ಹಿರಿಯೂರಲ್ಲಿ ಏಳು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು

KannadaprabhaNewsNetwork |  
Published : Apr 17, 2025, 12:06 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಮಳೆ ಹಾನಿ ಹಾಗೂ ಕುಡಿವ ನೀರಿನ ಅಭಾವ ಕುರಿತ ಪರಿಶೀಲನಾ ಸಭೆಯಲ್ಲಿ ಜಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ । ಜಿಲ್ಲಾ ಉಸ್ತಾವಾರಿ ಸಚಿವರ ಕ್ಷೇತ್ರದಲ್ಲಿಯೇ ಕುಡಿವ ನೀರಿಗೆ ಆಹಾಕಾರಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹದಿನೈದು ದಿನಗಳ ಹಿಂದೆಯಷ್ಟೇ ಸರಿ ದಿಕ್ಕಿನಲ್ಲಿದ್ದ ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಡಿವ ನೀರು ಪೂರೈಕೆ ವ್ಯವಸ್ಥೆಯಲ್ಲಿ ಇದೀಗ ವ್ಯತ್ಯಯಗಳು ಗೋಚರಿಸಿವೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿನಿಧಿನಿಸುವ ಹಿರಿಯೂರು ವಿಧಾನಸಭೆ ಕ್ಷೇತ್ರದ ಹಳ್ಳಿಗಳು ಕುಡಿವ ನೀರಿನ ಅಭಾವದಿಂದ ತತ್ತರಿಸಿರುವ ಸಂಗತಿ ಬುಧವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಹಿರಂಗಗೊಂಡಿದೆ.

ವಾಣಿವಿಲಾಸ ಸಾಗರ ಜಲಾಶಯ ಇದ್ದರೂ ಕುಡಿವ ನೀರಿನ ಬವಣೆ ತಪ್ಪದಂತಾಗಿದೆ.

ಸಭೆಯಲ್ಲಿ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಬಸನಗೌಡ ಪಾಟೀಲ್, ಹಿರಿಯೂರು ತಾಲೂಕು ಹೊರತು ಪಡಿಸಿದರೆ ಇತರೆ ತಾಲೂಕುಗಳಲ್ಲಿ ಅಭಾವ ತಲೆದೋರಿಲ್ಲ. ಹಿರಿಯೂರು ತಾಲೂಕು ವ್ಯಾಪ್ತಿಯಲ್ಲಿ ಪ್ರಸ್ತುತ 7 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.

ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಿತ್ತು. ಹಾಗಾಗಿ ಈ ವರ್ಷ ಕುಡಿವ ನೀರಿನ ಅಭಾವ ತಲೆದೋರುವ ಸಾಧ್ಯತೆಗಳು ಕ್ಷೀಣವೆಂದು ಭಾವಿಸಲಾಗಿತ್ತು. ಹಿರಿಯೂರು ತಾಲೂಕಿನಲ್ಲಿ ಅಭಾವ ತಲೆದೋರಿರುವುದು ಅಧಿಕಾರಿಗಳ ಮತ್ತಷ್ಟು ಜವಾಬ್ದಾರಿಯುತರನ್ನಾಗಿ ಮಾಡಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಮಸ್ಯೆ ಉದ್ಭವಿಸುವ ಸಮಸ್ಯೆಯಾತ್ಮಕ ಗ್ರಾಮಗಳ ನಿಖರ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯಿಂದಾಗಿ ಹಾನಿಗೊಳಗಾದ ಬೆಳೆಹಾನಿ ಪ್ರದೇಶಗಳಿಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ನಿಖರ ವರದಿ ನೀಡಬೇಕು.

ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳು ಮಳೆಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸುತ್ತಿಲ್ಲ ಎಂದು ರೈತರು ದೂರುತ್ತಿದ್ದು, ಬೆಳೆಹಾನಿ ಪ್ರದೇಶಗಳ ಸ್ಥಳ ಪರಿಶೀಲನೆ ನಡೆಸದ ಅಧಿಕಾರಿಗಳ ಅಮಾನತಿಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಕೆ ನೀಡಿದರು.

ಹೊಳಲ್ಕೆರೆ ತಾಲೂಕಿನಲ್ಲಿ 25 ಎಕೆರೆ ಅಡಿಕೆ ಬೆಳೆ, 15 ಎಕರೆ ಮಾವು ಹಾಗೂ 3 ಎಕರೆ ಬಾಳೆ ಬೆಳೆ ಹಾನಿಯಾಗಿವೆ. ಚಳ್ಳಕೆರೆ ತಾಲೂಕಿನಲ್ಲಿ 120 ಎಕರೆ ಪಪ್ಪಾಯಿ ಬೆಳೆ ಹಾಗೂ 8.30 ಎಕರೆ ಕೃಷಿ ಬೆಳೆಗಳು ಹಾನಿಯಾಗಿವೆ. ಚಿತ್ರದುರ್ಗ ತಾಲೂಕಿನ ವಿ.ಪಾಳ್ಯ, ನಲ್ಲೆಕಟ್ಟೆ ಗ್ರಾಮಗಳಲ್ಲಿ ಅಡಿಕೆ ಬೆಳೆ ಹಾಗೂ ಪಪ್ಪಾಯಿ ಬೆಳೆ ಹಾನಿಯಾಗಿದೆ. ಹಿರಿಯೂರು ತಾಲೂಕಿನಲ್ಲಿ ಒಂದು ಜಾನುವಾರು ಮೃತಪಟ್ಟಿದೆ. ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಮನೆಯ ಮೇಲ್ಛಾವಣೆಯು ಹಾನಿಯಾಗಿದೆ. ಹೊಸದುರ್ಗ ತಾಲೂಕಿನಲ್ಲಿ 4.20 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಮೊಳಕಾಲ್ಮುರು ತಾಲೂಕಿನಲ್ಲಿ 1 ಹೆಕ್ಟೇರ್ ಕೃಷಿ ಹಾಗೂ 1 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿ ಹಾಗೂ ಒಂದು ಜಾನುವಾರು ಮೃತಪಟ್ಟಿದೆ, 6 ಮನೆಗಳು ಭಾಗಶಃ ಹಾನಿಗೊಳಗಾಗಿವೆ ಎಂದು ಆಯಾ ತಾಲೂಕಿನ ತಹಶೀಲ್ದಾರ್‌ಗಳು ಸಭೆಗೆ ಮಾಹಿತಿ ನೀಡಿದರು.

ಬೆಳೆ ಹಾನಿಗೆ ಸಂಬಂಧಿಸಿದಂತೆ ಎಲ್ಲ ವರದಿಯನ್ನು ಸಿದ್ಧತೆ ಮಾಡಿಟ್ಟುಕೊಂಡು, ಪರಿಹಾರ ಸಾಫ್ಟ್‌ವೇರ್ ಓಪನ್ ಆದ ತಕ್ಷಣ ಎಂಟ್ರಿ ಮಾಡಬೇಕು. ನಿಯಮಾನುಸಾರ ಪರಿಹಾರ ವಿತರಣೆಗೆ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ಸಾಧ್ಯ
ಔರಾದ್ ತಾಲೂಕು ಅದ್ಧೂರಿ ಕಸಾಪ ಸಮ್ಮೇಳನ