ಯಕ್ಷಗಾನ ಬೆಳವಣಿಗೆಗೆ ಮಕ್ಕಳ ಮೇಳಗಳ ಕೊಡುಗೆ ಅನನ್ಯ: ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು

KannadaprabhaNewsNetwork |  
Published : Mar 20, 2025, 01:16 AM IST
17ತಲ್ಲೂರು | Kannada Prabha

ಸಾರಾಂಶ

ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಇದರ ಸುವರ್ಣ ಪರ್ವ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಗಾನಕ್ಕೆ ಪರಂಪರೆಯ ಚೌಕಟ್ಟಿದೆ. ಅದನ್ನು ಆಧುನಿಕತೆಯ ಹೆಸರಿನಲ್ಲಿ ಮುರಿಯುವುದು ಸರಿಯಲ್ಲ. ಇದಕ್ಕೆ ಅಪವಾದ ಎಂಬಂತೆ ಸಾಲಿಗ್ರಾಮ ಮಕ್ಕಳ ಮೇಳ ಯಜಮಾನ ಶ್ರೀಧರ ಹಂದೆಯವರ ಸಮರ್ಥ ಮಾರ್ಗದರ್ಶನದಲ್ಲಿ ಯಕ್ಷಗಾನದ ಚೌಕಟ್ಟಿನಲ್ಲಿಯೇ ಕಾರ್ಯವೆಸಗುತ್ತಿರುವುದು ಹೆಮ್ಮೆಯ ಸಂಗತಿ. ಈ ನಿಟ್ಟಿನಲ್ಲಿ ಶ್ರೀಧರ ಹಂದೆ ಅಭಿನಂದನೀಯರು. ಇಂತಹ ಕಲಾವಿದರಿಂದಲೇ ಯಕ್ಷಗಾನ ಉಳಿದಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.ಅವರು ಭಾನುವಾರ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಕೋಟ ಇದರ ಸುವರ್ಣ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಮಕ್ಕಳಿಗೆ ಯಕ್ಷಗಾನ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿದ್ಯಾವಂತರು ಯಕ್ಷಗಾನಕ್ಕೆ ಬರಬೇಕು ಎಂಬುದೇ ಇದರ ಉದ್ದೇಶ. ಈ ನಿಟ್ಟಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಯಕ್ಷಸೇವೆಯಲ್ಲಿ 50 ವರ್ಷಗಳನ್ನು ಪೂರೈಸಿರುವುದನ್ನು ಎಷ್ಟು ಅಭಿನಂದಿಸಿದರೂ ಸಾಲದು ಎಂದವರು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಮಾತನಾಡಿ, ಯಕ್ಷಗಾನ ಕಲಾರಂಗ ಮಕ್ಕಳಿಗೆ ಯಕ್ಷ ಶಿಕ್ಷಣ ಅಲ್ಲದೆ ಸನಿವಾಸ ಶಿಬಿರದ ಮೂಲಕ ಬಣ್ಣಗಾರಿಕೆ, ವೇಷಭೂಷಣ, ರಂಗನಡೆ ಬಗ್ಗೆ ತರಬೇತಿ ಕೂಡಾ ನೀಡಲಿದೆ. ಮಕ್ಕಳಿಗೆ ಬೇಕಾದ ಪಂಚತಂತ್ರದoತಹ ಕಥೆಗಳನ್ನು ಯಕ್ಷಗಾನಕ್ಕೆ ತಂದು ಆಡಿಸುವುದು ಒಳ್ಳೆಯ ಸಲಹೆಯಾಗಿದೆ. ಶುದ್ಧ ಯಕ್ಷಗಾನವನ್ನು ಉಳಿಸುವುದು ಹೇಗೆ? ಗೋಷ್ಠಿಗಳಿಂದ ಮಾತ್ರ ಸಾಧ್ಯವೇ? ವೃತ್ತಿಮೇಳಗಳ ಕಲಾವಿದರು ಬರುತ್ತಾರಾ? ಈ ಬಗ್ಗೆ ಹಿರಿಯರಿಂದ ಚಿಂತನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ ದಿಕ್ಸೂಚಿ ಭಾಷಣ ಮಾಡಿ, ಮಕ್ಕಳೇ ಒಂದು ರಂಗಭೂಮಿಯಾಗಿದ್ದಾರೆ. ಅವರ ಮನೋಭಾವ. ಸಂವೇದನೆಗೆ ಸರಿ ಹೊಂದುವಂತಹ ಪಾತ್ರ, ಕಥೆಗಳ ಸೃಷ್ಟಿಯಾಗಬೇಕು ಎಂದರು.ಕಾರ್ಯಕ್ರಮದಲ್ಲಿ ಮಕ್ಕಳ ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕೇಶವ ಬಡಾನಿಡಿಯೂರು ಅವರಿಗೆ ಸುವರ್ಣ ಪರ್ವ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಯಕ್ಷಗಾನ ಗುರು ಗುಂಡ್ಮಿ ಸದಾನಂದ ಐತಾಳ್ ಅಧ್ಯಕ್ಷತೆಯಲ್ಲಿ ಮಕ್ಕಳ ಯಕ್ಷಗಾನ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಪ್ರಸಂಗಕರ್ತೃ ಪ್ರೊ.ಶ್ರೀಧರ ಡಿ.ಎಸ್. ಅವರು ಪ್ರಸಂಗ ಸಾಹಿತ್ಯ ಕುರಿತು, ಯಕ್ಷಗುರು ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ತರಬೇತಿಯ ಸವಾಲುಗಳು ಕುರಿತು, ರಂಗಕರ್ಮಿ ಅಭಿಲಾಶ್ ಎಸ್. ಅವರು ರಂಗ ಪ್ರಸ್ತುತತೆ ಕುರಿತು ವಿಚಾರ ಮಂಡಿಸಿದರು.ಲಯನ್ಸ್ ಮಾಜಿ ಗವರ್ನರ್ ಸುರೇಶ್ ಪ್ರಭು, ಕಲಾ ಪೋಷಕರಾದ ಭುವನಪ್ರಸಾದ್ ಹೆಗ್ಡೆ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ಶ್ರೀಧರ ಹಂದೆ, ಅಧ್ಯಕ್ಷ ಬಲರಾಮ ಕಲ್ಕೂರ ಕೆ., ಉಪಾಧ್ಯಕ್ಷ ಎಚ್.ಜನಾರ್ದನ ಹಂದೆ ಉಪಸ್ಥಿತರಿದ್ದರು.ಮೇಳದ ಕಾರ್ಯದರ್ಶಿ ಎಚ್.ಸುಜಯೀಂದ್ರ ಹಂದೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. 50 ವರ್ಷದ ಹಿಂದೆ ಮಕ್ಕಳ ಮೇಳದಲ್ಲಿ ಪಾತ್ರ ನಿರ್ವಹಿಸಿದ್ದ ಮೋಹನ್‌ದಾಸ್ ಶಾನುಭಾಗ್ ಅತಿಥಿಗಳನ್ನು ಗೌರವಿಸಿದರು. ವಿನುತಾ ಎಸ್.ಹಂದೆ ನಿರೂಪಿಸಿದರು. ಬಳಿಕ ದುರ್ಗಾ ಮಕ್ಕಳ ಮೇಳ ಕಟೀಲು ಇವರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರಸಂಗದ ಪ್ರದರ್ಶನ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ