ನೆಲ, ಜಲ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರದು: ಯುವಕರಿಗೆ ಎಂಎಲ್ಸಿ ಅನಿಲ್ ಕುಮಾರ್ ಕರೆ

KannadaprabhaNewsNetwork |  
Published : Nov 24, 2025, 01:15 AM IST
೨೩ಕೆಎಲ್‌ಆರ್-೬ಕೋಲಾರ ತಾಲೂಕಿನ ಗಂಗಾಪುರದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ಸಂಘದ ೨೪ನೇ ವರ್ಷದ ವಾರ್ಷಿಕೋತ್ಸವ ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ನುಡಿಗೆ ಉನ್ನತ ಸ್ಥಾನವಿದೆ ಮತ್ತು ಸುಮಾರು ೨೫೦೦ ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕನ್ನಡದ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಬೇಕಾದದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಯುವಕರಲ್ಲಿನ ಒಗ್ಗಟ್ಟು ಇದೇ ರೀತಿಯಲ್ಲಿ ಇರಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕಾರಣ ಮಾಡಬಾರದು. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.

ತಾಲೂಕಿನ ಗಂಗಾಪುರದಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ ಹಾಗೂ ಭುವನೇಶ್ವರಿ ಕನ್ನಡ ಯುವಕರ ಸಂಘದ ೨೪ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ನಾಡಿನ ಅನೇಕ ಮಹನೀಯರು ಕನ್ನಡ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ, ಗಡಿ ಜಿಲ್ಲೆಯಲ್ಲಿ ಸಂಘವು ಕನ್ನಡ ಹೋರಾಟಗಳಲ್ಲಿ ಮುಂಚೂಣಿಯಲ್ಲಿದೆ, ರಾಜ್ಯ ಸರ್ಕಾರವು ನಾಡು, ನುಡಿಯ ರಕ್ಷಣೆಗೆ ಹಾಗೂ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸಲು ಕನ್ನಡಿಗರ ಏಳ್ಗೆಗಾಗಿ ಹಲವು ಕಾರ್ಯಕ್ರಮ ಕೈಗೊಂಡಿದೆ ಎಂದರು.

ಇಂದು ನಾವೆಲ್ಲ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ನಮಗೆಲ್ಲ ತಿಳಿದಿರುವಂತೆ ಭಾರತ ಸ್ವತಂತ್ರ್ಯಗೊಂಡು ಗಣರಾಜ್ಯ ಉದಯವಾದ ಸಂದರ್ಭದಲ್ಲಿ ಈಗಿನ ಕರ್ನಾಟಕವು ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿ ಹೋಗಿತ್ತು, ನಂತರ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಮೈಸೂರು ರಾಜ್ಯ ರಚಿಸಲಾಯಿತು, ಆದಾದ ೧೭ ವರ್ಷಗಳ ನಂತರ ೧೯೭೩ ನ.೧ ರಂದು ದೇವರಾಜ ಅರಸು ಕರ್ನಾಟಕ ಎಂದು ಮರುನಾಮಕರಣ ಮಾಡಿರುವುದಾಗಿ ವಿವರಿಸಿದರು.

ಗಂಗಾಪುರದಲ್ಲಿ ಶಾಸಕ ಕೊತ್ತೂರು ಮಂಜುನಾಥ್ ನೇತೃತ್ವದಲ್ಲಿ ೫ ಲಕ್ಷ ರು. ವೆಚ್ಚದ ಹೈಮಾಸ್ಟ್ ದೀಪ , ೯ ಲಕ್ಷ ರು. ವೆಚ್ಚದ ಶುದ್ಧ ನೀರಿನ ಘಟಕ, ರಸ್ತೆ ಮತ್ತು ಚರಂಡಿಗೆ ೧೨ ಲಕ್ಷ ರು., ಗಂಗಾಪುರ ಗೇಟ್‌ನಿಂದ ಊರು ತನಕ ೫೦ ಲಕ್ಷ ರು. ವೆಚ್ಚದ ಡಾಂಬರೀಕರಣ, ಆಂಜನೇಯ ದೇವಾಲಯದ ಅಭಿವೃದ್ಧಿಗೆ ೪ ಲಕ್ಷ ರು. ಸೇರಿ ಒಟ್ಟು ೮೦ ಲಕ್ಷ ರು. ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.

ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಮಾತನಾಡಿ, ದೇಶದ ಭಾಷೆ ಮತ್ತು ಸಾಹಿತ್ಯ ಪರಂಪರೆಯಲ್ಲಿ ಕನ್ನಡ ನಾಡು ಮತ್ತು ನುಡಿಗೆ ಉನ್ನತ ಸ್ಥಾನವಿದೆ ಮತ್ತು ಸುಮಾರು ೨೫೦೦ ವರ್ಷಗಳಿಗೂ ಮೀರಿದ ಇತಿಹಾಸವಿದೆ. ಕನ್ನಡದ ಮೇಲೆ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಬೇಕಾದದ್ದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ. ಯುವಕರಲ್ಲಿನ ಒಗ್ಗಟ್ಟು ಇದೇ ರೀತಿಯಲ್ಲಿ ಇರಬೇಕು ಎಂದರು.

ಕೋಮುಲ್ ನಿರ್ದೇಶಕ ಚೆಲುವನಹಳ್ಳಿ ಡಿ.ನಾಗರಾಜ್, ವಕ್ಕಲೇರಿ ಸೊಸೈಟಿ ಅಧ್ಯಕ್ಷ ಪಾಲಾಕ್ಷಗೌಡ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ವಕ್ಕಲೇರಿ ಗ್ರಾಪಂ ಅಧ್ಯಕ್ಷ ರಾಧಿಕಾ ಮಂಜುನಾಥ್, ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಉಪಾಧ್ಯಕ್ಷ ಎಂ. ಆನಂದ್ ಕುಮಾರ್, ಸದಸ್ಯ ಶ್ರೀನಿವಾಸ್, ಕನ್ನಡ ಉಪನ್ಯಾಸಕ ಹನೀಫ್ ಸಾಬ್, ಮುಖಂಡರಾದ ಚಿದಾನಂದ್, ರಮೇಶ್, ಜನಪನಹಳ್ಳಿ ನವೀನ್ ಕುಮಾರ್ ಪ್ರಕಾಶ್, ಯಳಚಪ್ಪ, ಭುವನೇಶ್ವರಿ ಕನ್ನಡ ಯುವಕರ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ನಾಗರಾಜ್, ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಮುನಿಯಪ್ಪ, ಕಾರ್ಯದರ್ಶಿ ಮೋಹಿತ್ ಗೌಡ, ಖಜಾಂಚಿ ಸುರೇಶ್, ನರಸಿಂಹ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ