ಕಾರ್ಮಿಕ ಮಂಡಳಿ ಸಾಮರ್ಥ್ಯ ವೃದ್ಧಿಗೆ ಹೊಸ ಕಾನೂನು

KannadaprabhaNewsNetwork |  
Published : Nov 05, 2023, 01:15 AM IST
4ಕೆಡಿವಿಜಿ22, 23, 24-ದಾವಣಗೆರೆ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಸಂಘಟಿತ, ಅಸಂಘಟಿತ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಂದ ಅಹವಾಲು ಆಲಿಸಿದ ಕಾರ್ಮಿಕ ಸಚಿವ ಸಂತೋಷ್ ಎಸ್‌.ಲಾಡ್‌.  | Kannada Prabha

ಸಾರಾಂಶ

ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಹೇಳಿಕೆ । 9ಕ್ಕೆ ರಾಜ್ಯದ 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಹೇಳಿಕೆ । 9ಕ್ಕೆ ರಾಜ್ಯದ 7 ಲಕ್ಷ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ರಾಜ್ಯದ 7 ಲಕ್ಷ ಕಾರ್ಮಿಕರ ಮಕ್ಕಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನ.9ರಂದು ವಿದ್ಯಾರ್ಥಿ ವೇತನ ನೀಡಿ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್‌.ಲಾಡ್ ತಿಳಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಶನಿವಾರ ಸಂಘಟಿತ, ಅಸಂಘಟಿತ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಂದ ಅಹವಾಲು ಆಲಿಸಿ ಮಾತನಾಡಿ, ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ₹6,500 ಕೋಟಿ ಸೆಸ್ ಸಂಗ್ರಹವಿದ್ದು, 1.82 ಕೋಟಿ ಕಾರ್ಮಿಕರು ನೋಂದಣಿಯಾಗಿದ್ದಾರೆ ಎಂದರು. ಪ್ರತಿ ವರ್ಷ ಸುಮಾರು 1 ಸಾವಿರ ಕೋಟಿಯಷ್ಟು ಸೆಸ್ ಸಂಗ್ರಹವಾಗುತ್ತಿದ್ದು, ಇದರಲ್ಲಿ 800 ಕೋಟಿ ಸರ್ಕಾರದ ವಲಯದಿಂದ ಸಂಗ್ರಹವಾದರೆ, ಖಾಸಗಿ ವಲಯದಿಂದ 200 ಕೋಟಿ ಸೆಸ್ ಸಂಗ್ರಹವಾಗುತ್ತಿದೆ. ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಮದುವೆ, ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲು ಕನಿಷ್ಠ 3 ಸಾವಿರ ಕೋಟಿ ರು. ಬೇಕಾಗುತ್ತದೆ ಎಂದು ಹೇಳಿದರು.

ಕಾರ್ಮಿಕ ಮಂಡಳಿಗೆ ಸಂಗ್ರಹವಾಗುತ್ತಿರುವ ಸೆಸ್ ಕಡಿಮೆ ಇದ್ದು, ಇದನ್ನು ಹೆಚ್ಚು ಸಂಗ್ರಹಿಸಲು ಮತ್ತು ಕೇಂದ್ರ ಸರ್ಕಾರದಿಂದ ಬರಬೇಕಾದ ಸೆಸ್ ಬಾರದಿರುವುದರಿಂದ ಸಂಗ್ರಹ ಕಡಿಮೆಯಾಗಿದೆ. ಮುಂದಿನ ದಿನಗಳನ್ನು ಅದನ್ನೂ ಸರಿದೂಗಿಸುವ ಕೆಲಸ ಸರ್ಕಾರ ಮಾಡಲಿದೆ. ಮಂಡಳಿಯನ್ನು ಉಳಿಸಿ, ಬೆಳೆಸಲು ಅದರ ಸಾಮರ್ಥ್ಯ ಹೆಚ್ಚಿಸಲು ಹೊಸ ಕಾನೂನು ಜಾರಿಗೊಳಿಸಲುದ್ದೇಶಿಸಿದ್ದೇವೆ. ಇದಕ್ಕಾಗಿ ಹೊಸ ಟೆಕ್ನಾಲಜಿ ಆ್ಯಪ್‌ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿಸಿದರು.

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಸೀನ್‌, ಆಯುಕ್ತ ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಡಿ.ಭಾರತಿ, ಫ್ಯಾಕ್ಟರೀಸ್ ಮತ್ತು ಬಾಯ್ಲರ್‌ಗಳ ಉಪ ನಿರ್ದೇಶಕ ಶ್ರೀನಿವಾಸ ಇತರರಿದ್ದರು. ಟ್ರೇಡ್ ಯೂನಿಯನ್ ಪದಾಧಿಕಾರಿಗಳು, ಎಐಟಿಯುಸಿ, ಸಿಐಟಿಯು, ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಟೈಲರ್‌ ಸಂಘದ ಪದಾಧಿಕಾರಿಗಳು, ಹೊರ ಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳಿದ್ದರು.

ಇಪಿಎಫ್‌, ಇಎಸ್‌ಐ ಸೌಲಭ್ಯ ಶೀಘ್ರ ಸಿಗಲು ಕ್ರಮ

ಹೊರ ಗುತ್ತಿಗೆ ಕಾರ್ಮಿಕರ ಹಿತ ಕಾಯಲು ಡಿಸಿ ಅಧ್ಯಕ್ಷತೆಯಲ್ಲಿ ಜಿಲ್ಲಾವಾರು ಹೊರ ಗುತ್ತಿಗೆ ಸೊಸೈಟಿ ಮಾಡಿ, ಈಗಿರುವ ಹೊರ ಗುತ್ತಿಗೆ ಕಾರ್ಮಿಕರಿಗೆ ಸೊಸೈಟಿ ಮೂಲಕ ಇಪಿಎಫ್‌, ಇಎಸ್‌ಐ ಸೌಲಭ್ಯ ತ್ವರಿತವಾಗಿ ಸಿಗುವಂತೆ ಮಾಡಲಿದ್ದೇವೆ. ಸರ್ಕಾರಿ ವಲಯದಲ್ಲಿ ವಿವಿಧ ಜಿಲ್ಲೆಗಳಲ್ಲಿ 4 ಲಕ್ಷಕ್ಕಿಂತ ಅಧಿಕ ಹೊರ ಗುತ್ತಿಗೆ ನೌಕರರು ಕೆಲಸ ಮಾಡಲಿದ್ದು, ಆ ಎಲ್ಲರಿಗೂ ಇದರಿಂದ ಅನುಕೂಲವಾಗುತ್ತದೆ ಎಂದು ಸಚಿವ ಲಾಡ್‌ ವಿವರಿಸಿದರು.

ಮನೆ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರು, ವಿವಿಧ ಇ-ಕಾಮರ್ಸ್‌ನಲ್ಲಿ ಕೆಲಸ ಮಾಡುವವರಿಗೆ ಗಿಗ್ ಕಾರ್ಮಿಕರೆನ್ನಲಾಗುತ್ತದೆ. ಇಂತಹವರಿಗೂ ಕಲ್ಯಾಣ ಕಾರ್ಯಕ್ರಮ ರೂಪಿಸಲುದ್ದೇಶಿಸಿದೆ. ಮನೆ ಕೆಲಸದ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಆಸ್ತಿ ತೆರಿಗೆಯಲ್ಲಿ ಸೆಸ್ ಸಂಗ್ರಹಿಸುವ ಕಾರ್ಯಕ್ರಮ ರೂಪಿಸುವ ಉದ್ದೇಶವಿದೆ. ವರ್ಷದಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಗುರಿ ಹೊಂದಿದ್ದೇವೆ.

ಸಂತೋಷ್ ಎಸ್‌.ಲಾಡ್, ಕಾರ್ಮಿಕ ಸಚಿವಸಾರಿಗೆ ಕಾರ್ಮಿಕರಿಗಾಗಿ ಪ್ರತ್ಯೇಕ ಮಂಡಳಿ ಸ್ಥಾಪನೆ

* 35 ಲಕ್ಷ ಚಾಲಕರು, ಗ್ಯಾರೇಜ್‌ ಮೆಕ್ಯಾನಿಕ್‌, ಕ್ಲೀನರ್‌ಗೆ ಅನುಕೂಲ: ಸಚಿವ ಸಂತೋಷ್ ಲಾಡ್‌

ದಾವಣಗೆರೆ: ರಾಜ್ಯದ ಸಾರಿಗೆ ವಲಯದಲ್ಲಿ 35 ಲಕ್ಷ ವಾಣಿಜ್ಯ ಬಳಕೆಯ ವಾಹನ ಚಾಲಕರು ಮತ್ತು ಗ್ಯಾರೇಜ್ ಮೆಕ್ಯಾನಿಕ್‌, ಕ್ಲೀನರ್‌ಗಳಿದ್ದು, ಇಂತಹವರಿಗೆ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಪ್ರತ್ಯೇಕವಾಗಿ ಸಾರಿಗೆ ಮಂಡಳಿ ಸ್ಥಾಪಿಸುವ ಉದ್ದೇಶವಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ತಿಳಿಸಿದ್ದಾರೆ.

ನಗರದ ಪಾಲಿಕೆ ಸಭಾಂಗಣದಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಮಿಕರ ಉದ್ದೇಶಿಸಿ ಮಾತನಾಡಿ, ಸಾರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ ಸಂಗ್ರಹವಾಗುವ ಶೇ.11ರ ಸೆಸ್ ನಲ್ಲಿ ಶೇ.27ರಷ್ಟು ಸಾರಿಗೆ ಮಂಡಳಿಗೆ ಸೆಸ್ ನೀಡಲು ಕೇಳಿದ್ದೇವೆ. ಈ ಮೂಲಕ ಸಾರಿಗೆ ಕಲ್ಯಾಣ ಮಂಡಳಿ ಸ್ಥಾಪಿಸಿ, ಕಲ್ಯಾಣ ಕಾರ್ಯಕ್ರಮಗಳನ್ನು ಈ ವಲಯದಲ್ಲಿ ಅನುಷ್ಠಾನ ಮಾಡಲು ಉದ್ದೇಶಿಸಿ, ಅನುಮತಿ ಕೇಳಲಾಗಿದೆ ಎಂದರು.

ಚಲನಚಿತ್ರ, ಕಿರುತೆರೆ, ಚಿತ್ರ ಮಂದಿರಗಳನ್ನು ಕೆಲಸ ಮಾಡುವವರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ಜಾರಿಗೆ ಪ್ರತ್ಯೇಕ ಕಾನೂನು ರೂಪಿಸುವ ಇಂಗಿತವಿದೆ. ಕಾರ್ಮಿಕ ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ವೇತನ ಸಹಿತ ಮುಟ್ಟಿನ ರಜೆ ನೀಡಬೇಕೆಂಬ ಬೇಡಿಕೆ ಕಾರ್ಮಿಕ ಸಂಘಟನೆಗಳದ್ದಾಗಿದೆ. ಪ್ರತಿ ತಿಂಗಳು ವೇತನ ಸಹಿತ ಒಂದು ದಿನ ಮುಟ್ಟಿನ ರಜೆಯನ್ನು ನೀಡುವ ಬಗ್ಗೆ ಪ್ರಸ್ತಾವನೆ ಇದೆ ಎಂದು ಕಾರ್ಮಿಕ ಮುಖಂಡರಿಗೆ ಸಂವಾದದಲ್ಲಿ ಸಂತೋಷ್ ಲಾಡ್ ತಿಳಿಸಿದರು.

.........................ಹಮಾಲರ ಮನವಿಗೆ ಸ್ಪಂದನೆ

ದಾವಣಗೆರೆ:ಎಪಿಎಂಸಿಗಳಲ್ಲಿ ಕೆಲಸ ಮಾಡುವ ಹಮಾಲರಿಗೆ 60 ವರ್ಷದ ನಂತರ ಪರವಾನಗಿ ನವೀಕರಣ ಮಾಡುತ್ತಿಲ್ಲ. ಇದರಿಂದ ತಮ್ಮ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆಯೆಂದು ಹಮಾಲರು ಮಾಡಿದ ಮನವಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸಕಾರಾತ್ಮಕವಾಗಿ ಸ್ಪಂದಿಸಿದರು. ಹಮಾಲರಿಗೆ ಪರವಾನಗಿ ನವೀಕರಣ 65 ವರ್ಷಗಳಿಗೆ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಶ್ರಮಿಕ ಭವನಕ್ಕೆ ಮೂಲಭೂತ ಸೌಕರ್ಯಗಳಿಲ್ಲವೆಂಬ ಸಂಗತಿ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸಂತೋಷ್ ಲಾಡ್ ಭರವಸೆ ನೀಡಿದರು. ಚಿಂದಿ ಆಯುವವರ ಬದುಕು ದುಸ್ತರವಾಗಿದ್ದು, ನಗರಸಭೆಯಿಂದ ಸಂಗ್ರಹವಾಗುವ ಒಣ ಕಸವನ್ನು ಚಿಂದಿ ಆಯುವವರಿಗೆ ನೀಡಬೇಕೆಂಬ ಗೀತಮ್ಮ ಎಂಬುವರ ಮನವಿಗೆ, ನೀವೊಂದು ಸ್ವಸಹಾಯ ಗುಂಪುಗಳ ರಚಿಸಿಕೊಂಡು, ಮುಂದೆ ಬರಲು ಸಚಿವರು ಕಿವಿಮಾತು ಹೇಳಿದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ