ನರಗುಂದ: ಈ ಭೂಮಿಯಲ್ಲಿ ಪ್ರತಿಯೊಂದು ಜೀವಿ ದೇವನಿಂದ ನಿರ್ಮಿತವಾಗಿದೆ. ನಾವು ಈ ಭೂಮಿಗೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದರ ಬಗ್ಗೆ ಮಾನವರು ಚಿಂತಿಸಬೇಕು ಎಂದು ಗದಗ ಜಿಲ್ಲೆಯ ಡೋಣಿ ಗ್ರಾಮದ ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಶಶಿಧರ ಶಾಸ್ತ್ರಿಗಳು ಹಿರೇಮಠ ಹೇಳಿದರು.
ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದಲ್ಲಿ ನಡೆದ ಬಸವ ಪುರಾಣದ 2ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಜಗತ್ತು ಬಹಳ ವಿಶಾಲವಾಗಿದೆ, ಈ ಭೂಮಿಯಲ್ಲಿ ಮನುಷ್ಯ ಎಲ್ಲಾ ನಾನು ಮಾಡಿದ್ದೇನೆ ಎಂದು ಜಂಭದಿಂದ ಹೇಳುವುದನ್ನು ಕೈ ಬಿಡಬೇಕು. ಏಕೆಂದರೆ ಈ ಜಗದ 84 ಕೋಟಿ ಜೀವರಾಶಿಗಳಿಗೆ ಒಂದು ಜೀವ ಕಳೆ ಕೊಟ್ಟವನು ಆ ಭಗವಂತನಾಗಿದ್ದಾನೆ. ಇಂದು ಈ ಜಗದಲ್ಲಿ ನೀರು, ಗಾಳಿ, ಬೆಳಕು ನೀಡಿದ್ದು ಮನುಷ್ಯ ಅಲ್ಲ, ಇದನ್ನು ನೀಡಿದ್ದು ಆ ದೇವರು ಎಂದು ನಾವು ತಿಳಿದು ಬಾಳಬೇಕು ಎಂದರು.ಇಂದು ನಾವು ಬಸವ ಪುರಾಣ ಕೇಳಿ ಪ್ರಸಾದ ಸ್ವೀಕರಿಸಿ ಮನೆಗೆ ಹೋದರೆ ಸಾಲದು, ನಾವು ಪುರಾಣದಲ್ಲಿ ಕೇಳಿದ ಮಾತುಗಳು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾದರೆ ಮಾತ್ರ ಈ ಪುರಾಣ ಹಚ್ಚಿದ್ದಕ್ಕೆ ಸಾರ್ಥಕವಾಗುತ್ತದೆ. ಈ ಆಧುನಿಕ ಯುಗದಲ್ಲಿ ನಾವು ಎಷ್ಟೇ ಮುಂದುವರಿದರು ಕೂಡ ನಾವು, ನೀವು, ಎಲ್ಲರೂ ನಮ್ಮ ಧರ್ಮದ ಆದರ್ಶಗಳನ್ನು ಬಿಟ್ಟು ಬದುಕಲು ಯಾರಿಗೂ ಆಗುವುದಿಲ್ಲ. ಆದ್ದರಿಂದ ನಾವು ಬದುಕುವ ದಾರಿ ಬಗ್ಗೆ ಮೊದಲು ತಿಳಿದುಕೊಳ್ಳಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಶಾಂತಲಿಂಗ ಶ್ರೀಗಳು, ಬಸವ ಪುರಾಣದ ಉಪಾಧ್ಯಕ್ಷ ಪ್ರಕಾಶಗೌಡ ತಿರಕನಗೌಡ್ರ, ಕಾರ್ಯದರ್ಶಿ ವೀರಯ್ಯ ದೊಡ್ಡಮನಿ, ಕಟ್ಟಡ ಸಮಿತಿ ಉಪಾಧ್ಯಕ್ಷ ಗುರುಬಸವ ಶಲ್ಲಿಕೇರಿ, ಕೋಶಾಧ್ಯಕ್ಷ ನಾಗನಗೌಡ ತಿಮ್ಮನಗೌಡ, ಹನುಮಂತ ಕಾಡಪ್ಪನವರ, ಶಿಕ್ಷಕ ಬಿ.ಆರ್.ಸಾಲಿಮಠ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.