- ಮಹಾಂತ ಶ್ರೀ ಗದ್ದುಗೆ, ಕೊಟ್ಟೂರೇಶ್ವರ, ವೀರಭದ್ರ ಸನ್ನಿಧಿಯಲ್ಲಿ ಪ್ರಮಾಣ ಮಾಡಿ, ಲೆಕ್ಕ ಕೊಡಲು ತಾಕೀತು: ಲೆಕ್ಕ ಕೊಡಿ ಚಳವಳಿ ಸಮಿತಿ - - -
ಹರಿಹರ ಪಂಚಮಸಾಲಿ ಪೀಠ ಸ್ಥಾಪನೆಯಾದ 2008ರಿಂದ ಈವರೆಗೆ ಒಟ್ಟು 18 ವರ್ಷಗಳ ಲೆಕ್ಕಪತ್ರ ಅವಸರದಲ್ಲಿ ನೀಡುವುದನ್ನು ನಾವು ಒಪ್ಪುವುದಿಲ್ಲ. ಪೀಠ ಸ್ಥಾಪನೆ, ಅಭಿವೃದ್ಧಿಗೆ ಸಮಾಜ ಬಾಂಧವರು, ದಾನಿಗಳು ಚೆಕ್, ನಗದು ಮೂಲಕ ಹಣ ಕೊಟ್ಟವರ ಹೆಸರಿನೊಂದಿಗೆ ಟ್ರಸ್ಟ್ ಸದಸ್ಯರು ಪಾರದರ್ಶಕ, ಪ್ರಾಮಾಣಿಕವಾಗಿ ಸಮಾಜದ ರಾಜ್ಯ ಸಭೆ ಕರೆದು, ಸಾರ್ವಜನಿಕವಾಗಿ ಸಮಾಜದ ಮುಂದೆ ಲೆಕ್ಕ ಇಡಬೇಕು ಎಂದು ಲೆಕ್ಕ ಕೊಡಿ ಚಳವಳಿ ಸಮಿತಿ ತಾಕೀತು ಮಾಡಿದೆ.
ಶ್ರೀಮಠಕ್ಕೆ ಇರುವ ವಜ್ರ, ಬೆಳ್ಳಿ, ಬಂಗಾರ ಎಷ್ಟಿದೆ?, ಎಲ್ಲಿದೆ?, ಯಾರ ಹೆಸರಿನಲ್ಲಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಅವುಗಳನ್ನು ಶ್ರೀಮಠಕ್ಕೆ ತಂದು, ಸಾರ್ವಜನಿಕವಾಗಿ ಸಮಾಜ ಬಾಂಧವರ ಮುಂದೆ ತೋರಿಸಬೇಕು. ಶ್ರೀಪೀಠ ಹೊಂದಿರುವ ಆಸ್ತಿಗಳ ಬಗ್ಗೆ ಸಂಪೂರ್ಣ ವಿವರ ನೀಡಬೇಕು. ದಾಖಲೆಗಳನ್ನು ಸಮಾಜದ ಮುಂದೆ ಮಂಡಿಸಬೇಕು ಎಂದು ಸಮಿತಿ ಅಧ್ಯಕ್ಷ ಎಂ.ಜಿ. ಪರಮೇಶ್ವರ ಗೌಡ್ರು, ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ಬಿ.ಮಾಲತೇಶ ಬೆಳಕೆರೆ ರಟ್ಟಿಹಳ್ಳಿ, ಮಹಾಂತೇಶ, ರಾಣೆಬೆನ್ನೂರಿನ ಸಿದ್ಧಣ್ಣ ಚಿಕ್ಕಬಿದರಿ, ಮಹಾಂತೇಶ ವಿ.ಒಣರೊಟ್ಟಿ ಇತರರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.ಸರ್ಕಾರದಿಂದ ಪಡೆದ ಅನುದಾನ ಬಳಕೆ ಬಗ್ಗೆ ಪ್ರಾಮಾಣೀಕೃತ ಪತ್ರ ಮಂಡಿಸಬೇಕು. ಒಂದು ಪಕ್ಷ ಅನುದಾನ ದುರ್ಬಳಕೆ ಆಗಿದ್ದರೆ ಸಂಪೂರ್ಣ ತನಿಖೆ ಮಾಡಿ, ಸರ್ಕಾರಕ್ಕೆ ಪತ್ರ ಬರೆಯಬೇಕು. ಶ್ರೀಮಠದ ಅಭಿವೃದ್ಧಿ ಹೆಸರಿನಲ್ಲಿ ಅನುದಾನ ಬಳಸಿರುವುದು ಗೊತ್ತಾಗಿದ್ದು, ಅಂತಹವರಿಂದ ಅಷ್ಟೂ ಹಣ ವಾಪಸ್ ಸಂದಾಯ ಮಾಡಿಸಬೇಕು. 2018ರಿಂದ ಟ್ರಸ್ಟ್‌ನ ನೇತೃತ್ವ ಹಾಗೂ ಜವಾಬ್ದಾರಿಯಲ್ಲಿ ನಡೆದ ಹರ ಜಾತ್ರೆಗಳ ಸಂಪೂರ್ಣ ಲೆಕ್ಕವನ್ನು ಸಾರ್ವಜನಿಕವಾಗಿ ಸಮಾಜದ ಮುಂದೆ ಮಂಡಿಸಬೇಕು. ದಾವಣಗೆರೆಯಲ್ಲಿ ಸಮಾಜದಿಂದ ಹಮ್ಮಿಕೊಳ್ಳುತ್ತಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮಗಳ ಖರ್ಚು, ವೆಚ್ಚದ ಲೆಕ್ಕ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಲೆಕ್ಕ ಕೊಡಿ ಚಳವಳಿಯ ದಿಕ್ಕು ತಪ್ಪಿಸಲು ಏ.13ರಂದು ಶ್ರೀಪೀಠದ ಸ್ವಾಮೀಜಿಯನ್ನು ಯಾವುದೇ ಪ್ರಮುಖ ಮತ್ತು ಗಂಭೀರವಾದ ಆರೋಪಗಳು ಇಲ್ಲದಿದ್ದಾಗಲೂ ಮಠದಿಂದ ಸ್ವಾಮೀಜಿಗೆ ಉಚ್ಚಾಟಿಸುವ ನಿರ್ಧಾರ ಕೈಗೊಂಡಿದ್ದು ವಿಷಾದದ ಸಂಗತಿ. ಏ.24ರಂದು ಸಾವಿರಾರು ಸಮಾಜ ಬಾಂಧವರು ಶ್ರೀಪೀಠದಲ್ಲಿ ಶ್ರೀ ಬಸವೋತ್ಸವ ಕಾರ್ಯಕ್ರಮ ಆಚರಿಸಿದಾಗ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ದಾನದ ರೂಪದಲ್ಲಿ ಶ್ರೀಪೀಠಕ್ಕೆ ನೀಡಿದ ಹಣ, ಕಟ್ಟಡ ಸಾಮಗ್ರಿಗಳಾದ ಮರಳು, ಕಬ್ಬಿಣ, ಇಟ್ಟಿಗೆ, ತೇಗದ ಮರಮಟ್ಟುಗಳು ಇತ್ಯಾದಿಗಳ ಲೆಕ್ಕವನ್ನು ಸಮರ್ಪಕವಾಗಿ ಇಡದೇ, ದುರ್ಬಳಕೆ ಮಾಡಿಕೊಂಡಿದ್ದನ್ನು ಸಭೆಯಲ್ಲಿ ಚರ್ಚಿಸಿದರು. ಇದರ ಲೆಕ್ಕವನ್ನೂ ನೀಡಬೇಕು ಎಂದು ಅವರು ಹೇಳಿದ್ದಾರೆ.
ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ನಮ್ಮ ಹಿಂಬಾಲಕರು, ಟ್ರಸ್ಟ್‌ನ ಕೆಲ ಟ್ರಸ್ಟಿಗಳು ಮಾಡಿದ ಕೆಲಸ ಮಂಗ ಮೊಸರು ತಿಂದು ಮೇಕೆ ಮೂತಿಗೆ ಒರೆಸಿದಂತಾಗಿದೆ. ತಾವೇ ಕರೆ ತಂದ ಸ್ವಾಮೀಜಿ ವಿರುದ್ಧ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು. ಶ್ರೀಪೀಠದ ಸಮಸ್ತ ಪಂಚಮಸಾಲಿ ಸಮಾಜ ಬಾಂಧವರಿಗೆ ಗಲಾಟೆ, ಗದ್ದಲಗಳಿಗೆ ಅವಕಾಶ ನೀಡದೇ, 18 ವರ್ಷದ ಲೆಕ್ಕಪತ್ರವನ್ನು ಗದ್ದುಗೆ, ದೇವಸ್ಥಾನದಲ್ಲಿ ಪ್ರಮಾಣ ಮಾಡಿ, ಲೆಕ್ಕಪತ್ರ ಒಪ್ಪಿಸಿದರೆ ಈ ವಿಷಯಕ್ಕೆ ಇತಿಶ್ರೀ ಹಾಡಿದರೆ ಸಮಾಜ ಒಪ್ಪುತ್ತದೆ. ನಿಮ್ಮನ್ನು ಗೌರವಿಸುತ್ತದೆ. ಇಲ್ಲದಿದ್ದರೆ ಸಮಾಜ ನಿಮಗೆ ಶಪಿಸುತ್ತದೆ ಎಂದು ಎಚ್.ಎಸ್. ಶಿವಶಂಕರ, ಎಂ.ಜಿ.ಪರಮೇಶ್ವರ ಗೌಡ್ರು, ಬಿ.ಜಿ.ಅಜಯಕುಮಾರ, ರಾಣೆಬೆನ್ನೂರಿನ ಸಿದ್ದಣ್ಣ ಚಿಕ್ಕಬಿದರಿ, ರಟ್ಟೀಹಳ್ಳಿಯ ಮಾಲತೇಶ ಬೆಳಕೆರೆ, ಮಹಾಂತೇಶ ವಿ.ಒಣರೊಟ್ಟಿ ಇತರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ)