ದಾವಣಗೆರೆಯ ಮಾಜಿ ಯೋಧರಿಂದ ಘೋಷಣೆ । ರಾಷ್ಟ್ರ ಧ್ವಜ ಹಿಡಿದು ಪ್ರಕಟ । ಹೋರಾಡುವ ನಮ್ಮ ಕಿಚ್ಚು ಇನ್ನೂ ಆರಿಲ್ಲ
ಭಾರತೀಯ ಸೇನೆಗೆ ಪಾಕಿಸ್ಥಾನ ಯಾವುದರಲ್ಲೂ ಸಾಟಿ ಇಲ್ಲ, ಇಂತಹ ಕುತಂತ್ರಿ ಪಾಕಿಸ್ತಾನದ ವಿರುದ್ಧ ಅಗತ್ಯ ಬಿದ್ದರೆ, ನಮ್ಮ ಸಹಾಯದ ಬೇಕೆನಿಸಿದರೆ ನಾವೆಲ್ಲರೂ ಮತ್ತೆ ಯುದ್ಧಕ್ಕೆ ಸಿದ್ಧ ಎಂದು ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ಸಂಘದ ಮಾಜಿ ಯೋಧರು ಘೋಷಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ, ಮಾಜಿ ಯೋಧ ಎಂ.ಎಸ್.ಮಹೇಂದ್ರಕರ್, ಪಹಲ್ಗಾಂನಲ್ಲಿ ಉಗ್ರರು 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ ನಂತರ ಆಪರೇಷನ್ ಸಿಂದೂರ ಮೂಲಕ ಉಗ್ರರ ತಾಣಗಳ ಮೇಲೆ ದಾಳಿ ಮಾಡಿದ್ದು, ಇದೀಗ ಯುದ್ಧದ ಕಾರ್ಮೋಡ ಕವಿದ ಪರಿಸ್ಥಿತಿಯಲ್ಲಿ ಸೇನೆಗೆ ನಾವು ಸಿದ್ಧರಿದ್ದೇವೆ ಎಂದರು.ಸೇನಾ ವೃತ್ತಿಯಿಂದ ನಾವು ನಿವೃತ್ತರಾಗಿರಬಹುದು. ಆದರೆ, ನಾಡು, ನುಡಿ, ದೇಶ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ. ಭಾರತೀಯ ಸೇನೆಗೆ ನಮ್ಮ ಅಗತ್ಯ ಬಿದ್ದರೆ, ಮತ್ತೆ ಸೇನೆ ಜೊತೆಗೆ ಕೈಜೋಡಿಸಲು ನಾವೆಲ್ಲರೂ ಸಿದ್ಧ. ಅಗತ್ಯ ಬಿದ್ದರೆ ಮತ್ತೆ ಸೇನೆಗೆ ನಮ್ಮ ಸೇವೆ ನೀಡಲು ತಯಾರಾಗಿದ್ದೇವೆ ಎಂದು ತಿಳಿಸಿದರು.
ಅವಕಾಶ ನೀಡಿದರೆ ನಾವು ಯುದ್ಧಕ್ಕೆ ಹೋಗಲು ಸಿದ್ಧರಿದ್ದೇವೆ. ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ದಾವಣಗೆರೆ ಜಿಲ್ಲೆಯ ಮಾಜಿ ಸೈನಿಕರ ಮಾಹಿತಿ ಕೇಳಿದ್ದು, ನಾವು ಪಟ್ಟಿಯನ್ನು ಸಹ ನೀಡಿದ್ದೇವೆ. ಅಗತ್ಯ ಬಿದ್ದರೆ ನಾವೆಲ್ಲರೂ ಮತ್ತೆ ದೇಶ ಸೇವೆಗೆ ಸಿದ್ಧರಿದ್ದೇವೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ವಾಸಪ್ಪ, ಕಾರ್ಯದರ್ಶಿ ಬಿ.ವಿ.ಚಂದ್ರಪ್ಪ, ಎಚ್.ಪ್ರಕಾಶ, ಸರ್ವಶ್ರೀ ಚನ್ನಪ್ಪ, ಜಿ.ಅಂದಪ್ಪ, ಎನ್.ಎಂ.ಬಸಪ್ಪ, ಎಚ್.ಬಸವರಾಜ, ಕಲ್ಯಾಣಕುಮಾರ, ಚಂದ್ರಪ್ಪ ಬೆಳ್ಳೂಡಿ, ಉದಯಕುಮಾರ, ರಘುನಾಥ, ಚಂದ್ರಪ್ಪ, ಕೆ.ಬಿ.ಸಂತೋಷಕುಮಾರ ಇತರರು ಇದ್ದರು.
ದಾವಣಗೆರೆಯಲ್ಲಿ ಸಮುದಾಯ ನಿರ್ಮಾಣ ಮಾಡಿ ಯುವಕರಿಗೆ ತರಬೇತಿ ನೀಡುವ ಉದ್ದೇಶ ಸಂಘ ಹೊಂದಿದೆ. ದಾವಣಗೆರೆ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ಧೇಶ ಸಂಘಕ್ಕೆ ಎಂಸಿಸಿಎ ಬ್ಲಾಕ್‌ನಲ್ಲಿ ಮಳಿಗೆ ನೀಡಿದ್ದ ಪಾಲಿಕೆಯು ಈಗ ಅದನ್ನು ವಾಪಾಸ್ ಪಡೆದಿದೆ. ಇದು ಮಾಜಿ ಸೈನಿಕರ ಬಗ್ಗೆ ಪಾಲಿಕೆ ಅಧಿಕಾರಿಗಳು ಹೊಂದಿರುವ ಕಾಳಜಿ ಸಾಕ್ಷಿಯಾಗಿದೆ