- ಸರ್ಕಾರ ರಚನೆಗೆ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಬೇಕು. ಅಭಿವೃದ್ಧಿಗೆ ಬೇಡವೇ ?
ಕನ್ನಡಪ್ರಭ ವಾರ್ತೆ ಯಾದಗಿರಿ
"ಕುಡೀಲಿಕ್ಕೆ ನೀರಿಲ್ಲದೆ ನಾವು,ನಮ್ ಜನಾ ಸಾಯ್ತಿದ್ದೀವಿ ಅಧ್ಯಕ್ಷರೇ..! ಅನ್ನದಾತ ಆತ್ಮಹತ್ಯೆ ಮಾಡಿಕೊಳ್ತಿದ್ದಾನೆ.. ನಮಗೇ ನೀರಿಲ್ಲಾ ಅಂತಾ ಒದ್ದಾಡ್ತಿದ್ರೆ, ಈ ಸರ್ಕಾರ ತೆಲಂಗಾಣಕ್ಕೆ ನೀರು ಹರಿಸ್ತಿದೆ. ಯಾವುದೇ ಪಕ್ಷದ ಸರ್ಕಾರಗಳಿರಲಿ, ಸರ್ಕಾರ ರಚನೆಗೆ ಉತ್ತರ ಕರ್ನಾಟಕ- ಕಲ್ಯಾಣ ಕರ್ನಾಟಕದ ಬಲ ಬೇಕು, ಅಭಿವೃದ್ಧಿ ವಿಚಾರಕ್ಕೆ ಬಂದ್ರೆ ಮಾತ್ರ ನಮ್ ಭಾಗದ ಜನರ ಗೋಳು ಕೇಳೋದೇ ಇಲ್ಲ.. "ವಿಧಾನಸಭೆ ಅಧಿವೇಶನದಲ್ಲಿ, ಈ ಭಾಗದ ಜನರ ಗೋಳಿನ ಕತೆ ಕುರಿತು ಸರ್ಕಾರದೆದುರು ಎಳೆಎಳೆಯಾಗಿ ವಾಸ್ತವಾಂಶ ಬಿಚ್ಚಿಟ್ಟ ಜಿಲ್ಲೆಯ ಗುರುಮಠಕಲ್ ಶಾಸಕ, ಜೆಡಿಎಸ್‌ನ ಶರಣಗೌಡ ಕಂದಕೂರ ಇಡೀ ಸದನವನ್ನು ಗಂಭೀರವಾಗಿಸಿದರು. ಹಿಂದಿನ ಅಧಿವೇಶನಗಳಲ್ಲೂ ಈ ಭಾಗದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಸರ್ಕಾರದ ಗಮನ ಸೆಳೆದಿದ್ದ ಶಾಸಕ ಶರಣಗೌಡ ಕಂದಕೂರ, ಉತ್ತರ ಕರ್ನಾಟಕ- ಕಲ್ಯಾಣ ಕರ್ನಾಟಕ ಭಾಗದ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೆಟ್ಟದ್ದೆಲ್ಲ ನಮಗೆ, ಒಳ್ಳೆದಲ್ಲ ನಿಮಗೆ..!
ಕಡೇಚೂರು ಬಾಡಿಯಾಳ ಕಡೆಗಳಲ್ಲಿ ಫ್ಯಾಕ್ಟರಿಗಳಿಂದ ವಿಷಪೂರಿತ ಗಾಳಿ ಬರುತ್ತಿದೆ. ಜನರ ಬದುಕು ಹೀನಾಯವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಕಂದಕೂರ, ಛೊಲೋ ಛೊಲೋ ಫ್ಯಾಕ್ಟರಿಗಳೆಲ್ಲ ಈ ಕಡೆ (ದಕ್ಷಿಣ ಕರ್ನಾಟಕ-ಬೆಂಗಳೂರು), ವಿಷಗಾಳಿ ಸೂಸೋ ಕೆಟ್ಟ ಫ್ಯಾಕ್ಟರಿಗಳೆಲ್ಲ ನಮ್ ಕಡೆ (ಕಲ್ಯಾಣ ಕರ್ನಾಟಕ) ಸ್ಥಾಪಿಸುವ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ, ಯಾರ ಮುಂದೆ ನಮ್ಮ ಸಮಸ್ಯೆ ಹೇಳಬೇಕು ಎಂದು ಬೇಸರ ವ್ಯಕ್ತಪಡಿಸಿದರು. ಈ ವೇಳೆ ಕೊಪ್ಪಳದ ಗವಿ ಶ್ರೀಗಳ ಹೇಳಿಕೆಯನ್ನು ಸ್ಮರಿಸಿದ ಶಾಸಕ ಕಂದಕೂರ, ಸರ್ಕಾರ ತಾಯಿ ಇದ್ದ ಹಾಗೆ, ವಿಷ ಕೊಟ್ಟರೂ ನಾವು ಕುಡಿಯುತ್ತೇವೆ, ಹಾಲು ಕೊಟ್ಟರೂ ಕುಡಿಯುತ್ತೇವೆ. ಫ್ಯಾಕ್ಟರಿಗಳೆಲ್ಲ ಹೀಗೆ ಸ್ಥಾಪನೆಯಾಗುತ್ತಾ ಸಾಗಿದರೆ ನಮ್ಮ ಭಾಗದಲ್ಲಿ ತೊಟ್ಟಿಲ ತೂಗುವ ಕೈಗಳಿಗಿಂತ, ಸ್ಮಶಾನಕ್ಕೆ ಹೋಗುವ ಕೈಗಳೇ ಹೆಚ್ಚಾಗಬಹುದು ಎಂಬ ಆತಂಕವಿದೆ ಎಂದರು.
- 3 ಸಾವಿರ ಕ್ಯಾನ್ಸರ್ ರೋಗಿಗಳು !
ಸರ್ಕಾರ ರಚನೆಗೆ ಗ್ಯಾರಂಟಿಗಳೇ ಮಾನದಂಡವಲ್ಲ. ಇದರಿಂದಲೇ ಓಟ್ ಬೀಳೋದಿಲ್ಲ ಅನ್ನೋದಕ್ಕೆ ತೆಲಂಗಾಣದಲ್ಲಿ ಕೆಸಿಆರ್ ಸರ್ಕಾರದ ಉದಾಹರಿಸಿದ ಶಾಸಕ ಕಂದಕೂರ, ಯಾವುದೇ ಸರ್ಕಾರ ಜನರಿಗೆ ಕೊಡುವ ಕಾರ್ಯಕ್ರಮಗಳು ಮುಂದಿನ ಎಲೆಕ್ಷನ್‌ಗಾಗಿ ಇರಬಾರದು, ಮುಂದಿ ಜನರೇಶನ್‌ಗಾಗಿ ಇರಬೇಕು ಎಂದರು.
ಅನುದಾನವನ್ನೇ ನೀಡಿಲ್ಲ, ಸಾಲ ಮಾಡಿದ ಸದಸ್ಯರು ಎಲ್ಲಿಂದ ಪಂಚಾಯಿತಿಗಳಲ್ಲಿ ಹಣ ತರಬೇಕು. ಕುಡಿವ ನೀರು ಸಮಸ್ಯೆ ಬಗ್ಗೆ ಗಂಭೀರ ಪರಿಗಣಿಸಿ ಎಂದು ಕಿಡಿ ಕಾರಿದರು. ನೀರಿಗಾಗಿ, ಉದ್ಯೋಗಕ್ಕಾಗಿ ಹಾಗೂ ಭೂಮಿಗೆ ನೀರು ಹರಿಸಲು ನಾವು ಬೇಡಿಕೊಳ್ಳಬೇಕು. ಏನು ಪಾಪ ಮಾಡಿದ್ದೇವೆ ? ಇದೇನು ನಮ್ಮ ಪರಿಸ್ಥಿತಿ ಎಂದು ಕಂದಕೂರ ಈ ಭಾಗದ ಜ್ವಲಂತ ಸಮಸ್ಯೆ ಸದನದ ಮುಂದಿಟ್ಟಾಗ, ಕುರಿತು ಮೇಜು ಕುಟ್ಟಿ ಸದಸ್ಯರು ಬೆಂಬಲಿಸಿದರು.
19ವೈಡಿಆರ್10 : ಬುಧವಾರ ನಡೆದ ವಿಧಾನಸಭೆ ಅಧಿವೇಶನದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರರೀ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
---- ನಮ್ಮ ಭಾಗದ ಜನರ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಶಾಸಕ ಕಂದಕೂರ