ಅಕ್ಕಿ ಕೊಡ್ತೇವೆ, ಆದರೆ ಖರೀದಿಗೆ ರಾಜ್ಯದಲ್ಲಿ ಹಣವೇ ಇಲ್ಲ: ಜೋಶಿ

KannadaprabhaNewsNetwork |  
Published : Jul 08, 2024, 12:32 AM ISTUpdated : Jul 08, 2024, 07:17 AM IST
Prahlad Joshi

ಸಾರಾಂಶ

ಕರ್ನಾಟಕಕ್ಕೆ ನಾವು ಬೇಕಾದಷ್ಟು ಅಕ್ಕಿ ನೀಡಲು ಸಿದ್ಧರಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಸರ್ಕಾರದ ಬಳಿ ಅಕ್ಕಿ ಖರೀದಿಗೂ ಹಣವಿಲ್ಲದಂಥ ಸ್ಥಿತಿಯಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

 ಹುಬ್ಬಳ್ಳಿ : ಕರ್ನಾಟಕಕ್ಕೆ ನಾವು ಬೇಕಾದಷ್ಟು ಅಕ್ಕಿ ನೀಡಲು ಸಿದ್ಧರಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಅಕ್ಕಿ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಸರ್ಕಾರದ ಬಳಿ ಅಕ್ಕಿ ಖರೀದಿಗೂ ಹಣವಿಲ್ಲದಂಥ ಸ್ಥಿತಿಯಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಕಳೆದ ವರ್ಷ ಕೇಳಿದಾಗ ಅಕ್ಕಿ ನೀಡಿಲ್ಲ ಎಂದು ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿದ್ದರು. ರಾಜ್ಯ ಸರ್ಕಾರದವರು ಜನರಿಗೆ 5 ಕೆ.ಜಿ. ಅಕ್ಕಿ ಬದಲು 10 ಕೆ.ಜಿ. ನೀಡುವುದಾಗಿ ಹೇಳಿದ್ದಾರೆಯೇ ಹೊರತು ಕೇಂದ್ರ ಸರ್ಕಾರ ಕೊಟ್ಟರೆ ಕೊಡುತ್ತೇವೆಂದು ಎಲ್ಲೂ ಹೇಳಿರಲಿಲ್ಲ. ಕಳೆದ ಬಾರಿ ಅಕ್ಕಿ ಸಂಗ್ರಹ ಕಡಿಮೆ ಇದ್ದ ಕಾರಣ ಎಲ್ಲ ರಾಜ್ಯಗಳಿಗೂ ಅಕ್ಕಿ ವಿತರಣೆ ಸ್ಥಗಿತಗೊಳಿಸಿದ್ದೆವು. ಇದೀಗ ಮತ್ತೆ ಆರಂಭಿಸಿದ್ದೇವೆ. ಆದರೆ ಕರ್ನಾಟಕ ಸರ್ಕಾರ ಅಕ್ಕಿ ಕೊಳ್ಳುವುದಿಲ್ಲ ಎಂದರು.

ಸಿದ್ದರಾಮಯ್ಯ ಅವರು ಅಕ್ಕಿ ವಿಚಾರದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಇಂಥ ರಾಜಕಾರಣವನ್ನು ಅವರು ಮೊದಲು ನಿಲ್ಲಿಸಲಿ ಎಂದು ಕಿಡಿಕಾರಿದರು.

ನಾಚಿಕೆಯಾಗಬೇಕು: ಕಾಂಗ್ರೆಸ್‌ನವರು ಎಷ್ಟು ಜನರಿಗೆ ಐದು ಕೆ.ಜಿ. ಅಕ್ಕಿ ಬದಲಾಗಿ ಕೊಡುವುದಾಗಿ ಹೇಳಿರುವ ₹170 ನೀಡಿದ್ದಾರೆ? ಕಳೆದ 2 ತಿಂಗಳಿಂದ ಗೃಹಲಕ್ಷ್ಮೀ ಯೋಜನೆ ಹಣವನ್ನು ಏಕೆ ಸ್ಥಗಿತಗೊಳಿಸಿದ್ದಾರೆ? ವೃದ್ಧಾಪ್ಯ ವೇತನ ಹಣ ಜಮೆ ಏಕೆ ಆಗಿಲ್ಲ? ಪೆಟ್ರೋಲ್, ಡೀಸೆಲ್‌, ಹಾಲಿನ ದರ ಏಕೆ ಏರಿಕೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಅಂದು ನಾವು ಪೆಟ್ರೋಲ್‌ ದರ ಒಂದು ರುಪಾಯಿ ಏರಿಕೆ ಮಾಡಿದಾಗ ಬೊಬ್ಬೆ ಹೊಡೆದವರು ಇಂದು ತಾವೇ ಮೂರೂವರೆ ರುಪಾಯಿ ದರ ಏರಿಕೆ ಮಾಡಿದ್ದಾರೆ. 

ಅವರಿಗೆ ನಾಚಿಕೆಯಾಗಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಅನೇಕ ಕಾಂಗ್ರೆಸ್ ಶಾಸಕರು ನನ್ನ ಬಳಿ ಬಂದು ಕೇಂದ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಸ್ವಲ್ಪ ಹಣ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯನ್ನು ಕಾಂಗ್ರೆಸ್‌ನವರೇ ತಂದುಕೊಂಡು ವಿನಾಕಾರಣ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.ಹಾಲು ಒಕ್ಕೂಟಗಳಲ್ಲಿ ರೈತರಿಗೆ ನೀಡುತ್ತಿರುವ ಸಬ್ಸಿಡಿ ಬಂದ್ ಮಾಡಿ ಜನರಿಗೆ ದ್ರೋಹ ಮಾಡುತ್ತಿರುವ ಯಾವುದಾದರೂ ಒಂದು ಸರ್ಕಾರವಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಸುಳ್ಳು ಹೇಳುವ ಸರ್ಕಾರ ಇವರದ್ದು. ಮದ್ಯದ ದರದಿಂದ ಹಿಡಿದು ಎಲ್ಲ ದರ ಏರಿಕೆ ಮಾಡಿ ಜನರಿಗೆ ಬರೆ ಹಾಕಿದ್ದಾರೆ ಎಂದು ಜೋಶಿ ಹೇಳಿದರು.

ಭಾರತ್‌ ಅಕ್ಕಿ ಮತ್ತೆ ಈ ತಿಂಗಳಿಂದ ಲಭ್ಯ

 ಹುಬ್ಬಳ್ಳಿ :  ಕೇಂದ್ರ ಸರ್ಕಾರದ ಭಾರತ್‌ ಅಕ್ಕಿ ಬಂದ್‌ ಆಗಿಲ್ಲ. ಈ ತಿಂಗಳಿಂದ ಮತ್ತೆ ವಿತರಣೆ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ಚುನಾವಣೆಗೂ ಮೊದಲು ವಿತರಿಸುತ್ತಿದ್ದ ಭಾರತ್ ಅಕ್ಕಿ, ದಾಲ್ ಹಾಗೂ ಮೈದಾ ಬಂದ್ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ನಾವು ಬಂದ್‌ ಮಾಡಿಲ್ಲ. ಭಾರತ್‌ ಅಕ್ಕಿ ವಿತರಣೆಗೆ ಸಂಬಂಧಿಸಿದ ಮೊದಲನೇ ಆದೇಶ ಜೂ.30ರ ವರೆಗೆ ಮಾತ್ರ ಇತ್ತು. ಅದನ್ನು ಮತ್ತೆ ವಿಸ್ತರಿಸಲಿದ್ದೇವೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ನನ್ನ ಮಾತು ನಡೆಯುತ್ತಾ, ಇಲ್ವಾ? ನಂಗಷ್ಟೇ ಗೊತ್ತು’
ರಾಜ್ಯಾದ್ಯಂತ ಪ್ರಧಾನಿ ಮೋದಿ ಜನ್ಮದಿನ ಸಂಭ್ರಮ