ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಅತಿಥಿಗೃಹದಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಅಲ್ಪಾವಧಿ ಬೆಳೆ ಬೆಳೆಯಲು ಕಟ್ಟು ಪದ್ಧತಿಯಡಿ ನಾಲ್ಕು ಕಟ್ಟು ನೀರು ಹರಿಸುವುದಕ್ಕೆ ನಿರ್ಧರಿಸಲಾಗಿದೆ. ಕಾಲ ಮಿತಿಯೊಳಗೆ ಅಲ್ಪಾವಧಿ ಬೆಳೆ ನಾಟಿ ಮಾಡಲು ರೈತರು ಮುಂದಾಗಬೇಕು. ವಿಳಂಬ ಮಾಡಿ ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರವಹಿಸುವಂತೆ ಸಲಹೆ ನೀಡಿದರು.
ಎರಡೂ ಬೆಳೆಗೆ ನೀರು ಕೊಡಲು ನಮ್ಮ ಆಲೋಚನೆ ಇದೆ. ಮುಂದಿನ ದಿನಗಳಲ್ಲಿ ವರುಣನ ಕೃಪೆ ಹೇಗಿರುತ್ತದೆ ಎಂದು ಈಗಲೇ ಹೇಳಲಾಗುವುದಿಲ್ಲ. ಹೀಗಾಗಿ ಬೇಗ ಒಟ್ಟಲು ಹಾಕಿ, ಅಲ್ಪಾವಧಿ ಬೆಳೆ ನಾಟಿ ಮಾಡಿ. ೧೮ ದಿನ ನೀರು ಬಿಡುವುದು ೧೨ ದಿನ ನಿಲ್ಲಿಸುವ ನಿರ್ಧಾರ ಮಾಡಿರುವುದಾಗಿ ಸ್ಪಷ್ಟಪಡಿಸಿದರು.ಕಳೆದ ಸಲ ಸಂಕ್ರಾಂತಿಗೆ ಆತಂಕದಿಂದಲೇ ನೀರು ಬಿಡಲಾಗಿತ್ತು. ಆದರೆ, ಈ ಬಾರಿ ಆ ರೀತಿಯ ಆತಂಕ ಇಲ್ಲ. ಸಂಕ್ರಾಂತಿ ವೇಳೆಗೆ ನೀರು ಬಿಡುತ್ತೇವೆ. ನೀರು ಸ್ಥಗಿತ ಮಾಡಿದ ಸಮಯದಲ್ಲಿ ನಾಲೆಗಳ ಮುಂದುವರೆದ ಕಾಮಗಾರಿ ನಡೆಸಲಾಗುವುದು ಎಂದರು.
೫೦ ಸಾವಿರ ಮತಗಳ ಅಂತರದಿಂದ ನಾನು ಸೋತಾಗಲೂ ಕುಮಾರಸ್ವಾಮಿ ವಿರುದ್ಧ ಮಾತನಾಡಲಿಲ್ಲ. ಅವರು ಮುಖ್ಯಮಂತ್ರಿಯಾದಾಗಲೂ ಅವರ ಆಡಳಿತವನ್ನು ಟೀಕೆ ಮಾಡಲಿಲ್ಲ. ಆದರೆ, ಕುಮಾರಸ್ವಾಮಿ ಅವರಿಗೆ ನಮ್ಮನ್ನ ನೋಡಿ ಸಹಿಸಲು ಆಗುತ್ತಿಲ್ಲ. ನನ್ನನ್ನು ಅವರು ಬದ್ಧ ವೈರಿ ಎಂದರು. ನಾನು ನನ್ನ ಸ್ನೇಹಿತರು, ಬ್ರದರ್ ಅಂತಾನೇ ಹೇಳುತ್ತೇನೆ. ರಾಜ್ಯದಲ್ಲಿ ಸಿಎಂ ಆಗಿದ್ದವರು, ಕೇಂದ್ರದಲ್ಲಿ ಮಂತ್ರಿ ಆಗಿದ್ದರೂ ಅವರಿಗೆ ಸಮಾಧಾನವಿಲ್ಲವೆಂದರೆ ನಾವೇನು ಹೇಳೋಣ ಎಂದು ಪ್ರಶ್ನಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ, ಮಂಡ್ಯದಲ್ಲಿ ೭ಕ್ಕೆ ೬ ಕ್ಷೇತ್ರ ಗೆದ್ದಿದ್ದೇವೆ. ಮೊದಲಿಂದಲೂ ಜಿಲ್ಲೆಗೆ ೨ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬುದು ನಮ್ಮ ಒತ್ತಾಯ. ಈ ಕುರಿತು ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ನುಡಿದರು.
೧೫ ನೀರು ಹರಿಸಿ ೮ ದಿನ ನಿಲ್ಲಿಸಲು ಕೆಂಪೂಗೌಡ ಆಗ್ರಹ
ಕೆಆರ್‌ಎಸ್ ಜಲಾಶಯದಿಂದ ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ೧೫ ದಿನ ನೀರು ಹರಿಸಿ ೮ ದಿನಗಳ ಕಾಲ ನೀರು ನಿಲುಗಡೆ ಮಾಡಿದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಆಗ್ರಹಿಸಿದ್ದಾರೆ.
ನೀರಾವರಿ ಸಲಹಾ ಸಮಿತಿ ಸಭೆಗೆ ಈ ಮೊದಲು ರೈತ ಮುಖಂಡರನ್ನೂ ಕರೆಯುತ್ತಿದ್ದರು. ಆಗ ನಾವು ಸಲಹೆ, ಅಭಿಪ್ರಾಯ ನೀಡುತ್ತಿದ್ದೆವು. ಇತ್ತೀಚೆಗೆ ರಾಜಕಾರಣಿಗಳು ಸಭೆಗೆ ನಮ್ಮನ್ನು ಕರೆಯುವುದನ್ನು ಬಿಟ್ಟಿದ್ದಾರೆ. ಸಚಿವರು, ಶಾಸಕರೇ ಸೇರಿಕೊಂಡು ಸಭೆ ನಡೆಸಲಿ. ಆದರೆ, ನೀರನ್ನು ಯಾವ ರೀತಿ ಬಿಡುಗಡೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ, ಬೆಳೆಗಳನ್ನು ಉಳಿವಿಗೆ ಎಷ್ಟು ದಿನ ನೀರು ಹರಿಸಿ ನಿಲ್ಲಿಸಿದರೆ ಒಳ್ಳೆಯದು ಎಂಬ ಬಗ್ಗೆ ಆಲೋಚಿಸಬೇಕು. ಅಧಿಕಾರಿಗಳ ನಿರ್ಧಾರದಂತೆ ಸಭೆ ತೀರ್ಮಾನ ಮಾಡಿದರೆ ರೈತರಿಗೆ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದ್ದಾರೆ.