ಆಪರೇಷನ್‌ ಕಮಲ ಮಾಡುವ ಅವಶ್ಯಕತೆ ನಮಗಿಲ್ಲ: ಶ್ರೀರಾಮುಲು

KannadaprabhaNewsNetwork |  
Published : Nov 05, 2023, 01:15 AM IST
ಬಿ. ಶ್ರೀರಾಮುಲು. | Kannada Prabha

ಸಾರಾಂಶ

ನಾವು ಯಾವುದೇ ಆಪರೇಷನ್‌ ಕಮಲ ಮಾಡುತ್ತಿಲ್ಲ, ಅದರ ಅವಶ್ಯಕತೆ ನಮಗಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನಾವು ಯಾವುದೇ ಆಪರೇಷನ್‌ ಕಮಲ ಮಾಡುತ್ತಿಲ್ಲ, ಅದರ ಅವಶ್ಯಕತೆ ನಮಗಿಲ್ಲ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಇಂದು ಬರಗಾಲ ತಾಂಡವವಾಡುತ್ತಿದೆ. ನಮ್ಮ‌ ಪಕ್ಷದಿಂದ ಈಗಾಗಲೇ ಬರ ಅಧ್ಯಯನ‌ ತಂಡ ರಚನೆ ಮಾಡಿ ಬರಗಾಲದ ಬಗ್ಗೆ ಸಮಗ್ರ ಅಧ್ಯಯನ‌ ನಡೆಸುತ್ತಿದೆ. ಬರ ವಿಚಾರದ‌ ಬಗ್ಗೆ ಚಿಂತನೆ ಮಾಡಬೇಕಿರುವ ಸರ್ಕಾರ ಯಾವುದೇ ಚಕಾರ ಎತ್ತುತ್ತಿಲ್ಲ. ಈಗಾಗಲೇ ರಾಜ್ಯದಲ್ಲಿ ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಇಷ್ಟೆಲ್ಲ ಸಮಸ್ಯೆ ಇದ್ದರೂ ಮುಖ್ಯಮಂತ್ರಿಗಳು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಶೀಘ್ರವೇ ಮುಖ್ಯಮಂತ್ರಿಗಳು ಬರಗಾಲದಿಂದ ಸಂಕಷ್ಟದಲ್ಲಿರುವ ರೈತರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು. ರೈತರ ಆತ್ಮಹತ್ಯೆಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಕಿಂಚಿತ್ತು ಕಾಳಜಿಯಿಲ್ಲ

ರಾಜ್ಯ ಸರ್ಕಾರ ಕೇವಲ ಮುಖ್ಯಮಂತ್ರಿ ವಿಚಾರವಾಗಿ ಮುಳುಗಿಹೋಗಿದೆ. ಅವರಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕಾಂಗ್ರೆಸ್ಸಿನಲ್ಲಿಯೇ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಎಂಬ ಎರಡು ಬಣಗಳಿವೆ. ರಾಜ್ಯ ಸರ್ಕಾರ ತನ್ನ ನ್ಯೂನತೆಗಳನ್ನು ಮರೆಮಾಚುವುದರಲ್ಲಿ ಮುಳುಗುಹೋಗಿದೆ. ತಮ್ಮ ಜವಾಬ್ದಾರಿ ಮರೆತು ಮುಖ್ಯಮಂತ್ರಿ ಸ್ಥಾನದ ವಿಷಯವಾಗಿ ಕಿತ್ತಾಡಿಕೊಳ್ಳುತ್ತಿದ್ದಾರೆ. ಕಪ್ಪು ಹಣದ ವಿಚಾರ ವಿಷಯಾಂತರ ಮಾಡುವ ಮೂಲಕ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಮಗೆ ಗೊತ್ತಿದೆ

ವಿರೋಧ ಪಕ್ಷದ ನಾಯಕರ ಆಯ್ಕೆ ವಿಚಾರಕ್ಕೆ ಉತ್ತರಿಸಿದ ಶ್ರೀರಾಮುಲು, ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡೋದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು. ಅದನ್ನು ಕೇಳೋಕೆ ಅವರ್‍ಯಾರು? ಯಾವಾಗ ವಿಪಕ್ಷ ನಾಯಕನ ಆಯ್ಕೆ ಮಾಡಬೇಕು ಅನ್ನುವುದು ನಮಗೆ ಗೊತ್ತಿದೆ. ಈ ಬಗ್ಗೆ ನಮ್ಮ‌ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಅವರು ತಮ್ಮ ನಾಟಕೀಯ ಬೆಳವಣಿಗೆ ಬಿಟ್ಟು ಸರ್ಕಾರದ ಕೆಲಸ ಮಾಡಲಿ. ಈ ಅಧಿವೇಶನದ ಒಳಗಾಗಿ ನಮ್ಮ ಪಕ್ಷ ವಿಪಕ್ಷ ನಾಯಕರ ಆಯ್ಕೆ ಮಾಡಲಿದೆ ಎಂದರು.

ಬರ ಅಧ್ಯಯನ‌ ಕುರಿತು ಕೇಂದ್ರಕ್ಕೆ ಈಗಾಗಲೇ ವರದಿ ಕಳಿಸಲಾಗಿದೆ. ಕೇಂದ್ರದಿಂದ ಅವಶ್ಯಕ ಅನುದಾನದ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ಸೂಕ್ತ ತೀರ್ಮಾನ ಮಾಡುತ್ತದೆ. ಲೋಕಸಭಾ ಚುನಾವಣೆಗೆ ನಾನು‌ ಸ್ಪರ್ಧೆ ಮಾಡುವ ಯಾವುದೇ ವಿಚಾರವಿಲ್ಲ. ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಣುಕರು ಲಿಂಗಾಯತ ಸಮುದಾಯದ ಮಹಾನ್ ಆಚಾರ್ಯ
ಜಿಲ್ಲಾದ್ಯಂತ 1200 ಪ್ರೌಢಶಾಲೆಗಳಲ್ಲಿ ಕಾನೂನು ಅರಿವು