ಹೆದ್ದಾರಿ ಅಗಲೀಕರಣದ ಕಾಮಗಾರಿಗೆಂದು ನಡೆಯುತ್ತಿರುವ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಹಾನಿಗೊಳಿಸಿದ ಕಾರಣಕ್ಕೆ ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೆ ಸಂಕಷ್ಟಕ್ಕೀಡಾದ ಜನತೆ ಶನಿವಾರದಂದು ಆಕ್ರೋಶಗೊಂಡು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ ಹೆದ್ದಾರಿ ಅಗಲೀಕರಣದ ಕಾಮಗಾರಿಗೆಂದು ನಡೆಯುತ್ತಿರುವ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಹಾನಿಗೊಳಿಸಿದ ಕಾರಣಕ್ಕೆ ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೆ ಸಂಕಷ್ಟಕ್ಕೀಡಾದ ಜನತೆ ಶನಿವಾರದಂದು ಆಕ್ರೋಶಗೊಂಡು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ. ಉಪ್ಪಿನಂಗಡಿಯ ಕುಡಿಯುವ ನೀರು ಶುದ್ಧೀಕರಣ ಘಟಕದಿಂದ ಹಲವೆಡೆಗೆ ಸರಬರಾಜಾಗುವ ನೀರಿನ ಪೈಪುಗಳು ಕಾಮಗಾರಿಯ ವೇಳೆ ತುಂಡಾಗಿದ್ದವು. ಇದನ್ನು ಸರಿಪಡಿಸಬೇಕೆಂದು ಪಂಚಾಯಿತಿ ಆಡಳಿತ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿತ್ತು. ಸ್ಪಂದಿಸುವ ಭರವಸೆ ನೀಡಿದ ಕಾಮಗಾರಿಯ ಗುತ್ತಿಗೆ ವಹಿಸಿದ ಸಂಸ್ಥೆಯ ಅಧಿಕಾರಿಗಳು ಬಳಿಕ ಮೌನವಹಿಸಿದ್ದರು. ಇದರಿಂದಾಗಿ ಸತತ ನಾಲ್ಕು ದಿನಗಳ ಕಾಲ ನೀರಿಲ್ಲದೆ ಉಪ್ಪಿನಂಗಡಿ ಪೇಟೆಯ ಜನತೆ ಸಮಸ್ಯೆಗೀಡಾದರು. ಈ ಮಧ್ಯೆ ಶನಿವಾರ ಸ್ಥಳೀಯ ನಿವಾಸಿಗರು ಕುಡಿಯುವ ನೀರಿನ ಪೈಪುಗಳನ್ನು ಸರಿಪಡಿಸದೆ ಕಾಮಗಾರಿ ಮುಂದುವರೆಸಲು ಅವಕಾಶ ನೀಡಬಾರದೆಂದು ಒತ್ತಾಯಿಸಿ ಸ್ಥಳದಲ್ಲಿ ಜಮಾಯಿಸಿದರು. ಸ್ಥಳಕ್ಕಾಗಮಿಸಿದ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಂಚಾಯಿತಿ ಸದಸ್ಯ ಅಬ್ದುಲ್ ರಹಿಮಾನ್ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಆದ್ಯತೆಯ ಮೇರೆಗೆ ಸರಿ ಪಡಿಸಿಕೊಡಬೇಕೆಂದು ಒತ್ತಾಯಿಸಿದರು. ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳನ್ನು ಸಂಪರ್ಕಿಸಿದ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ, ಸತತ ನಾಲ್ಕು ದಿನಗಳಿಂದ ನೀರಿಲ್ಲದೆ ಜನ ತೀರಾ ಆಕ್ರೋಶಿತಗೊಂಡಿದ್ದಾರೆ. ಕಾಮಗಾರಿಯ ಗುತ್ತಿಗೆ ವಹಿಸಿದ ಸಂಸ್ಥೆಯ ಅಧಿಕಾರಿಗಳನ್ನು ದಿಗ್ಭಂಧನ ಹಾಕುವ ಮಾತುಗಳನ್ನಾಡುತ್ತಿರುವುದರಿಂದ ತಕ್ಷಣ ಸ್ಪಂದಿಸುವಂತೆ ಅಗ್ರಹಿಸಿದರು. ಎಚ್ಚೆತ್ತ ಜಿಲ್ಲಾಡಳಿತ ಸಂಬಂಧಿತ ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ತಾಕೀತು ಮಾಡಿತು. ಅದರಂತೆ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ಹಾನಿಗೀಡಾದ ಪೈಪ್‌ಗಳನ್ನು ಒಂದು ದಿನದೊಳಗೆ ಸರಿಪಡಿಸುವ ಭರವಸೆ ನೀಡಿದರು. ಯಾವುದೇ ಕಾಮಗಾರಿ ನಡೆಸುವ ಸಮಯದಲ್ಲಿ ಭೂಮಿಯಲ್ಲಿ ಅಂತರ್ಗತವಾಗಿರುವ ವಸ್ತುಗಳ ಬಗ್ಗೆ ಸ್ಥಳೀಯಾಡಳಿತ ಕಾಮಗಾರಿ ತಂಡಕ್ಕೆ ಪೂರ್ವ ಮಾಹಿತಿ ನೀಡಬೇಕು. ಮಾಹಿತಿ ಇಲ್ಲದೆ ಕಾಮಗಾರಿ ನಡೆಸುವ ಸಮಯದಲ್ಲಿ ಇಂತಹ ಅವಾಂತರಗಳು ಆಗುತ್ತವೆ. ಹೆದ್ದಾರಿ ಅಗಲೀಕರಣದ ಕಾರಣಕ್ಕೆ ಈಗಾಗಲೇ ಹೆದ್ದಾರಿ ಪ್ರ‍್ರಾಧಿಕಾರ ಸೂಕ್ತ ಪರಿಹಾರಧನ ವಿತರಿಸಿದ್ದು, ಪಂಚಾಯಿತಿ ಪೈಪ್‌ಲೈನ್ ಬಾಬ್ತು ಪರಿಹಾರ ಧನವನ್ನು ಪಾವತಿಸಿದ್ದರೆ, ಪಂಚಾಯಿತಿ ಆಡಳಿತವೇ ಈ ಮೊದಲೇ ಪರ್ಯಾಯ ಸ್ಥಳದಲ್ಲಿ ಪೈಪ್‌ಲೈನ್‌ಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ತಿಳಿಸಿದ್ದಾರೆ. ಪಂಚಾಯಿತಿ ಲೋಪವೂ ಇದೆ: ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುವ ವೇಳೆ ನಮ್ಮ ಸೊತ್ತುಗಳು ಎಲ್ಲೆಲ್ಲಾ ಹಾದುಹೋಗಿದೆ ಎನ್ನುವ ಬಗ್ಗೆ ಸಂಬಂಧಿತ ಸಂಸ್ಥೆಯ ಅಧಿಕಾರಿಗಳಿಗೆ ಪಂಚಾಯತ್ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಬೇಕಾಗಿತ್ತು. ಹಾಗೂ ಕಾಮಗಾರಿ ನಡೆಯುವ ಸಮಯದಲ್ಲಿ ಪಂಚಾಯಿತಿ ಸಿಬ್ಬಂದಿ ಸ್ಥಳದಲ್ಲಿದ್ದು ಸಂವಹನ ನಡೆಸಬೇಕಿತ್ತು. ಇದ್ಯಾವುದೂ ಆಗದೆ ನಿರ್ಲಕ್ಷ್ಯ ಹೊಂದಿಸಿದ್ದರಿಂದ ಸತತ ನಾಲ್ಕು ದಿನ ನೀರಿಲ್ಲದ ಸ್ಥಿತಿ ನಿರ್ಮಾಣವಾಯಿತು. ಅದಕ್ಕಾಗಿ ವಿಷಾದಿಸುತ್ತೇವೆ. ಭಾನುವಾರದಿಂದ ಸಮಸ್ಯೆ ಬಗೆಹರಿಸುವ ನಿರೀಕ್ಷೆ ಹೊಂದಿರುವುದಾಗಿ ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಪ್ರತಿಕ್ರಿಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.