ಕನ್ನಡಪ್ರಭ ವಾರ್ತೆ ಕೋಲಾರ
ಸರ್ಕಾರಿ ನೌಕರರ ಸಂಘ ಶತಮಾನದ ಇತಿಹಾಸ ಹೊಂದಿರುವ ಸಂಘಟನೆಯಾಗಿದ್ದು, ನೌಕರರ ಪರ ಹೋರಾಟ ಮಾಡುತ್ತಾ, ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದೆ, ಆದ್ದರಿಂದ ಹಗಲು- ರಾತ್ರಿ ನೌಕರರ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಅಜಯ್ ಕುಮಾರ್ ತಿಳಿಸಿದರು.ನಗರದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಸಂಘದ ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಬಾಹ್ಯ ವ್ಯಕ್ತಿಯು ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವುದಾಗಲಿ, ಇಲ್ಲವೇ ಒತ್ತಡ ಹಾಕುವುದಾಗಲಿ ಮಾಡಿದರೆ ನಮ್ಮ ಗಮನಕ್ಕೆ ತಂದರೆ ನಿಮ್ಮ ಪರ ಕೆಲಸ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ವಿ.ಮುರಳಿಮೋಹನ್ ಮಾತನಾಡಿ, ಶಿಕ್ಷಕರ ಪರವಾದ ಕೆಲಸದಲ್ಲಿ ತಾವೆಲ್ಲರೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದು, ಸಕಾಲದಲ್ಲಿ ಶಿಕ್ಷಕರ ಮತ್ತು ನೌಕರರ ಸೇವೆಗಳನ್ನು ತಲುಪಿಸಲು ಎಲ್ಲರೂ ಪ್ರಾಮಾಣಿಕವಾಗಿ ದುಡಿಯಬೇಕು. ನಿಮ್ಮ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ನಾವು ಜೊತೆಗಿರುತ್ತೇವೆ. ಯಾವುದೇ ಕಾರಣಕ್ಕೂ ಯಾರೂ ಅಂಜಿಕೆಯಿಂದ ಕರ್ತವ್ಯ ನಿರ್ವಹಿಸುವ ಅವಶ್ಯಕತೆಯಿಲ್ಲ ಎಂದರು.
ಜಿಲ್ಲಾ ಕಚೇರಿಯಲ್ಲಿರುವ ಶೌಚಾಲಯವನ್ನು ನವೀಕರಣಗೊಳಿಸುವ ಜವಾಬ್ದಾರಿ ಜಿಲ್ಲಾಧ್ಯಕ್ಷರು ವಹಿಸಿಕೊಳ್ಳಬೇಕು, ಆದಷ್ಟು ಬೇಗ ಈ ಕೆಲಸ ಪೂರ್ಣಗೊಳಿಸಿ ಮಹಿಳಾ ಸಿಬ್ಬಂದಿ ಮತ್ತು ನೌಕರರಿಗೆ ಅನುಕೂಲ ಮಾಡಿಕೊಡಲು ಮನವಿ ಸಲ್ಲಿಸಿದರು. ಎನ್ ಪಿಎಸ್ ನಿಂದ ಒಪಿಎಸ್ ತರುವುದು. ಹಬ್ಬದ ಮುಂಗಡ ೨೫ ಸಾವಿರದಿಂದ ೫೦ ಸಾವಿರಕ್ಕೆ ಹೆಚ್ಚಿಸುವುದು. ಕ್ಯಾಶ್ಲೆಸ್ ಚಿಕಿತ್ಸೆ. ನೌಕರರ ಮರಣದ ನಂತರ ಅಂತ್ಯಸಂಸ್ಕಾರಕ್ಕೆ ಹಣವನ್ನು ೧೫ ಸಾವಿರ ರು.ಗಳಿಂದ ೨೫ ಸಾವಿರ ರು.ಗಳಿಗೆ ಹೆಚ್ಚಿಸುವುದು. ಮುಂತಾದ ಬದಲಾವಣೆಗಳನ್ನು ತರಲು ರಾಜ್ಯ ಕಾರ್ಯಕಾರಿ ಸಮಿತಿಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.ರಾಜ್ಯ ಪರಿಷತ್ ಸದಸ್ಯ ಶ್ರೀನಿವಾಸರೆಡ್ಡಿ ಮಾತನಾಡಿ, ನಮ್ಮನ್ನು ಕರೆಸಿ ಅಭಿನಂದಿಸಿ ನೌಕರರ ಪರ ಹೋರಾಟ ಮಾಡಲು ಪ್ರೇರೆಪಿಸಿದ ತಮಗೆ ಧನ್ಯವಾದಗಳು, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಸದಾ ಜೊತೆಯಲ್ಲಿ ನಾವು ಇರುತ್ತೇವೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ಮಾತನಾಡಿ, ನೌಕರರು ಯಾವುದೇ ಸಂದರ್ಭದಲ್ಲಿ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಬಹುದು. ನಿಮ್ಮ ಸೇವೆಗೆ ನಾವು ಸದಾ ಸಿದ್ಧರಿರುತ್ತೇವೆ ಎಂದರು.ಉಪನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿದರು. ಡಿವೈಪಿಸಿ ಶಂಕರೇಗೌಡ ನಿರೂಪಿಸಿ, ತಾಂತ್ರಿಕ ಸಹಾಯಕ ಶರಣಪ್ಪ ಜಮಾದಾರ್ ವಂದಿಸಿದರು.