ನಮ್ಮ ಮೇಲೆ ಗೋಲಿಬಾರ್ ಮಾಡಿದ್ರೂ ಸೈ, ಲಾಠಿ ಚಾರ್ಜ್ ಮಾಡಿದ್ರೂ ಸೈ, ನಾವು ಹೆದರೋ ಮಕ್ಕಳೇ ಅಲ್ಲ. ನಮ್ಮ ಜಿಲ್ಲೆಗೆ ಪಾಪದ ಕೂಸಾಗಿರುವ ಲಿಂಕ್ ಕೆನಾಲ್ ಕಾಮಗಾರಿಯನ್ನು ತಡೆದೇ ತಡೀತೀವಿ. ಇದರಲ್ಲಿ ಯಾವುದೇ ರಾಜಿ ಮಾತೇ ಇಲ್ಲ ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಜ್ಞೆ ಮಾಡಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ನಮ್ಮ ಮೇಲೆ ಗೋಲಿಬಾರ್ ಮಾಡಿದ್ರೂ ಸೈ, ಲಾಠಿ ಚಾರ್ಜ್ ಮಾಡಿದ್ರೂ ಸೈ, ನಾವು ಹೆದರೋ ಮಕ್ಕಳೇ ಅಲ್ಲ. ನಮ್ಮ ಜಿಲ್ಲೆಗೆ ಪಾಪದ ಕೂಸಾಗಿರುವ ಲಿಂಕ್ ಕೆನಾಲ್ ಕಾಮಗಾರಿಯನ್ನು ತಡೆದೇ ತಡೀತೀವಿ. ಇದರಲ್ಲಿ ಯಾವುದೇ ರಾಜಿ ಮಾತೇ ಇಲ್ಲ ಎಂದು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಜ್ಞೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು , ಜಿಲ್ಲೆಯ ಜನರಿಗೆ ಕೆನಾಲ್ ಕಾಮಗಾರಿ ಮಾರಣಾಂತಿಕವಾಗಿದೆ. ಜಿಲ್ಲೆಗೆ 24 ಟಿಎಂಸಿ ಹೇಮಾವತಿ ನೀರು ಸಿಕ್ಕಿದೆ. ಅದರಲ್ಲಿ ಕುಣಿಗಲ್ ಗೆ ಸುಮಾರು 3.4 ಟಿಎಂಸಿ ನೀರು ಹೋಗಲು ತೀರ್ಮಾನಿಸಲಾಗಿದೆ. ಇದು ತುಮಕೂರು ನಾಲೆ ಹಾಗೂ ನಾಗಮಂಗಲ ನಾಲೆಯಿಂದ ಕುಣಿಗಲ್ ಗೆ ಹರಿದು ಹೋಗುತ್ತಿದೆ. ಇಷ್ಟಾದರೂ ಸಹ ನೀರು ಬೇಕು ಎಂದು ಕುಣಿಗಲ್ ಶಾಸಕ ರಂಗನಾಥ್ ಆಗ್ರಹಿಸುತ್ತಿರುವುದು ಆಶ್ಚರ್ಯ ತರಿಸಿದೆ ಎಂದರು.ಕುಣಿಗಲ್ ಶಾಸಕರಿಗೆ ಡಿಸಿಎಂ ಸಂಬಂಧಿಯೇ ಇರಬಹುದು. ಅದನ್ನೇ ಮುಂದಿಟ್ಟುಕೊಂಡು ಅಕ್ರಮವಾಗಿ ಕೆನಾಲ್ ಮೂಲಕ ನೀರು ಹರಿಸುತ್ತೇವೆ ಎಂದು ಕೊಂಡರೆ ಅದು ಭ್ರಮೆ ಅಷ್ಟೇ. ಈಗಾಗಲೇ ಜಿಲ್ಲೆಯ ರೈತರು ಈ ಕಾಂಗ್ರೆಸ್ ಸರ್ಕಾರದ ಈ ಕೆಟ್ಟ ತೀರ್ಮಾನದ ವಿರುದ್ಧ ಸಿಡಿದೆದ್ದಿದ್ದಾರೆ. ಈಗಾಗಲೇ ಸುಮಾರು 25 ಸಾವಿರ ರೈತರು ಪ್ರತಿಭಟನೆಗೆ ಸಾಕ್ಷಿಯಾಗಿದ್ದರು. ಈಗ ಮತ್ತೆ ಕೆನಾಲ್ ಕಾಮಗಾರಿ ಮುಂದುರೆಸಲು ಪ್ರಯತ್ನಿಸಿದರೆ ಒಂದು ಲಕ್ಷಕ್ಕೂ ಹೆಚ್ಚು ರೈತರು ಹೋರಾಟಕ್ಕೆ ಇಳಿಯುವರು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರಕ್ಕೆ ಎಚ್ಚರಿಸಿದರು. ಕಳೆದ ಎರಡು ವರ್ಷದಿಂದಲೂ ಲಿಂಕ್ ಕೆನಾಲ್ ಕುರಿತು ಹೋರಾಟ ನಡೆಯುತ್ತಲೇ ಇದೆ. ಕುಣಿಗಲ್ ಮೂಲಕ ಮಾಗಡಿ, ರಾಮನಗರಕ್ಕೆ ಕುಡಿಯುವ ನೀರು ತೆಗೆದುಕೊಂಡು ಹೋಗುವ ಕಾಮಗಾರಿಗೆ 2020 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ತಡೆ ನೀಡಿದ್ದರು. ಅಲ್ಲಿಗೆ ಉಪಯೋಗಿಸಿದ್ದ ಹಣವನ್ನು ಕೆನಾಲ್ ವಿಸ್ತರಣೆ ಮಾಡಲು ಆದೇಶಿಸಿದ್ದರು. ಈ ಹಿಂದಿಗಿಂತಲೂ ಸುಮಾರು 550 ಕ್ಯೂಸೆಕ್ಸ್ ನೀರು ಹೆಚ್ಚು ರಭಸವಾಗಿ ಹರಿಯುತ್ತಿದೆ. ಈಗಲೇ ಹೆಚ್ಚು ನೀರು ಹರಿಸಲಾಗುತ್ತಿದೆ. ಇನ್ನು ಪೈಪ್ ಲೈನ್ ಮೂಲಕ ನೀರನ್ನು ಹರಿಸುವುದರಲ್ಲಿ ಅರ್ಥವಿಲ್ಲ. ಈ ಕುರಿತು ಡಿಸಿಎಂ ನಡೆಸಿದ್ದ ಸಭೆಯಲ್ಲಿ ಜಿಲ್ಲೆಯ ಹಿತಕಾಯಲು ಬಯಸಿರುವ ಶಾಸಕರುಗಳು ವಿರೋಧ ವ್ಯಕ್ತಪಡಿಸಿದ್ದೇವೆ. ಡಿಸಿಎಂ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿರುವುದು ಸ್ವಾಗತಾರ್ಹ. ಬರಲಿ ವಾಸ್ತವಾಂಶ ಪರಿಶೀಲಿಸಲಿ. ಈಗಲೂ ಕಾಲ ಮಿಂಚಿಲ್ಲ. ಕಾಮಗಾರಿಗೆಂದು ಮೀಸಲಿಟ್ಟಿರುವ ಹಣವನ್ನು ಕಾಲುವೆ ಅಗಲೀಕರಣ ಮಾಡಿಕೊಳ್ಳಲು ಬಳಸುವುದು ಉತ್ತಮ ಎಂಬುದು ನನ್ನ ಸಲಹೆ ಎಂದರು. ಕೆನಾಲ್ ನ ಮುಖ್ಯ ತಾಂತ್ರಿಕ ಸಲಹೆಗಾರರಾಗಿರುವ ನಿವೃತ್ತ ಎಂಜಿನಿಯರ್ ಜಯಪ್ರಕಾಶ್ ಗೆ ನಿಜವಾದ ವಾಸ್ತವತೆ ಗೊತ್ತಿಲ್ಲ. ತುಮಕೂರು ನಾಲೆಯಿಂದ ಹರಿಯುತ್ತಿರುವ ನೀರನ್ನು ತಪ್ಪಾಗಿ ಪರಿಗಣಿಸಿದ್ದಾರೆ. ಡಿಸಿಎಂ ರಿಂದ ಶಹಬ್ಬಾಶ್ ಗಿರಿ ತೆಗೆದುಕೊಳ್ಳಲು ತುಮಕೂರು ಜಿಲ್ಲೆಯ ರೈತರ ಪಾಲಿಗೆ ವಿಲನ್ ಆಗಿದ್ದಾರೆ. ಸರ್ಕಾರಕ್ಕೆ ತಪ್ಪು ಮಾಹಿತಿ ಕೊಟ್ಟಿರುವ ಆತ ಅಯೋಗ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು. ಲಿಂಕ್ ಕೆನಾಲ್ ಅವಶ್ಯಕವಿಲ್ಲ. ಹೆಚ್ಚು ನೀರು ಬೇಕಾದಲ್ಲಿ ಕಾವೇರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಿ. ಅದರ ಆದೇಶದ ಮೇರೆಗೆ ಹೆಚ್ಚು ನೀರು ಪಡೆದುಕೊಳ್ಳಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಅಧಿಕಾರಿಗಳು ನೀಡಿರುವ ತಪ್ಪು ಮಾಹಿತಿಯಿಂದಾಗಿ ಜಿಲ್ಲೆ ಅನಾಥವಾಗುತ್ತಿದೆ. ತಾವೇ ಸ್ವತಃ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಿ ವಾಸ್ತವಾಂಶ ಅರಿತಿದ್ದೇನೆ. ಕೂಡಲೇ ಲಿಂಕ್ ಕೆನಾಲ್ ಬಂದ್ ಮಾಡಬೇಕು. ದುಂಡಾವರ್ತನೆ ಗೆ ಹೆದರೋರು ನಾವಲ್ಲ. ನಿಮ್ಮ ಗುಂಡಾಗಿರಿಗೆ ಸೆಡ್ಡು ಹೊಡೆದೇ ಹೊಡೆದೇ ಹೊಡೀತೀವಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಗುಡುಗಿದರು. ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಹಿಂಡುಮಾರನಹಳ್ಳಿ ನಾಗರಾಜ್, ಮಂಗೀಕುಪ್ಪೆ ಬಸವರಾಜು, ಕುಶಾಲ್ ಕುಮಾರ್, ಮಾಜಿ ನಿರ್ದೇಶಕ ವಿಜಯೇಂದ್ರ, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್, ಬಡಗರಹಳ್ಳಿ ತ್ಯಾಗರಾಜ್, ಆನೇಕೆರೆ ಗ್ರಾಮ ಪಂಚಾಯಿತಿ ಸದಸ್ಯ ಪುನಿತ್, ಮುನಿಯೂರು ರಂಗಸ್ವಾಮಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.