ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆ ಎದುರು ಖಾಲಿ ಕೊಡಗಳೊಂದಿಗೆ ಮಹಿಳೆಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು. ಹೀಗಾಗಿ, ಪ್ರತಿಭಟನಾಕಾರರು ಮತ್ತು ಪೋಲಿಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಮಾರ್ಕೆಟ್ ಠಾಣೆಯ ಪೊಲೀಸ್ ಅಧಿಕಾರಿಗಳು ಆಗಮಿಸಿದರು. ಸಿಪಿಐ ಜೆ.ಎಂ.ಕಾಲಿಮಿರ್ಚಿ ಹಾಗೂ ಪಿಎಸ್ಐ ವಿಠ್ಠಲ ಹಾವನ್ನವರ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಲು ಪ್ರಯತ್ನಿಸಿದರು. ಬಳಿಕ ಆಗಮಿಸಿದ ಪಾಲಿಕೆ ಕಮಿಷನರ್ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ಈ ವೇಳೆ ಮಾತನಾಡಿ ಮಹಿಳೆಯರು, ಹದಿನೈದು ದಿನಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಜೊತೆಗೆ ಕುಡಿಯುವ ನೀರಿಗೆ ಚರಂಡಿ ಮಿಶ್ರಿತ ನೀರು ಸೇರುತ್ತಿದ್ದು, ಜನರಿಗೂ ಅನಾರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಕೋಟ್
ವಡಗಾಂವ ರೈತ ಗಲ್ಲಿ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ನಿವಾಸಿಗಳ ಆರೋಪದ ಪ್ರಕಾರ ಮನೆಗಳಿಗೆ ಬರುತ್ತಿರುವ ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣವಾಗುತ್ತಿದೆ. ಜನರು ಆ ನೀರನ್ನು ಬಳಸಲು ಸಹ ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಕಳೆದ ಇಪ್ಪತ್ತು ದಿನಗಳಿಂದ ಬೆಳಗಾವಿ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸುತ್ತಿದ್ದೇವೆ. ಆದರೆ, ಅಧಿಕಾರಿಗಳು ಈವರೆಗೂ ಸಮಸ್ಯೆ ಪರಿಹರಿಸುವ ಕೆಲಸ ಮಾಡಿಲ್ಲ. ಕೂಡಲೇ ನಮಗೆ ಸಮಸ್ಯೆ ಬಗೆಹರಿಸಬೇಕು.ಪ್ರತಿಭಟನಾನಿರತ ಮಹಿಳೆಯರು