ಶಿವಕುಮಾರ ಕುಷ್ಟಗಿ
15 ದಿನಗಳಿಗೊಮ್ಮೆ ನೀರು: ಗದಗ- ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವುದು ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್‌ನಿಂದ. ಪ್ರಸ್ತುತ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಬ್ಯಾರೇಜ್‌ನಲ್ಲಿ ಬೇಸಿಗೆ ಮುಗಿಯುವವರೆಗೂ ಆಗುವಷ್ಟು ನೀರಿನ ಸಂಗ್ರಹವಿದೆ. ಆದರೆ ಗದಗ- ಬೆಟಗೇರಿ ಅವಳಿ ನಗರದಲ್ಲಿ ಮಾತ್ರ ಇಂದಿಗೂ ಪ್ರತಿ 10ರಿಂದ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಯಾರಿಗೂ ಜವಾಬ್ದಾರಿ ಇಲ್ಲ: ಗದಗ- ಬೆಟಗೇರಿ ನಗರಸಭೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ, ನಗರಸಭೆ ಸದಸ್ಯರ ವಿರುದ್ಧ ನಕಲಿ ಸಹಿ ಆರೋಪ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಹಲವಾರು ಪ್ರಕರಣಗಳು ನಿರಂತರವಾಗಿ ನ್ಯಾಯಾಲಯದಲ್ಲಿ ನಡೆಯುತ್ತಲೇ ಇವೆ.
ಹಾಗಾಗಿ ಸರ್ಕಾರ ಜಿಲ್ಲಾಧಿಕಾರಿಗಳನ್ನು ನಗರಸಭೆ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿದೆ. ಅವರಂತೂ ಅವಳಿ ನಗರದ ಸಮಸ್ಯೆಯ ಬಗ್ಗೆ ಕಿಂಚಿತ್ತು ಗಮನ ಹರಿಸುತ್ತಿಲ್ಲ. ಅಷ್ಟಕ್ಕೂ ಅವರ್ಯಾಕೆ ಗಮನ ಕೊಡುತ್ತಾರೆ ಹೇಳಿ? ಅವರಿಗೆ ಬೇರೆ ಬೇಕೆ ಸಾಕಷ್ಟು ಕೆಲಸಗಳಿರುತ್ತವೆ ಎನ್ನುತ್ತಾರೆ ಅವಳಿ ನಗರದ ಪ್ರಜ್ಞಾವಂತ ಜನ. 40 ಎಂಎಲ್ಡಿ ನೀರು ಬೇಕು: ಅವಳಿ ನಗರದ ಜನಸಂಖ್ಯೆ ಆಧಾರದಲ್ಲಿ ಪ್ರತಿ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕಾದಲ್ಲಿ 40 ಎಂಎಲ್ಡಿ ನೀರು ಬೇಕು. ಇದಕ್ಕಾಗಿಯೇ 2ನೇ ಹಂತದ ಕುಡಿಯುವ ನೀರಿನ ಯೋಜನೆಗೆ 2018ರಲ್ಲಿಯೇ ಚಾಲನೆ ನೀಡಲಾಗಿದೆ. ಆದರೆ ಇದುವರೆಗೂ ಅಷ್ಟೊಂದು ಪ್ರಮಾಣದ ನೀರು ಸಂಗ್ರಹಗಾರಕ್ಕೆ ಬಂದು ತಲುಪುತ್ತಲೇ ಇಲ್ಲ. ಹಾಗಾಗಿ ಕನಿಷ್ಠ 10ರಿಂದ 15 ದಿನಗಳಿಗೊಮ್ಮೆ ಅವಳಿ ನಗರದಲ್ಲಿ ನೀರು ಪೂರೈಕೆಯಾಗುತ್ತಿದೆ.ಪದೇ ಪದೇ ದುರಸ್ತಿ: ಅವಳಿ ನಗರಕ್ಕೆ ತುಂಗಭದ್ರಾ ನದಿಯಿಂದ ಗದಗ ನಗರಕ್ಕೆ ಬರುವ ಪೈಪಲೈನ್ ನಲ್ಲಿ ಪದೇ ಪದೇ ದುರಸ್ತಿ ಕಾಣಿಸಿಕೊಳ್ಳುತ್ತಿದೆ. ಅದ್ಯಾವ ಕಾರಣಕ್ಕಾಗಿ ಹೀಗಾಗುತ್ತದೆ ಎನ್ನುವುದನ್ನು ಪತ್ತೆ ಮಾಡುವಲ್ಲಿಯೇ ನಗರಸಭೆಯ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಇನ್ನು ಪೈಪ್ ಲೈನ್ ಅಳವಡಿಕೆ ಸಂದರ್ಭದಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಇರುವುದೇ ಸಮಸ್ಯೆಗೆ ಮೂಲ ಕಾರಣವಾಗಿದೆ ಎನ್ನುತ್ತಾರೆ ನಗರಸಭೆಯ ಅಧಿಕಾರಿಗಳು.ಚಳಿಗಾಲದಲ್ಲಿಯೇ ಟ್ಯಾಂಕರ್ ನೀರು
ಸಮಗ್ರ ತನಿಖೆಯಾಗಬೇಕು: ಅವಳಿ ನಗರದಲ್ಲಿ ಇಂದಿಗೂ 15 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಅದರಲ್ಲಿಯೂ ಹಲವಾರು ಬಡಾವಣೆಗಳಿಗೆ ಟ್ಯಾಂಕರ್ ಮೂಲಕ ನೀರು ಕೊಡಲಾಗುತ್ತಿದೆ. ನದಿಯಲ್ಲಿ ಸಾಕಷ್ಟು ನೀರಿದ್ದು, ಅಲ್ಲಿಂದ ಗದಗವರೆಗೂ ತುಂಗಭದ್ರಾ ನದಿ ನೀರು ಲಭ್ಯವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಪೈಪ್ ಲೈನ್ ದುರಸ್ತಿ ನೆಪದಲ್ಲಿ ಟ್ಯಾಂಕರ್ ನೀರು ಕೊಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಮತ್ತು ಅವಳಿ ನಗರದ ಜನತೆಗೆ ಕನಿಷ್ಠ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕು ಎಂದು ಬಿಜೆಪಿ ನಗರಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಆಗ್ರಹಿಸಿದರು.