ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಲಭಿಸಿರುವುದು ನಮ್ಮೆಲ್ಲರ ಹೆಮ್ಮೆ: ಕೋಟಾ ಶ್ರೀನಿವಾಸ್‌ ಪೂಜಾರಿ

KannadaprabhaNewsNetwork | Published : Sep 23, 2024 1:21 AM

ಸಾರಾಂಶ

ಚಿಕ್ಕಮಗಳೂರು, ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

- ಕರ್ನಾಟಕ 50 ರ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಸಂದ ಹಿನ್ನಲೆಯಲ್ಲಿ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ 50 ರ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು. ಕನ್ನಡ ಭಾಷೆಗೆ ಲಭಿಸಿರುವಷ್ಟು ಜ್ಞಾನಪೀಠ ಪ್ರಶಸ್ತಿಗಳು ಬೇರೆ ಯಾವುದೇ ಭಾಷೆಗೆ ಬಂದಿಲ್ಲ ಎಂದ ಅವರು, ಕನ್ನಡ ಭಾಷೆ ಹಿರಿಮೆ ಗರಿಮೆ, ಕನ್ನಡ ನಾಡಿನ ಕಂಪು ವಿಶ್ವದಾದ್ಯಂತ ಪಸರಿಸಲಿ. ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿ ನಾಡು ಎಂಬೆಲ್ಲಾ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚ ಹಸಿರಿನ, ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ, ಸಾಧು ಸಂತರು, ದಾಸರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡಿಗೆ ಧೀಮಂತ ಶಕ್ತಿ ಇದೆ. ಈ ಸಮೃದ್ಧ ಸುಂದರ ನಾಡಿನಲ್ಲಿರುವ ನಾವೆಲ್ಲರೂ ಭಾಷಾ ಪ್ರೇಮ ಬೆಳೆಸಿಕೊಂಡು ಎಲ್ಲಾ ಜಾತಿ, ಮತ, ಪಂಥಗಳ ಜನರು ಒಗ್ಗೂಡಿ ಕನ್ನಡ ರಥ ಯಾತ್ರೆಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುನ್ನಡೆಯಲು ಸಹಕರಿಸುವಂತೆ ಹೇಳಿದರು.

ವಿಧಾನ ಪರಿಷತ್ ಶಾಸಕ ಸಿ.ಟಿ. ರವಿ ಮಾತನಾಡಿ, ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಾಡು, ಭಾಷೆ ಉಳಿಸಿ ಬೆಳೆಸುವಲ್ಲಿ ಅನೇಕ ಕವಿಗಳು, ಸಾಧು ಸಂತರು, ಶ್ರಮಿಸಿದ್ದಾರೆ. ಕನ್ನಡ ಕೇವಲ ಭಾಷೆಯಾಗದೆ ನಮ್ಮ ಉಸಿರೆಂದು ಭಾವಿಸಿದಲ್ಲಿ ಕನ್ನಡ ಕಂಪು ವಿಶ್ವದಾದ್ಯಂತ ಹರಡುತ್ತದೆ. ಮಕ್ಕಳಲ್ಲಿ ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸದ ಕುರಿತ ಮಾಹಿತಿ ಭಿತ್ತಿದಲ್ಲಿ ಅದರ ಮಹತ್ವ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ. ಮಕ್ಕಳೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಿದರೆ ಬಳಕೆ ಹೆಚ್ಚಾಗಿ ಕನ್ನಡದ ಉಳಿವು ಸಾಧ್ಯ ಎಂದರು.

ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡ ಮಾತನಾಡಿ, ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯ ಏಕೀಕರಣಗೊಳಿಸುವ ಕನಸು ಕಂಡ ಮೊದಲ ವ್ಯಕ್ತಿ. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಇಂದಿಗೆ 50 ವರ್ಷ ಪೂರ್ಣಗೊಂಡಿದೆ. ಕನ್ನಡ ನಾಡು ಅನೇಕರಿಗೆ ಜೀವನ ರೂಪಿಸಿ ಕೊಡುವ ಪ್ರದೇಶ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಕನ್ನಡ ರಥ ಯಾತ್ರೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದರು. ಈಗ ರಥ ಜಿಲ್ಲೆಗೆ ಆಗಮಿಸಿದ್ದು, ಎಲ್ಲಾ ತಾಲೂಕುಗಳಲ್ಲಿ ಸಂಚರಿಸಿ ಕನ್ನಡದ ಕಂಪು ಪಸರಿಸಲಿದೆ ಎಂದು ಹೇಳಿದರು.

ಜಾನಪದ ಕಲಾ ತಂಡಗಳು, ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿ, ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರಥವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಬೋಳರಾಮೇಶ್ವರ ರಸ್ತೆ ಮಾರ್ಗವಾಗಿ ಐ.ಜಿ.ರಸ್ತೆ, ಹನುಮಂತಪ್ಪ ವೃತ್ತ ಮಾರ್ಗವಾಗಿ ಜಿಲ್ಲಾ ಪಂಚಾಯಿತಿವರೆಗೆ ತಲುಪಿ ಕಡೂರಿಗೆ ಬಿಳ್ಕೋಡಲಾಯಿತು.

22 ಕೆಸಿಕೆಎಂ 3

ರಾಜ್ಯಕ್ಕೆ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ 50 ರ ಸಂಭ್ರಮದ ಕನ್ನಡ ಜ್ಯೋತಿ ರಥಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಚಾಲನೆ ನೀಡಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಸಿ.ಟಿ. ರವಿ ಇದ್ದರು.

Share this article