ಮಲ್ಲಯ್ಯ ಪೋಲಂಪಲ್ಲಿ
ಬೆಳೆದು ನಿಂತ ಮೆಣಸಿನಕಾಯಿ ಬೆಳೆಗಳ ಸಂರಕ್ಷಿಸಲು, ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಜಲಾಶಯದಿಂದ ಹರಿಸುವಂತೆ ಆಗ್ರಹಿಸಿ ಸಾವಿರಾರು ರೈತರು ನೀರಾವರಿ ಕಚೇರಿಗೆ ಬೀಗಮುದ್ರೆ ಹಾಕಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ 8ನೇ ದಿನಕ್ಕೆ ಕಾಲಿಟ್ಟಿದ್ದು, ಜೊತೆಗೆ, ಡಿ.25ರಂದು ಕರೆ ನೀಡಲಾಗಿದ್ದ ಶಹಾಪುರ ಬಂದ್‌ಗೆ ವ್ಯಾಪಕ ಬೆಂಬಲ ದೊರೆತಿದೆ.
ಬಂದ್ ಕರೆ ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ಶಹಾಪುರ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಭಾಗಶಃ ಬಂದ್ ಮಾಡುವ ಮೂಲಕ, ವ್ಯಾಪಾರಸ್ಥರು ರೈತರಿಗೆ ಬೆಂಬಲ ಸೂಚಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು, ರಸ್ತಾಪುರ ಕ್ರಾಸ್ ಹಾಗೂ ಭೀಮರಾಯನ ಗುಡಿ ಹತ್ತಿರ ಮುಂಜಾಗ್ರತ ಕ್ರಮವಾಗಿ ಪೊಲೀಸರು ವಾಹನಗಳನ್ನು ತಡೆದು ನಿಲ್ಲಿಸಿದ್ದರು.ನೀರು ಹರಿಸುವ ವಿಚಾರದಲ್ಲಿ ಸರ್ಕಾರ ಮನವಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ಇಲ್ಲಿನ ಬಸವೇಶ್ವರ ವೃತ್ತದ ಬಳಿ ಬೀದರ್-ಶ್ರೀರಂಗಪಟ್ಟಣ-150 ರಾಜ್ಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆಗೆ ಕಾವೇರಿಸಿದ್ದರು. ನೀರು ಬಿಡುವವರಿಗೆ ನಮ್ಮ ಹೋರಾಟ ರಾಜ್ಯ ಹೆದ್ದಾರಿ ಮೇಲೆ ಮುಂದುವರೆಯಲಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ನಾವು ನೀರು ಬಿಡಿ ಎಂದು ಕೇಳುತ್ತಿರುವುದು ಗಾಂಜಾ ಬೆಳೆಸುವುದಕ್ಕೆ ಅಲ್ಲ, 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿ ಬೆಳೆಯು ನಮ್ಮ ಕಣ್ಣೆದುರಿಗೆ ಒಣಗಿ ಹೋಗುತ್ತಿದೆ. ಒಂದು ಬೆಳಗಾದರೂ ನೀರು ಸಿಗುವದೆಂಬ ಆಶಾಭಾವದಿಂದ ಭೂಮಿಯಲ್ಲಿ ಬಿತ್ತಿದ್ದ ಬೆಳೆಗಳು ನೀರಿಲ್ಲದೇ ಸೊರಗಿ ಕಮರಿ ಬೆಂಡಾಗುತ್ತಿವೆ. ಕೂಡಲೇ ಸರ್ಕಾರ ಬೆಳೆಗಳ ನೆರವಿಗೆ ಧಾವಿಸಿ ಅನ್ನದಾತರನ್ನು ಉಳಿಸಬೇಕು, ಇಲ್ಲವಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದರು.
ಬಿಜೆಪಿ ಯುವ ಮುಖಂಡ ಅಮೀನ್ ರೆಡ್ಡಿ ಯಾಳಗಿ ಮಾತನಾಡಿ, ರೈತರ ಹೋರಾಟಕ್ಕೇ ಬೆಂಬಲ ಘೋಷಿಸಿದರು. ತಮ್ಮ ತಲೆ ಬೋಳಿಸಿಕೊಳ್ಳುವ ಮೂಲಕ ಪ್ರತಿಭಟನೆ ನಡೆಸಿದ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶ್ ಗೌಡ ಸುಬೇದಾರ್, ಸರ್ಕಾರ ರೈತರಿಗೆ ನೀರು ಹರಿಸುವಲ್ಲಿ ಜಿದ್ದಿಗೆ ಬಿದ್ದಂತೆ ಕಾಣುತ್ತದೆ. ರಾಜ್ಯದ ತುಂಬಾ ಹೆಂಡ ಸಾರಾಯಿಯ ಹೊಳೆ ಹರಿಸಲು ಸಿದ್ಧವಿದೆ. ಆದರೆ ರೈತರಿಗೇ ನೀರು ಕೊಡಲು ಸಿದ್ಧವಿಲ್ಲ ಎಂದು ಟೀಕಿಸಿದರು. ಅನೇಕ ರೈತ ಮುಖಂಡರು ತಮ್ಮ ತಲೆ ಬೋಳಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೆಂಡತಿಯ ಕಿವಿಯ ಬೆಂಡೋಲೆ ಮಾರಿ ಮೆಣಸಿನಕಾಯಿ ಬಿತ್ತನೆ ಮಾಡಿದ್ದೇನೆ. ನೀರಿಲ್ಲದೆ ಬೆಳೆಗಳು ಹಾಳಾಗುತ್ತಿವೆ. ಮಾಡಿದ ಸಾಲ ತೀರಿಸಲಾಗದೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಸಿಂಗನಹಳ್ಳ ಮೆಣಸಿನಕಾಯಿ ಬೆಳೆಗಾರ ಸೂಕೂರ್ ಸಾಬ ಬೇಸರ ವ್ಯಕ್ತಪಡಿಸಿದ್ದಾರೆ.