ನಕ್ಸಲ್‌ ಪ್ರತಿದಾಳಿ ಬಗ್ಗೆ ಅಲರ್ಟ್‌ ಆಗಿದ್ದೇವೆ, ತಡೆಯುತ್ತೇವೆ: ಪ್ರಣಬ್ ಮೊಹಂತಿ

KannadaprabhaNewsNetwork | Published : Nov 21, 2024 1:02 AM

ಸಾರಾಂಶ

ಸೋಮವಾರ ಸಂಜೆ 6 ಗಂಟೆ ಹೊತ್ತಿನಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲಿನ ಪೀತಬೈಲ್‌ ಎಂಬಲ್ಲಿನ ಮನೆ ಬಳಿ ಗುಂಡಿನ ಚಕಮಕಿ ನಡೆದಿದೆ. ಆತನ ಬಳಿ ಮೆಷಿನ್ ಗನ್, ಪಿಸ್ತೂಲ್‌, ಚಾಕು ದೊರಕಿದೆ. ಕಾರ್ಯಾಚರಣೆ ವೇಳೆ ಎಷ್ಟು ನಕ್ಸಲರು ಇದ್ದರು ಎಂದು ಎಎನ್‌ಎಫ್‌ಗೆ ಮಾಹಿತಿ ಇಲ್ಲ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ನಕ್ಸಲ್ ಹಾಗೂ ಎಎನ್‌ಎಫ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ನಕ್ಸಲ್ ವಿಕ್ರಂ ಗೌಡನ ಎನ್‌ಕೌಂಟರ್ ನಡೆದಿದೆ. ಈ ವಿಷಯದಲ್ಲಿ ಯಾವುದೇ ಸಂಶಯ ಬೇಡ. ನಕ್ಸಲ್ ಪ್ರತಿದಾಳಿ ಬಗ್ಗೆ ಅಲರ್ಟ್ ಆಗಿದ್ದು, ಅದನ್ನು ತಡೆಯುತ್ತೇವೆ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.ಅವರು ಹೆಬ್ರಿ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೋಮವಾರ ಸಂಜೆ 6 ಗಂಟೆ ಹೊತ್ತಿನಲ್ಲಿ ಹೆಬ್ರಿ ತಾಲೂಕಿನ ನಾಡ್ಪಾಲಿನ ಪೀತಬೈಲ್‌ ಎಂಬಲ್ಲಿನ ಮನೆ ಬಳಿ ಗುಂಡಿನ ಚಕಮಕಿ ನಡೆದಿದೆ. ಆತನ ಬಳಿ ಮೆಷಿನ್ ಗನ್, ಪಿಸ್ತೂಲ್‌, ಚಾಕು ದೊರಕಿದೆ. ಕಾರ್ಯಾಚರಣೆ ವೇಳೆ ಎಷ್ಟು ನಕ್ಸಲರು ಇದ್ದರು ಎಂದು ಎಎನ್‌ಎಫ್‌ಗೆ ಮಾಹಿತಿ ಇಲ್ಲ ಎಂದರು.ನಕ್ಸಲ್ ವಿಕ್ರಮ್ ಗೌಡ ಶರಣಾಗತಿಯ ಬಗ್ಗೆ ಮಾತನಾಡಿದ ಡಿಜಿಪಿ, ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ಮಾಡಿರಲಿಲ್ಲ. ವಿಕ್ರಂ ಗೌಡನ ಮೇಲೆ ಹಲವಾರು ಕೇಸುಗಳಿದ್ದವು. ಆತ ಮೋಸ್ಟ್ ವಾಂಟೆಡ್, ರಾಜ್ಯಮಟ್ಟದ ನಕ್ಸಲ್‌ ನಾಯಕನಾಗಿದ್ದ. ಇದು ಫೇಕ್ ಎನ್‌ಕೌಂಟರ್ ಅಲ್ಲ. ಮಲೆನಾಡಿನ ಭಾಗಗಳಲ್ಲಿ ಕಾಡುಗಳಲ್ಲಿ ಇನ್ನೂ ಕೂಂಬಿಂಗ್ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ನಕ್ಸಲರ ಶರಣಾಗತಿಯೇ ನಮ್ಮ ಮೂಲ ಉದ್ದೇಶ ಹೊರತು ಎನ್‌ಕೌಂಟರ್ ಅಲ್ಲ. ಶರಣಾಗತಿಯ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್‌ಗಳಿವೆ. ಅದನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬಹುದಾಗಿದೆ. ನಕ್ಸಲ್‌ ಚಟುವಟಿಕೆ ಬಗ್ಗೆ ಸಾರ್ವಜನಿಕರು ಭಯಪಡಬೇಕಾದ ಅವಶ್ಯಕತೆ ಇಲ್ಲ. ಅವರ ರಕ್ಷಣೆಗಾಗಿಯೇ ನಾವಿದ್ದೇವೆ ಎಂದರು.ಮಲೆನಾಡು ಪ್ರದೇಶಗಳಾದ ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದ.ಕ., ಕೇರಳ ನಡುವೆ ನಕ್ಸಲ್ ಚಟುವಟಿಕೆಗಳಿವೆ. ಕೇರಳ ಜೊತೆ ನಮ್ಮ ರಾಜ್ಯದ ಎಎನ್‌ಎಫ್ ಸಂಪರ್ಕ ಸಂಬಂಧ ಚೆನ್ನಾಗಿದೆ.‌ ಈ ವರ್ಷದ ಏಪ್ರಿಲ್‌ನಲ್ಲಿ ದಕ್ಷಿಣ ಕನ್ನಡ, ಕೊಡಗಿನಲ್ಲಿ ವಿಕ್ರಂ ಗೌಡನ ಚಲನವಲನಗಳು ಇದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದೆವು. ಕಾರ್ಕಳ ಪ್ರದೇಶದಲ್ಲಿ ತಿಂಗಳ ಹಿಂದೆ ಆತನ ಓಡಾಟದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಊಹಾಪೋಹ ಮತ್ತು ಅರ್ಧ ಸತ್ಯದ ಮಾಹಿತಿಗೆ ಯಾರು ಕಿವಿಗೊಡಬಾರದು ಎಂದು ಡಿಜಿಪಿ ಪ್ರಣಬ್ ಮೊಹಂತಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಎನ್‌ಎಫ್ ಎಸ್ಪಿ ಜಿತೇಂದ್ರ ದಯಾಮ, ಉಡುಪಿ ಜಿಲ್ಲಾ ಎಸ್ಪಿ ಅರುಣ್ ಕೆ. ಉಪಸ್ಥಿತರಿದ್ದರು.

Share this article