೆ, ಮತ್ತೊಂದೆಡೆ ಮುಖ್ಯ ರಸ್ತೆಯೇ ಕುಸಿಯುವ ಹಂತದಲ್ಲಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ದುರ್ದೈವದ ಸಂಗತಿ.ತುಂಗಭದ್ರಾ ನದಿಯಿಂದ ಸರಬರಾಜಾಗುವ ಕುಡಿಯುವ ನೀರಿನ ಪೈಪ್‌ಲೈನ್ ಅನ್ನು ಜವಳಿಗಲ್ಲಿಯ ರಾಜಕಾಲುವೆಯ ಕೊಳಚೆಯಲ್ಲೇ ಇದೆ. ಈ ಪೈಪ್ ಮೇಲೆ ಟನ್‌ಗಟ್ಟಲೆ ಪ್ಲಾಸ್ಟಿಕ್ ಹಾಗೂ ಘನತ್ಯಾಜ್ಯ ಹೂತು ಹೋಗಿದೆ. ಪೈಪ್‌ನಲ್ಲಿ ಸಣ್ಣ ಬಿರುಕು ಕಂಡುಬಂದರೂ ವಿಷಕಾರಿ ಚರಂಡಿ ನೀರು ನೇರವಾಗಿ ಡೋರಗಲ್ಲಿ, ಹೊಂಬಳನಾಕಾ, ಜನತಾ ಕಾಲನಿ, ಮ್ಯಾಗೇರಿ ಓಣಿ ಮತ್ತು ಅಂಬೇಡ್ಕರ್ ನಗರದ ನಿವಾಸಿಗಳ ಹೊಟ್ಟೆ ಸೇರುತ್ತದೆ. ಇದು ಕಾಲರಾ, ಟೈಫಾಯಿಡನಂಥ ರೋಗಗಳಿಗೆ ಮುಕ್ತ ಆಹ್ವಾನ ನೀಡಿದಂತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಕಾಲುವೆಯ ಪಕ್ಕದಲ್ಲೇ ಕೋಳಿ ಮಾರುಕಟ್ಟೆ ಇದ್ದು, ಅಲ್ಲಿನ ತ್ಯಾಜ್ಯವನ್ನು(ಕೊಳೆತ ಮಾಂಸ ಮತ್ತು ರಕ್ತ) ನೇರವಾಗಿ ಕುಡಿಯುವ ನೀರಿನ ಪೈಪ್‌ಲೈನ್ ಮೇಲೆಯೇ ಎಸೆಯಲಾಗುತ್ತಿದೆ. ಇದರಿಂದ ಇಡೀ ಪ್ರದೇಶ ನರಕಸದೃಶವಾಗಿದ್ದು, ದುರ್ವಾಸನೆಯಿಂದಾಗಿ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.
ಉಗ್ರ ಹೋರಾಟ: ರಾಜಕಾಲುವೆಯ ಕೊಳಚೆ ಮತ್ತು ಕೋಳಿ ಮಾಂಸದ ತ್ಯಾಜ್ಯದ ರಾಶಿಯಲ್ಲೇ ಕುಡಿಯುವ ನೀರಿನ ಪೈಪಲೈನ್ ಹೂತು ಹೋಗಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಇತ್ತ ಸಿಸಿ ರಸ್ತೆಯೂ ಅಡಿಪಾಯವಿಲ್ಲದೆ ಕುಸಿಯುವ ಹಂತದಲ್ಲಿದೆ. ಕೂಡಲೇ ಪೈಪ್‌ಲೈನ್ ಸ್ಥಳಾಂತರಿಸಿ, ರಸ್ತೆ ದುರಸ್ತಿ ಮಾಡಬೇಕು. ಇಲ್ಲದಿದ್ದರೆ ನಗರಸಭೆಯ ಮುಂದೆ ಉಗ್ರ ಹೋರಾಟ ಅನಿವಾರ್ಯ ಎಂದು ಸಾಮಾಜಿಕ ಕಾರ್ಯಕರ್ತರಾದ ಕೃಷ್ಣ ಎಚ್. ಹಡಪದ ಎಚ್ಚರಿಸಿದರು.