ಜಲ ನಿರ್ವಹಣೆಗೆ ಜಲ ಸಂಪನ್ಮೂಲ ವಿವಿ ಸ್ಥಾಪನೆಯಾಗಲಿ

KannadaprabhaNewsNetwork |  
Published : Mar 05, 2025, 12:33 AM IST
xccv | Kannada Prabha

ಸಾರಾಂಶ

ರಾಷ್ಟ್ರಮಟ್ಟದ ಐಐಟಿ ಸಂಸ್ಥೆ ಇದೇ ವಾಲ್ಮಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಜಲ ಸಂಪನ್ಮೂಲ ವಿವಿಯಾಗಿ ವಾಲ್ಮಿಯನ್ನು ಉನ್ನತೀಕರಿಸುವುದು ಸೂಕ್ತ ಎಂದು ವಾಲ್ಮಿ ಮಾಜಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಪ್ರತಿಪಾದಿಸಿದ್ದಾರೆ.

ಧಾರವಾಡ: ಜಲ ನಿರ್ವಹಣೆ ಹಾಗೂ ಸವಾಲುಗಳನ್ನು ಎದುರಿಸಲು ರಾಜ್ಯದಲ್ಲಿ ಬೃಹತ್‌ ಹಾಗೂ ಸಮಗ್ರ ಜಲ ಸಂಪನ್ಮೂಲ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಭಾರತ ಏಕತಾ ಆಂದೋಲನದ ಅಧ್ಯಕ್ಷ ಮಹಾದೇವ ಹೊರಟ್ಟಿ ಆಗ್ರಹಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೃಹತ್‌ ಪ್ರಮಾಣದಲ್ಲಿ ಬಂಡವಾಳ ಹೂಡಿ ಜಲ ಸಂಪನ್ಮೂಲ ಅಭಿವೃದ್ಧಿ ಮಾಡಿದರೂ ಕ್ಷೇತ್ರ ಮಟ್ಟದಲ್ಲಿ ಅನೇಕ ಸವಾಲುಗಳು ಎದುರಾಗುತ್ತಿವೆ. ರಾಜ್ಯದಲ್ಲಿ ಸಾಕಷ್ಟು ಮಳೆ ಹಾಗೂ ಜಲ ಸಂಪನ್ಮೂಲ ಲಭ್ಯವಿದ್ದರೂ ನಿರಂತರವಾಗಿ ಹೆಚ್ಚುತ್ತಿರುವ ನೀರಿನ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. 2030ರ ವೇಳೆಗೆ ಗಂಭೀರ ಜಲ-ನೆಲ ಸಮಸ್ಯೆಗಳು ಉದ್ಭವವಾಗುವ ಸಾಧ್ಯತೆಗಳಿದ್ದು, ಇದಕ್ಕೆ ಪರಿಹಾರವಾಗಿ ಪ್ರತ್ಯೇಕ ವಿವಿ ಅಗತ್ಯತೆ ಇದೆ ಎಂದರು.

ಜಲ ಮತ್ತು ನೆಲ ನಿರ್ವಹಣೆ (ವಾಲ್ಮಿ) ಮಾಜಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಮಾತನಾಡಿ, ಪ್ರಸ್ತುತ ಇರುವ ವಿವಿಗಳ ನಿರ್ವಹಣೆಯೇ ಸರ್ಕಾರಕ್ಕೆ ಹೊರೆಯಾಗಿರುವಾಗ ಮತ್ತೊಂದು ಹೊಸ ವಿವಿ ಎನ್ನುವ ಕಲ್ಪನೆ ಬೇಡ. ಈಗಾಗಲೇ ಧಾರವಾಡದಲ್ಲಿರುವ ವಾಲ್ಮಿಯನ್ನು ಉನ್ನತೀಕರಿಸಿದರೆ ಸಾಕು. ವಾಲ್ಮಿಯಲ್ಲಿ ಈಗಾಗಲೇ ಮೂಲಭೂತ ಸೌಕರ್ಯಗಳಿದ್ದು, ಅವುಗಳ ಬಳಕೆ ಸರಿಯಾಗಿ ಆಗದೇ ಇದ್ದರೆ ವಾಲ್ಮಿ ಆಸ್ತಿ ಇತರೆ ಸಂಘ-ಸಂಸ್ಥೆಗಳ ಪಾಲಾಗುವುದರಲ್ಲಿ ಸಂಶಯವಿಲ್ಲ. ರಾಷ್ಟ್ರಮಟ್ಟದ ಐಐಟಿ ಸಂಸ್ಥೆ ಇದೇ ವಾಲ್ಮಿಯಲ್ಲಿ ಕಾರ್ಯ ನಿರ್ವಹಿಸಿದ್ದು, ಜಲ ಸಂಪನ್ಮೂಲ ವಿವಿಯಾಗಿ ವಾಲ್ಮಿಯನ್ನು ಉನ್ನತೀಕರಿಸುವುದು ಸೂಕ್ತ ಎಂದು ಪ್ರತಿಪಾದಿಸಿದರು.

ವಾಲ್ಮಿ ಸಂಸ್ಥೆಯ ಅಡಿ 137 ಎಕರೆ ಭೂಮಿ ಲಭ್ಯವಿದ್ದು, 75 ಎಕರೆ ಕೃಷಿ ಸಾಗುವಳಿ ಇದೆ. ಆಡಳಿತ ಭವನ, ಶೈಕ್ಷಣಿಕ ಕಟ್ಟಡ, ವರ್ಗ ಕೋಣೆಗಳು, ಪ್ರಯೋಗಾಲಯ, ಅತಿಥಿ ಗೃಹ, ವಸತಿಗೃಹಗಳೂ ಇವೆ. ಕಾಯಂ ಹುದ್ದೆಗಳೂ ಇದ್ದು, ಸರ್ಕಾರಕ್ಕೆ ವಿವಿ ಮಾಡುವುದರಲ್ಲಿ ಹೆಚ್ಚಿನ ಹೊರೆ ಬರೋದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಜಲ ತಜ್ಞರು ಆಗ್ರಹ ಮಾಡಿದ್ದು, ಬಜೆಟ್‌ನಲ್ಲಿ ಜಲ ಸಂಪನ್ಮೂಲ ವಿವಿ ಘೋಷಣೆ ನಿರೀಕ್ಷೆ ಹೊಂದಿದ್ದೇವೆ ಎಂದರು.

ಜಲ ಸಂಪನ್ಮೂಲದ ಪ್ರಮಾಣ ನಿರ್ದಿಷ್ಟವಾಗಿದ್ದು, ಬೇಡಿಕೆ ಹೆಚ್ಚು, ಲಭ್ಯತೆ ಕಡಿಮೆಯಾಗಿದೆ. ಈ ಕಂದಕದಿಂದ ಜಲ ಕಲಹಗಳು ಉಂಟಾಗುತ್ತಿವೆ. ಜಲ ಮೂಲಗಳ ದುಸ್ಥಿತಿ, ಸರಂಕ್ಷಣಾ ಸಮಸ್ಯೆಗಳು, ಆಣೆಕಟ್ಟು, ಪ್ರವಾಹ ನಿರ್ವಹಣೆ, ನೀರಾವರಿ ಜಾಲದ ಸಮಸ್ಯೆಗಳು, ಹವಾಮಾನ ವೈಪರೀತ್ಯ ಹೀಗೆ ಜಲ ಸಂಕಷ್ಟಗಳನ್ನು ಪರಿಹರಿಸಲು ವಿವಿ ಕಾರ್ಯ ಮಾಡುವಂತೆ ಯೋಜನೆ ರೂಪಿಸಬೇಕಿದೆ. ಈ ವಿವಿಯಿಂದ ಬಿಟೆಕ್‌, ಎಂಟೆಕ್‌ ಪದವಿಗಳು, ಸರ್ಟಿಫಿಕೆಟ್‌ ಹಾಗೂ ಡಿಪ್ಲೋಮಾ ಕೋರ್ಸ್‌ಗಳನ್ನು ಪ್ರಾರಂಭಿಸುವ ಮೂಲಕ ರಾಜ್ಯದಲ್ಲಿ ಜಲವನ್ನು ಸಂರಕ್ಷಿಸುವ ಕಾರ್ಯ ಮಾಡಬಹುದು ಎಂಬ ಸಲಹೆಯನ್ನು ಡಾ. ಪೋದ್ದಾರ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ.ಡಿ.ಪಿ. ಬಿರಾದಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಚಿರತೆ ದಾಳಿಗೆ ಮಹಿಳೆ ಬಲಿ