ಹುಬ್ಬಳ್ಳಿ:
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ನಿರಂತರ ನೀರು ಯೋಜನೆಗೆ ಸಂಬಂಧಪಟ್ಟಂತೆ ಎಲ್ ಆ್ಯಂಡ್ ಟಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳೊಂದಿಗೆ ವಿಶೇಷ ಸಾಮಾನ್ಯ ಸಭೆ ಜರುಗಿತು. ಸಭೆಯಲ್ಲಿ ಪ್ರತಿ ವಾರ್ಡ್‌ನ ಸಮಸ್ಯೆಯನ್ನು ಸದಸ್ಯರು ಎಳೆ-ಎಳೆಯಾಗಿ ಬಿಚ್ಚಿಟ್ಟರು. ಎಲ್ಲರ ಸಮಸ್ಯೆ ಆಲಿಸಿದ ಮೇಯರ್, ಎಲ್ ಆ್ಯಂಡ್ ಟಿ ಅಧಿಕಾರಿಗಳಿಂದ ಉತ್ತರ ಕೊಡಿಸಿದರು.
ಇದಕ್ಕೂ ಮೊದಲು ಈ ಸಂಬಂಧ ಪಿಪಿಟಿ ಮೂಲಕ ಯೋಜನೆಯ ಕುರಿತು ಕೆಯುಐಡಿಎಫ್‌ಸಿಯ ಸವಿತಾ ಅವರು ಮಾಹಿತಿ ನೀಡಿದರು. ರೇಣುಕಾ ಜಲಾಶಯದಿಂದ 225 ಎಂಎಲ್‌ಡಿ ಪಂಪಿಂಗ್ ಮಾಡಿದಾಗ ನಮಗೆ 215 ಎಂಎಲ್‌ಡಿ ಸಿಗುತ್ತದೆ. ಅಮ್ಮಿನಬಾವಿಯಲ್ಲಿ ಶುದ್ಧೀಕರಣಗೊಂಡ ಬಳಿಕ ಸರಬರಾಜಿಗೆ ಪ್ರತಿ ನಿತ್ಯ 200 ಎಂಎಲ್‌ಡಿ ನೀರು ಪೂರೈಕೆಯಾಗುತ್ತದೆ ಇನ್ನು ನೀರಸಾಗರ ಜಲಾಶಯದಿಂದ 22 ಎಂಎಲ್‌ಡಿ ನೀರನ್ನು ಪಂಪಿಂಗ್ ಮಾಡಲಾಗುತ್ತದೆ ಎಂದು ತಿಳಿಸಿದರು.ನಿರಂತರ ನೀರು ಯೋಜನೆ ವೆಚ್ಚ ₹ 1229.72 ಕೋಟಿ ಆಗಿದ್ದು 2020ರಲ್ಲಿ ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಿ 2025ರಲ್ಲಿ ಪೂರ್ಣಗೊಳಿಸುವಂತೆ ತಿಳಿಸಲಾಗಿತ್ತು. ಆದರೆ, ಕೊರೋನಾದಿಂದ ವಿಳಂಬವಾಗಿದ್ದು 2027ರ ಜನವರಿ ವರೆಗೆ ಅವಧಿ ವಿಸ್ತರಿಸಲಾಗಿದೆ. 1.86 ಲಕ್ಷ ಮನೆಗಳಿಗೆ ನಳ ಸಂಪರ್ಕ ಮಾಡಬೇಕಿದ್ದು ಇದರಲ್ಲಿ ಮೊದಲೇ 60 ಸಾವಿರಕ್ಕೂ ಅಧಿಕ ಸಂಪರ್ಕ ಕಲ್ಪಿಸಲಾಗಿದೆ. ಎಲ್ ಆ್ಯಂಡ್ ಟಿಯು 1.20 ಲಕ್ಷಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸಬೇಕಿದ್ದು ಈ ವರೆಗೆ 38,285 ಮನೆಗಳಿಗೆ ನಳ ಸಂಪರ್ಕಿಸಿದ್ದು ಶೇ. 32ರಷ್ಟು ಪ್ರಗತಿಯಾಗಿದೆ. ಇನ್ನುಳಿದಂತೆ 24 ಓವರ್ ಹೆಡ್ ಟ್ಯಾಂಕ್ ನಿರ್ಮಾಣದಲ್ಲಿ ಕೆಲವೊಂದಿಷ್ಟು ಪೂರ್ಣಗೊಂಡಿವೆ. ವಾಟರ್ ಟ್ರಿಟ್‌ಮೆಂಟ್ ಘಟಕ, ಪೈಪ್‌ಲೈನ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿವೆ. ಸದ್ಯಕ್ಕೆ ಕೆಲ ವಾರ್ಡ್‌ಗಳಲ್ಲಿ 5 ದಿನಗಳಿಗೊಮ್ಮೆ, ಕೆಲ ವಾರ್ಡ್‌ಗಳಿಗೆ ಏಳೆಂಟು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಮಾರ್ಚ್ 31ರಿಂದ ಪ್ರತಿ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡಬಹುದಾಗಿದೆ ಎಂದು ಕೆಯುಐಡಿಎಫ್‌ಸಿಯ ಸವಿತಾ ವಿವರಿಸಿದರು.