ಲೋಕಸಭೆ ಚುನಾವಣೆಗೆ ಮೂಡಲಹಿಪ್ಪೆಯಲ್ಲಿ ಪೂಜೆಯೊಂದಿಗೆ ಪ್ರಚಾರ ಆರಂಭ । ರೇವಣ್ಣ ಚಾಲನೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ‘ದೇಶದ ಹಿತದೃಷ್ಟಿಯಿಂದ ಮಾಜಿ ಪ್ರಧಾನಿ ದೇವೇಗೌಡ ಒಳ್ಳೆಯ ನಿರ್ಧಾರ ಕೈಗೊಂಡು, ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿ ನಮ್ಮ ಮೇಲೆ ಭರವಸೆ ಇಟ್ಟು ಟಿಕೆಟ್ ನೀಡಿದೆ. ನಾವು ನಿಮ್ಮ ಮೇಲೆ ಬಲವಾದ ನಂಬಿಕೆ ಇಟ್ಟಿದ್ದೇವೆ. ರಾಜ್ಯದ ಅನೇಕ ಕಡೆಗಳಲ್ಲಿ ಕುಡಿಯುವ ನೀರಿಗೆ ಬಹಳ ತೊಂದರೆಯಾಗಿದೆ, ಆದರೆ ಶಾಸಕ ರೇವಣ್ಣ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆ ಮನೆಗೆ ನಲ್ಲಿ ಹಾಕಿಸಿದ ಪರಿಣಾಮವಾಗಿ ಕುಡಿಯುವ ನೀರಿಗೆ ತೊಂದರೆ ಇಲ್ಲದೆ ನೆಮ್ಮದಿಯಿಂದ ಇದ್ದೇವೆ. ಆ ನಿಟ್ಟಿನಲ್ಲಿ ನಾನು ಶ್ರಮಿಸುತ್ತೇನೆ’ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ತಾಲೂಕಿನ ಮೂಡಲಹಿಪ್ಪೆ ಗ್ರಾಮದ ಶ್ರೀ ಚೆನ್ನಿಗರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ವಿಧ್ಯುಕ್ತವಾಗಿ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಶಾಸಕ ಎಚ್.ಡಿ. ರೇವಣ್ಣ ಚಾಲನೆ ನೀಡಿದ ನಂತರ ಮಾತನಾಡಿದರು. ಪ್ರಧಾನಿ ಮೋದಿ ಅವರು ಅಭಿವೃದ್ಧಿ ಕಾರ್ಯಗಳಿಗೆ ೧೬.೫ ಸಾವಿರ ಕೋಟಿ ರು. ಹಾಗೂ ಕುಡಿಯುವ ನೀರು ಯೋಜನೆಗೆ ೪೯೦೭ ಕೋಟಿ ರು. ಹಣ ನೀಡಿದ್ದಾರೆ. ಇದರ ಹಿಂದೆ ದೇವೇಗೌಡರ ಶ್ರಮ ಇದೆ. ರಾಜ್ಯದ ಕಾಂಗ್ರೆಸ್ ಆಡಳಿತ ತನ್ನ ಐದು ಗ್ಯಾರಂಟಿಗಳನ್ನು ಉಳಿಸಿಕೊಳ್ಳಲು ಇತರೆ ಎಲ್ಲದರ ಬೆಲೆಗಳನ್ನು ಹೆಚ್ಚಿಸಿದೆ. ೨೦ ರು.ಗೆ ಸಿಗುತ್ತಿದ್ದ ಛಾಪಾ ಕಾಗದ ಈಗ ೧೦೦ ರು.ಗೆ ಏರಿಕೆಯಾಗಿದೆ, ಇದೇ ರೀತಿ ದಿನ ಬಳಕೆಯ ಸಾಕಷ್ಟು ಪದಾರ್ಥಗಳ ಬೆಲೆ ಏರಿಸಿದೆ. ೧೦ ರು. ಕಿತ್ತುಕೊಂಡು ೫ ರು. ನೀಡಿ ಜನರನ್ನು ಕಷ್ಟಕ್ಕೆ ಸಿಲುಕಿಸಿದ್ದಾರೆ. ಜನ ಅರ್ಥ ಮಾಡಿಕೊಂಡು ಮತ ನೀಡಿ, ನಾನು ಏನಾದರೂ ತಪ್ಪು ಮಾಡಿದ್ದರೆ ತಿದ್ದುಕೊಂಡು ನಡೆಯುತ್ತೇನೆ ಮತ್ತು ತಪ್ಪು ಮಾಡಿದ್ದರೆ ಕ್ಷಮಿಸಿ ಎಂದು ಹೇಳಿದರು.ಭವಾನಿ ರೇವಣ್ಣ ಮಾತನಾಡಿ, ‘ಪ್ರಧಾನಿ ಮೋದಿಯವರು ಅವರ ಆಡಳಿತದಲ್ಲಿ ತೋರುವ ಚಾಕಚಕ್ಯತೆ ಮತ್ತು ಪ್ರಬುದ್ಧ ಆಡಳಿತದಿಂದ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಅದೇ ರೀತಿ ಶಾಸಕ ಎಚ್.ಡಿ.ರೇವಣ್ಣ ಜಿಲ್ಲೆಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಒಂದು ಸುತ್ತು ನೋಡಿ ಬರಲು ೬ ತಿಂಗಳು ಬೇಕಾಗುತ್ತದೆ. ಯಾವುದೇ ಊರಿಗೆ ತೆರಳಿದರೂ ರೇವಣ್ಣನವರ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತವೆ. ಆದ್ದರಿಂದ ಜಿಲ್ಲೆಯ ಜನತೆಗೆ ಜೆಡಿಎಸ್ ಆಡಳಿತ ಮತ್ತು ಅಭಿವೃದ್ದಿ ಕಾರ್ಯಗಳ ಬಗ್ಗೆ ವಿಶ್ವಾಸವಿದ್ದು, ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ’ ಎಂದರು.
‘೧೯೫೭ರಿಂದಲೂ ದೇವೇಗೌಡರು ಯಾವುದೇ ಚುನಾವಣೆಯಲ್ಲಿ ಚುನಾವಣೆ ಪ್ರಚಾರ ಮಾಡುವ ಮುನ್ನ ಮೂಡಲಹಿಪ್ಪೆ ಗ್ರಾಮದ ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ, ಪ್ರಾರಂಭಿಸುವುದನ್ನು ರೂಢಿಸಿಕೊಂಡಿದ್ದಾರೆ. ನಾವು ಕೂಡ ಹಿರಿಯರ ಆಚರಣೆಯನ್ನು ಪಾಲನೆ ಮಾಡುತ್ತಿದ್ದು, ಇಂದು ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪ್ರಾರಂಭಿಸಿದ್ದೇವೆ’ ಎಂದರು.ಪ್ರಚಾರಕ್ಕೂ ಮುನ್ನ ಶ್ರೀ ಚೆನ್ನಿಗರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ದೇಶಕ್ಕೆ ಪ್ರಧಾನಿ ಮೋದಿಯವರ ಆಡಳಿತ ಬರಲಿ ಎಂಬ ಸಂಕಲ್ಪದೊಂದಿಗೆ ಪೂಜೆ ನೆರವೇರಿಸುವಂತೆ ಅರ್ಚಕರಲ್ಲಿ ಸಂಸದ ಪ್ರಜ್ವಲ್ ಕೋರಿದರು. ಶಾಸಕ ರೇವಣ್ಣ ಅವರು ಪ್ರಜ್ವಲ್‌ಗೆ ಜಯವಾಗಲಿ ಎಂದು ಆಶೀರ್ವದಿಸುವಂತೆ ಕೋರಿದರು.
ಉದ್ಯಮಿ ನ್ಯಾಮನಹಳ್ಳಿ ಎನ್.ಆರ್. ಅನಂತಕುಮಾರ್, ಗುಂಜೇವು ಮಲ್ಲಿಕಾರ್ಜುನ್, ತಾಲೂಕು ಜೆಡಿಎಸ್ ಅಧ್ಯಕ್ಷ ಪುಟ್ಟಸ್ವಾಮಪ್ಪ, ಜೆಡಿಎಸ್ ಕಾರ್ಯಕರ್ತರು ಹಾಗೂ ಮೂಡಲಹಿಪ್ಪೆ ಗ್ರಾಮಸ್ಥರು ಇದ್ದರು.ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದ ಶ್ರೀ ಚೆನ್ನಿಗರಾಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ವಿಧ್ಯುಕ್ತವಾಗಿ ಚುನಾವಣೆ ಪ್ರಚಾರಕ್ಕೆ ಶಾಸಕ ಎಚ್.ಡಿ. ರೇವಣ್ಣ ಚಾಲನೆ ನೀಡಿದರು.