ವೃದ್ಧೆಯ ಮೇಲೆ ಅತ್ಯಾಚಾರವ್ಯಸಗಿ ಕೊಲೆಗೈದಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork | Published : Mar 20, 2025 1:16 AM

ಸಾರಾಂಶ

ಸುದೀರ್ಘ ವಿಚಾರಣೆ ನಡೆಸಿದ ನಗರದ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿ ನಾಗರಾಜನಿಗೆ ಜೀವಾವಧಿ ಶಿಕ್ಷೆ ಮತ್ತು ೫೦ ಸಾವಿರ ದಂಡವನ್ನು ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.

ಚಿಂತಾಮಣಿ: ನಗರದ ಕೋಲಾರ ರಸ್ತೆಯ ಕರ್ನಾಟಕ ಫರ್ನಿಚರ್ ಅಂಗಡಿಯ ಮುಂದೆ ಮಲಗಿದ್ದ ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಅಪರಾಧಿ ಚಿನ್ನಗಾನಪಲ್ಲಿಯ ನಾಗರಾಜ್‌ಗೆ ಜೀವಾವಧಿ ಶಿಕ್ಷೆ ಹಾಗೂ ೫೦ ಸಾವಿರ ದಂಡವನ್ನು ವಿಧಿಸಲಾಗಿದೆ.

ನಗರದ ತಪತೇಶ್ವರ ಕಾಲೋನಿಯ ನಿವಾಸಿ ಲಕ್ಷ್ಮಮ್ಮ (೭೦) ಕೊಲೆಯಾದ ಮಹಿಳೆ, ಈ ಕುರಿತು ಆಕೆಯ ಪುತ್ರ ನರಸಿಂಹ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೃತ ಮಹಿಳೆಗೆ ಕುಡಿತದ ಚಟವಿದ್ದು, ೨೦೨೧ರ ಅಕ್ಟೋಬರ್ ೨೫ರಂದು ರಾತ್ರಿ ೨೦ ರು. ಹಣ ತೆಗೆದುಕೊಂಡು ಮನೆಯಿಂದ ಹೊರಗೆ ಹೋಗಿದ್ದವರು ಮರಳಿ ಬಂದಿರಲಿಲ್ಲ ಎಂದು ಪುತ್ರ ನರಸಿಂಹ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಮರುದಿನ ಅ. ೨೬ ರಂದು ಬೆಳಗ್ಗೆ ಸಾರ್ವಜನಿಕರು ಪುತ್ರ ನರಸಿಂಹರವರಿಗೆ ದೂರವಾಣಿ ಕರೆ ಮಾಡಿ ನಿಮ್ಮ ತಾಯಿ ಕರ್ನಾಟಕ ಫರ್ನಿಚರ್ ಅಂಗಡಿ ಮುಂದೆ ಮಲಗಿದ್ದಾರೆಂದು ತಿಳಿಸಿದ್ದರು. ನರಸಿಂಹ ಮತ್ತು ಆತನ ಅಕ್ಕ ಶಿವಮ್ಮ ಅಲ್ಲಿಗೆ ತೆರಳಿ ನೋಡಿದಾಗ ಮೈಮೇಲಿನ ಬಟ್ಟೆಗಳು ಅಸ್ತವ್ಯಸ್ತವಾಗಿದ್ದವು. ಮರ್ಮಾಂಗದಿಂದ ರಕ್ತಸ್ರಾವ ಆಗಿರುವುದು ಕಂಡುಬಂತು. ಕೂಡಲೇ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಪರೀಕ್ಷೆ ನಡೆಸಿದ ವೈದ್ಯರು ನಿಮ್ಮ ತಾಯಿ ಮೃತಪಟ್ಟಿದ್ದಾರೆಂದು ತಿಳಿಸಿದರು. ನಗರಠಾಣೆಯ ಆಗಿನ ಇನ್ಸ್ಪೆಕ್ಟರ್ ರಂಗಶಾಮಯ್ಯ ವಿವಿಧ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸಿ, ಅಪರಾಧಿ ನಾಗರಾಜನನ್ನು ಬಂಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು. ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ನಗರದ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿ ನಾಗರಾಜನಿಗೆ ಜೀವಾವಧಿ ಶಿಕ್ಷೆ ಮತ್ತು ೫೦ ಸಾವಿರ ದಂಡವನ್ನು ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ. ಶಾಂತಿ, ಸುಮತಿ, ಮೇರಿ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು. ಸುನೀತ ಸಹಾಯಕ ತನಿಖಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.

Share this article