ರಾಮನ ಪ್ರಾಣಪ್ರತಿಷ್ಠೆಯಿಂದ ಧನ್ಯ: ಪೇಜಾವರ ಶ್ರೀ

KannadaprabhaNewsNetwork |  
Published : Jan 23, 2024, 01:45 AM ISTUpdated : Jan 23, 2024, 01:57 PM IST
ಪ್ರಾಣ ಪ್ರತಿಷ್ಠೆ ಮುಗಿಸಿ ಆಯೋಧ್ಯೆಯಲ್ಲಿ ತಮ್ಮ ಮಠಕ್ಕೆ ಹಿಂತಿರುಗಿದ ಶ್ರೀಗಳಿಗೆ ನೂರಾರು ಭಕ್ತರು ಪುಷ್ಪವೃಷ್ಟಿ ನಡೆಸಿ ಗೌರವಿಸಿದರು. | Kannada Prabha

ಸಾರಾಂಶ

‘ಅಯೋಧ್ಯೆಯ ರಾಮಮಂದಿರದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ಸಾಂಗವಾಗಿ ನೆರವೇರಿದೆ, ಇದರಿಂದ ನಾವು ಧನ್ಯರಾಗಿದ್ದೇವೆ’ ಇದು ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ದಕ್ಷಿಣ ಭಾರತದ ಏಕೈಕ ಟ್ರಸ್ಟಿ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂತಸದ ಉದ್ಘಾರ.

ಕನ್ನಡಪ್ರಭ ವಾರ್ತೆ ಉಡುಪಿ

‘ಅಯೋಧ್ಯೆಯ ರಾಮಮಂದಿರದಲ್ಲಿ ರಾಮದೇವರ ಪ್ರಾಣ ಪ್ರತಿಷ್ಠೆ ಸಾಂಗವಾಗಿ ನೆರವೇರಿದೆ, ಇದರಿಂದ ನಾವು ಧನ್ಯರಾಗಿದ್ದೇವೆ’ ಇದು ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ದಕ್ಷಿಣ ಭಾರತದ ಏಕೈಕ ಟ್ರಸ್ಟಿ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಂತಸದ ಉದ್ಘಾರ.

ಅಯೋಧ್ಯೆಯಲ್ಲಿ ರಾಮದೇವರ ಪ್ರಾಣಪ್ರತಿಷ್ಠೆಯ ನಂತರ ಸೋಮವಾರ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ದೇವರ ಪ್ರಾಣ ಪ್ರತಿಷ್ಠೆ ಎಂದರೆ ವಿಗ್ರಹವನ್ನು ತಂದು ಗರ್ಭಗುಡಿಯಲ್ಲಿಡುವುದು ಎಂದುಕೊಳ‍್ಳುತ್ತಾರೆ. 

ಆದರದು ಹಾಗಲ್ಲ, ಅದು ಕೇವಲ ವಿಗ್ರಹದ ಸ್ಥಾಪನೆ ಅಷ್ಟೇ, ಪ್ರಾಣಪ್ರತಿಷ್ಠೆ ಎನ್ನುವುದು ಸುದೀರ್ಘವಾದ ಪ್ರಕ್ರಿಯೆ. ಮಾನವರಾದ ನಾವು ಭಗವಂತನನ್ನು ಕರೆದು ಶಿಲಾಪ್ರತಿಮೆಯಲ್ಲಿ ಸನ್ನಿಹಿತನಾಗು ಅಂತ ಪ್ರಾರ್ಥಿಸಬೇಕು. 

ಅದಕ್ಕೆ ಕೆಲವು ಮೂಲಮಂತ್ರಗಳ‍ ಜಪ ಆಗಬೇಕು, ತತ್ವನ್ಯಾಸ, ಮಂತ್ರನ್ಯಾಸ ಆಗಬೇಕು. ಅದಕೋಸ್ಕರ ಭಾನುವಾರ ಮತ್ತು ಸೋಮವಾರ ಉಪವಾಸವಿದ್ದು ನಾವದನ್ನು ನೆರವೇರಿಸಿದ್ದೇವೆ ಎಂದು ಸಂತೃಪ್ತಿ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಂದು ಷೋಡಶೋಪಚಾರ ಪೂಜೆಗಳನ್ನು, ಧೂಪದೀಪ ನೈವೇದ್ಯಗಳನ್ನು ಸಮರ್ಪಣೆ ಮಾಡಿದರು. 

ಅವರು ಧಾರ್ಮಿಕ ವ್ಯಕ್ತಿ, ಅವರಿಗೆ ಶಾಸ್ತ್ರದ ಪರಿಚಯ ಇದೆ, ಪೂಜೆ ಉಪವಾಸ ವ್ರತಗಳನ್ನು ನಡೆಸುವವರು ಮತ್ತು ಸಂಸ್ಕೃತವನ್ನು ಬಲ್ಲವರಾದ್ದರಿಂದ ವೈದಿಕರು ಮಂತ್ರಗಳನ್ನು ಹೇಳುವಾಗ ಅವರೂ ಹೇಳುತ್ತಿದ್ದರು. 

ಅದಕ್ಕೆ ಪೂರಕವಾಗಿ ಎಲ್ಲ ಪ್ರಕ್ರಿಯೆಗಳನ್ನು ನಡೆಸುತ್ತಿದ್ದರು. ಎಲ್ಲವೂ ಚೆನ್ನಾಗಿ ನಡೆಯಿತು ಎಂದು ಮೋದಿ ಅವರನ್ನು ಶ್ಲಾಘಿಸಿದರು.ಇಡೀ ಭರತಖಂಡದಲ್ಲಿ ರಾಮನ ಬಗ್ಗೆ ಇಂದು ಭಕ್ತಿ, ಆದರ, ಅಭಿಮಾನ ತುಂಬಿ ಹರಿದಿದೆ ಎಂದರೆ ಇಲ್ಲಿ ರಾಮನ ಭಕ್ತಿ ಸದಾ ಜಾಗೃತವಾಗಿದೆ ಎಂದರ್ಥ. 

ಇಲ್ಲದಿದ್ದರೆ ಎಲ್ಲಿಯ ತ್ರೇತಾಯುಗ, ಎಲ್ಲಿಯ ಕಲಿಯುಗ. ನಡುವೆ ಒಂದು ಯುಗವೇ ಸಂದು ಹೋಗಿದೆ, ಆದರೂ ಜನರು ಇಷ್ಟು ಭಕ್ತಿ ತೋರಿಸಿದ್ದಾರೆ ಎಂದರೆ ಅಚ್ಚರಿಯಾಗುತ್ತದೆ ಎಂದರು.

ಪ್ರಧಾನಿ ಮೋದಿ ಅವರು ಇಂದಿನಿಂದ ಭಾರತದಲ್ಲಿ ಹೊಸ ಶಕೆ ಆರಂಭವಾಯಿತು ಎಂದು ಹಾರೈಸಿದ್ದಾರೆ. ಅವರು ಹಾರೈಸಿದರೆ ಸಾಲದು, ಹಾರೈಕೆ ನಿಜವಾಗುವುದಕ್ಕೆ ನಮ್ಮ ಪ್ರಯತ್ನವೂ ಬೇಕು. 

ನಮ್ಮ ಸಂಸ್ಕೃತಿಯನ್ನು ಮಕ್ಕಳಲ್ಲಿ ತುಂಬಬೇಕು, ರಾಮ ಅಂದರೆ ಸದ್ಗುಣಗಳ ಪ್ರತೀಕ, ಅವುಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಹೊಸ ಶಕೆ ಖಂಡಿತ ಆರಂಭವಾಗುತ್ತದೆ ಎಂದು ಅವರು ಎಚ್ಚರಿಕೆಯ ಮಾತುಗಳನ್ನೂ ಹೇಳಿದರು.

ಇನ್ನು ಕರ್ನಾಟಕಕ್ಕೂ, ಅಯೋಧ್ಯೆಗೂ ಇರುವ ಸಂಬಂಧ ಏನಂತ ಹೇಳೋಣ, ಅದು ರಾಮನ ಅನುಗ್ರಹ. ರಾಮ ದೇವರ ಸೇವೆಯಲ್ಲಿ ಪ್ರಧಾನ ಪಾತ್ರ ಆಂಜನೇಯ ದೇವರದ್ದು, ಅವನು ಅವತರಿಸಿದ್ದೇ ಕರ್ನಾಟಕದ ಪುಣ್ಯನೆಲದಲ್ಲಿ. 

ಕರ್ನಾಟದಲ್ಲಿ ಈವತ್ತಿಗೂ ಪ್ರಾಣದೇವರ ಶಕ್ತಿ ಅಷ್ಟೂ ಜಾಗೃತವಾಗಿದೆ. ಆದ್ದರಿಂದ ರಾಮ ದೇವ ಕರ್ನಾಟಕದಿಂದ ತುಂಬಾ ಸೇವೆಗಳನ್ನು ಸ್ವೀಕರಿಸುತ್ತಿದ್ದಾನೆ ಎಂದವರು ಹೆಮ್ಮೆ ವ್ಯಕ್ತಪಡಿಸಿದರು.

ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಬಳಕೆಯಾದ ಕಲ್ಲೂ ಕರ್ನಾಟಕದ್ದು, ಶಿಲ್ಪಿಯೂ ಕರ್ನಾಟಕದವರು, ರಾಮಮಂದಿರ ನಿರ್ಮಾಣದ ಉಸ್ತುವಾರಿಯೂ, ಟ್ರಸ್ಟಿಯೂ ಕರ್ನಾಟಕದವರು. 

ರಾಮನಿಗೆ ಇವತ್ತು ಉಡಿಸಿದ ಬಟ್ಟೆಯೂ ಕರ್ನಾಟಕ ಧ್ವಜದಲ್ಲಿರುವ ಕೆಂಪು-ಹಳದಿ ಬಣ್ಣದ್ದಾಗಿತ್ತು ಎಂಬುದನ್ನೂ ಹೇಳಿದರು.ಇದೇ ವೇಳೆ, ರಾಮದೇವರ ಪ್ರಾಣ ಪ್ರತಿಷ್ಠೆ ಮುಗಿಸಿ ಅಯೋಧ್ಯೆಯಲ್ಲಿನ ತಮ್ಮ ಮಠಕ್ಕೆ ಹಿಂತಿರುಗಿದ ಶ್ರೀಗಳಿಗೆ ನೂರಾರು ಭಕ್ತರು ಪುಷ್ಪವೃಷ್ಟಿ ನಡೆಸಿ, ಗೌರವಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ