ಜನವರಿಯಿಂದ್ಲೇ ಸತತ 130 ದಿನ ನಾಲೆಗೆ ನೀರು ಹರಿಸಲಿ

KannadaprabhaNewsNetwork |  
Published : Sep 16, 2026, 01:30 AM IST
15ಕೆಡಿವಿಜಿ11-ದಾವಣಗೆರೆಯಲ್ಲಿ ಮಂಗಳವಾರ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ..............15ಕೆಡಿವಿಜಿ12-ದಾವಣಗೆರೆಯಲ್ಲಿ ಮಂಗಳವಾರ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ಇತರರು ಸುದ್ದಿಗೋಷ್ಟಿ ನಂತರ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿರುವುದು. | Kannada Prabha

ಸಾರಾಂಶ

ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ಜನವರಿ ತಿಂಗಳಲ್ಲೇ ಸತತ 130 ದಿನ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ಒತ್ತಾಯಿಸಿದ್ದಾರೆ.

- ಈಗ ನೀರು ಬಿಡುವಂತೆ ಹೋರಾಡುತ್ತಿರುವವರ ಹಿಂದೆ ಅಕ್ರಮ ಪಂಪ್‌ಸೆಟ್ ಲಾಬಿ: ಲಿಂಗರಾಜ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭದ್ರಾ ಡ್ಯಾಂನಿಂದ ಅಚ್ಚುಕಟ್ಟು ಪ್ರದೇಶಕ್ಕೆ ಜನವರಿ ತಿಂಗಳಲ್ಲೇ ಸತತ 130 ದಿನ ನೀರು ಹರಿಸುವಂತೆ ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಭದ್ರಾ ಡ್ಯಾಂನಿಂದ ನಾಲೆಗಳಿಗೆ ಈಗ ನೀರು ಕೊಡಬಾರದು. ಈಗ ನೀರು ಬಿಟ್ಟರೆ ಅಚ್ಚುಕಟ್ಟು ರೈತರಿಗೆ ಯಾವುದೇ ಅನುಕೂಲ, ಪ್ರಯೋಜನ ಆಗುವುದಿಲ್ಲ. ಬದಲಾಗಿ ಬೇಸಿಗೆ ಬೆಳೆಗೆಂದು ಜನವರಿ ತಿಂಗಳಲ್ಲಿ ಸತತ 130 ದಿನಗಳ ಕಾಲ ನೀರು ಬಿಡಲಿ ಎಂದರು.

ಬತ್ತದ ನಾಟಿಗೆ ಸಮಯವೂ ಮುಗಿದಿದ್ದು, ಬೇಸಿಗೆಯಲ್ಲೇ ಸತತವಾಗಿ ನೀರು ಬಿಡಲಿ. ಒಂದುವೇಳೆ ಸರ್ಕಾರವೇನಾದರೂ ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗಿ ನಾಲೆಗೆ ನೀರು ಹರಿಸಿದರೆ ಭಾರತೀಯ ರೈತರ ಒಕ್ಕೂಟ ಸಭೆ ನಡೆಸಿ, ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಿದೆ. ನೀರಿನ ಅಗತ್ಯವಿದ್ದಾಗ ಬಿಡದೇ, ಈಗ ನೀರು ಬಿಡುವ ದುಸ್ಸಾಹಸಕ್ಕೆ ಸರ್ಕಾರ ಕೈ ಹಾಕಬಾರದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಆ.18ರಂದು ನಡೆದ ಐಸಿಸಿ ಸಭೆಯಲ್ಲಿ ಯಾರೂ ಮಾತನಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳುತ್ತಿದ್ದಾರೆ. ಭಾರತೀಯ ರೈತ ಒಕ್ಕೂಟದ ಪ್ರೊ.ಸಿ.ನರಸಿಂಹಪ್ಪ, ಎಸ್.ಎ.ರವೀಂದ್ರನಾಥ, ತಾವು ಸೇರಿದಂತೆ ರೈತ ಮುಖಂಡರು ಮಾತನಾಡಿದ ದಾಖಲೆ ನಮ್ಮಲ್ಲಿವೆ. ಸಭೆಯ ನಡವಳಿಯಲ್ಲೂ ಇದೆಲ್ಲಾ ಮಾಹಿತಿ ಇದೆ. ಹೀಗಿದ್ದರೂ ಜಿಲ್ಲಾ ಸಚಿವರು ಹಾಗೆಲ್ಲಾ ಯಾಕೆ ಹೇಳುತ್ತಿದ್ದಾರೆಂಬುದೇ ಅರ್ಥವಾಗುತಿಲ್ಲ ಎಂದರು.

ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಆ.18ರ ಐಸಿಸಿ ಸಭೆಯಲ್ಲಿ ನೀರು ಬಿಡಬಾರದು, ಈಗ ಬಿಡಬೇಕೆಂದು ಒತ್ತಾಯಿಸುತ್ತಿರುವವರು, ಜನಪ್ರತಿನಿಧಿಗಳು ಸೇರಿಕೊಂಡು ಭದ್ರಾ ಅಚ್ಚುಕಟ್ಟು ರೈತರ ಅನ್ನದ ಬಟ್ಟಿಲಿಗೆ ಮಣ್ಣಿನ ಜೊತೆ ವಿಷಯನ್ನೇ ಹಾಕಿದ್ದಾರೆ. ಎಸ್‌.ಎಸ್‌. ಮಲ್ಲಿಕಾರ್ಜುನ ರೈತರ ಪರ ಮಾತನಾಡುತ್ತಾರೆ, ಅಚ್ಚುಕಟ್ಟು ರೈತರ ಪರ ನಿಲ್ಲುತ್ತಾರೆ, ಐಸಿಸಿ ಸಭೆಯಲ್ಲಿ ನೀರು ಬಿಡಿಸುತ್ತಾರೆಂದು ನಂಬಿದ್ದೆವು. ಆದರೆ, ಸಚಿವರ ನಡವಳಿಕೆಯೇ ಬೇರೆಯದ್ದಾಗಿದೆ. ರೈತರೆಲ್ಲಾ ಒಂದಾಗಿ ಬನ್ನಿ ಅಂತಾ ಹೇಳಿ, ರೈತರಿಗೆ ಘೋರ ಅನ್ಯಾಯ ಮಾಡಿದರು ಎಂದು ಆರೋಪಿಸಿದರು.

ಈಗ ನೀರು ಬಿಡುವಂತೆ ಹೋರಾಟ ನಡೆಸುತ್ತಿರುವವರು ಅಕ್ರಮ ಪಂಪ್‌ಸೆಟ್‌ದಾರರ ಪರವಾಗಿದ್ದಾರೆ. ಹೀಗೆ ಹೋರಾಟ ನಡೆಸುತ್ತಿರುವವರಿಗೆ ಅಕ್ರಮ ಪಂಪ್‌ಸೆಟ್‌ದಾರರಿಂದ ಏನಾದರೂ ಕಪ್ಪ ಕಾಣಿಕೆ ತಲುಪಿರಬಹುದೆನಿಸುತ್ತಿದೆ. ಆಗ ಭಾರೀ ಬೆಳೆಗಾರರು, ತಜ್ಞರು ಎನ್ನುವವರು ಹೇಳುತ್ತಿರುವಂತೆ ಈಗಲೇ ನಾಲೆಗೆ ನೀರು ಹರಿಸಬಾರದು. ಸರ್ಕಾರಕ್ಕೆ ರೈತರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ, ಭದ್ರಾ ನಾಲೆಗೆ ಜನವರಿ ತಿಂಗಳಿಂದಲೇ ಸತತ 130 ದಿನ ನೀರು ಹರಿಸಲಿ. ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಅಸಡ್ಡೆ ಬೇಡ ಎಂದು ಎಚ್ಚರಿಸಿದರು.

ನಾಲೆಗೆ ನೀರು ಬಿಡುವಂತೆ ಕುಂದೂರಿನಲ್ಲಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಧರಣಿ ನಡೆಸಿದ್ದು ನಾಚಿಕೆಗೇಡು. ಐಸಿಸಿ ಸಭೆಯಲ್ಲಿ ಅಂದೇ ನಾಲೆಗೆ ನೀರು ಹರಿಸುವಂತೆ ಯಾಕೆ ಧ್ವನಿ ಎತ್ತಲಿಲ್ಲ? ಕೆಲವರೊಂದಿಗೆ ಜನಪ್ರತಿನಿಧಿಗಳೂ ಸೇರಿಕೊಂಡು ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹಸಿರು ಬರವನ್ನುಂಟು ಮಾಡಿದ್ದಾರೆ. ಈಗ ಮಾತ್ರವಲ್ಲ ಮುಂದಿನ ಮಳೆಗಾಲದ ಬತ್ತ ಸಹ ಸಿಗುವುದಿಲ್ಲ. 2027ರಲ್ಲಿ ಸರಿಯಾಗಿ ಮಳೆಯಾಗದಿದ್ದರೆ ಯಾರು ಹೊಣೆ? ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿ. ಮಳೆಗಾಲದ ಬೆಳೆ ಕಳೆದುಕೊಂಡ ಅಚ್ಚುಕಟ್ಟು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ರೈತ ಮುಖಂಡ ಬೆ‍ಳ‍ವನೂರು ಬಿ.ನಾಗೇಶ್ವರ ರಾವ್ ಮಾತನಾಡಿ, ಭದ್ರಾ ಡ್ಯಾಂನಿಂದ ನಾಲೆಗೆ ನೀರು ಹರಿಸುವಂತೆ ಈಗ ಹೋರಾಟ ನಡೆಸುತ್ತಿರುವವರ ಹಿಂದೆ ಅಕ್ರಮ ಪಂಪ್‌ಸೆಟ್ ಲಾಬಿ ಇರಬಹುದು. ಈಗ ನೀರನ್ನು ಬಿಡದೇ, ಜನವರಿ ತಿಂಗಳಲ್ಲೇ ನಾಲೆಗೆ ನೀರು ಹರಿಸಬೇಕು. ಜಿಲ್ಲಾ ಮಂತ್ರಿ ಎಸ್‌.ಎಸ್‌. ಮಲ್ಲಿಕಾರ್ಜುನ ಸಿಎಂ ಡಿ.ಕೆ.ಶಿವಕುಮಾರ ಬಳಿ ಮಾತನಾಡುವುದಾಗಿ ಹೇಳಿ, ಅಚ್ಚುಕಟ್ಟು ರೈತರಿಗೆ ವಿಷ ಕುಡಿಸಿಬಿಟ್ಟರು. ರೈತರಿಗೆ ಎಸ್‌.ಎಸ್‌. ಮಲ್ಲಿಕಾರ್ಜುನ ಯಾಮಾರಿಸಿದ್ದು, ಡ್ಯಾಂನಲ್ಲಿ ನೀರಿದ್ದರೂ ಅಚ್ಚುಕಟ್ಟು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದರೆ ಎಂದು ದೂರಿದರು.

ದಾವಣಗೆರೆ ಜಿಲ್ಲೆಯ ಇಬ್ಬರು ಮಂತ್ರಿಗಳು, ಸಂಸದರು, ಎಲ್ಲ ಶಾಸಕರು ಒಂದಾಗಿ ಭದ್ರಾ ಅಚ್ಚುಕಟ್ಟು ರೈತರ ಪರ ತೀರ್ಮಾನ ಕೈಗೊಳ್ಳಲಿಲ್ಲ. 6 ಲಕ್ಷ ರೈತರು, 6 ಲಕ್ಷ ಕೂಲಿ ಕಾರ್ಮಿಕರು ಸೇರಿದಂತೆ 12 ಲಕ್ಷದಷ್ಟು ರೈತರ ಅನ್ನ, ಕೆಲಸ ಎಲ್ಲವನ್ನೂ ತಪ್ಪಿಸಿದರು. ಡ್ಯಾಂನಲ್ಲಿ ನೀರಿದ್ದರೂ ಐಸಿಸಿ ಸಭೆಯನ್ನು ನಡೆಸದೇ, ನೀರನ್ನು ಕೊಡದೇ ಇರುವುದು ಭದ್ರಾ ಡ್ಯಾಂ ಇತಿಹಾಸದಲ್ಲಿ ಇದೇ ಮೊದಲು. ರೈತರ ಕಣ್ಣಲ್ಲಿ ನೀರಲ್ಲ, ರಕ್ತವೇ ಸುರಿಯುತ್ತಿದೆ. ಇಲ್ಲಿನ ಮಂತ್ರಿ, ಶಾಸಕರಿಗೆ ಇದ್ಯಾವುದರ ಅರಿವೇ ಇಲ್ಲವೇ ಎಂದು ಅವರು ಪ್ರಶ್ನಿಸಿದರು.

ಒಕ್ಕೂಟದ ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಕುಂದುವಾಡ ಹನುಮಂತಪ್ಪ, ಅಣ್ಣಪ್ಪ, ಮಹೇಶ್ವರಪ್ಪ, ಪುನೀತ್, ಉಜ್ಜಣ್ಣ, ಕಾಶೀಪುರ ಮಲ್ಲಿಕಾರ್ಜುನ, ಶಿರಮಗೊಂಡನಹಳ್ಳಿ ಮಂಜುನಾಥ, ಗುರುಬಸಪ್ಪ, ಲಚ್ಚಣ್ಣ, ಶಿವಕುಮಾರ ಇತರರು ಇದ್ದರು.

- - -

(ಕೋಟ್ಸ್‌) ಆಹಾರ ಧಾನ್ಯ ಬೆಳೆಯುವ ಸಲುವಾಗಿ ಭದ್ರಾ ಡ್ಯಾಂ ನೀರು ಇದೆ. ನೀರಾವರಿ ವ್ಯವಸ್ಥೆ ಇದ್ದವರು ಅಡಕೆ ಬೆಳೆಯಬೇಕು. ನಮಗ್ಯಾರಿಗೂ ಶಾಸಕ, ಮಂತ್ರಿಯಾಗುವ ಬಯಕೆಗಳೇನೂ ಇಲ್ಲ. ಮಳೆಗಾಲದ ಬೆಳೆಗೆ ನೀರು ಕೊಡಲು ವಿರೋಧಿಸಿ, ಈಗ ನಾಲೆಗೆ ನೀರು ಹರಿಸುವಂತೆ ಕೇಳುತ್ತಿರುವವರು ಅಧಿಕಾರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅಂತಹವರ ಒತ್ತಡಕ್ಕೆ ಮಣಿದು ನೀರು ಬಿಟ್ಟರೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು. ಕುಡಿಯುವ ನೀರಿಗೆ ಈಗ ನೀರು ಬಿಡುವುದಾಗಿ ಹೇಳುತ್ತಿದ್ದು, ಕುಡಿಯುವ ನೀರು ಹರಿಸಲು ಪ್ರತ್ಯೇಕ ನಾಲೆಯೇನೂ ಇಲ್ಲ. ಈಗ ನೀರು ಹರಿಸುವ ಜೊತೆಗೆ ಇನ್ನೂ 30 ದಿನ ಸೇರಿಸಿ 90 ದಿನ ಬಿಟ್ಟಿದ್ದರೆ ಅಚ್ಚುಕಟ್ಟು ರೈತರು ಬತ್ತವನ್ನಾದರೂ ಬೆಳೆಯುತ್ತಿದ್ದರು.

- ಎಚ್.ಆರ್.ಲಿಂಗರಾಜು ಶಾಬನೂರು, ಅಧ್ಯಕ್ಷ, ಭಾರತೀಯ ರೈತ ಒಕ್ಕೂಟ.

- - - ರೈತರನ್ನು ಎರಡು ಗುಂಪು ಮಾಡಿದವರೇ ಜಿಲ್ಲಾ ಮಂತ್ರಿ ಎಸ್.ಎಸ್.ಮಲ್ಲಿಕಾರ್ಜುನ. ಈಗ ಕಾವಿ (ಮಠಾಧೀಶರು) ಕೂಡ ಎರಡು ಭಾಗವಾಗಿದೆ. ಮಳೆಗಾಲದ ಬೆಳೆಗೆ ನೀರು ಕೊಡದ ಸರ್ಕಾರ ರೈತರಿಗೆ ವಿಷವುಣಿಸಿದೆ. ನೀರು ಬರುತ್ತದೆಂಬ ನಿರೀಕ್ಷೆಯಲ್ಲಿ ಸಿದ್ಧತೆ ಮಾಡಿಕೊಂಡಿದ್ದ ರೈತರು ಸಾವಿರಾರು ರು.ಗಳಷ್ಟು ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಲಿ.

- ಬೆಳವನೂರು ಬಿ.ನಾಗೇಶ್ವರ ರಾವ್‌, ರೈತ ಮುಖಂಡ.

- - -

-15ಕೆಡಿವಿಜಿ12: ದಾವಣಗೆರೆಯಲ್ಲಿ ಮಂಗಳವಾರ ಭಾರತೀಯ ರೈತ ಒಕ್ಕೂಟ ಅಧ್ಯಕ್ಷ ಶಾಬನೂರು ಎಚ್.ಆರ್.ಲಿಂಗರಾಜ ಇತರರು ಸುದ್ದಿಗೋಷ್ಠಿ ನಡೆಸಿದ ಬಳಿಕ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಂದೇ ಮಾತರಂ 6 ಚರಣ ಹಾಡಲು ಬಿಜೆಪಿ ಆಗ್ರಹ
ಒಂದು ವಾರದ ಗಣೇಶೋತ್ಸವಕ್ಕೆ ಶಾಸಕ ಉದಯ್‌ ಚಾಲನೆ