ಕನ್ನಡಪ್ರಭ ವಾರ್ತೆ ಕೊರಟಗೆರೆ
ನಿಮ್ಮನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ. ರೈತರ ಹಿತ ಕಾಪಾಡಿಕೊಂಡು, ನಿಮ್ಮ ಸಲಹೆಗಳನ್ನು ಸ್ವೀಕರಿಸಿ, ನಿಮಗೆ ಹೆಚ್ಚು ತೊಂದರೆಯಾಗದಂತೆ ಎತ್ತಿನಹೊಳೆ ಯೋಜನೆ ನೀರನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರೈತರಿಗೆ ಭರವಸೆ ನೀಡಿದರು.ಕೊರಟಗೆರೆ ತಾಲೂಕಿನ ಬೈರಗೊಂಡ್ಲು ಬಳಿ ಬಫರ್ ಡ್ಯಾಂ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಸ್ಥಳವನ್ನು ಶನಿವಾರ ಪರಿಶೀಲಿಸಿ ನಂತರ ಜಲಾಶಯ ನಿರ್ಮಾಣದಿಂದ ಮುಳುಗಡೆಯಾಗುವ ಸ್ಥಳೀಯ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು.
ಬಯಲು ಸೀಮೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಎತ್ತಿನಹೊಳೆ ಯೋಜನೆ ರೂಪಿಸಲಾಗಿದೆ. ಬೈರಗೊಂಡ್ಲು ಸಮೀಪ ಜಲಾಶಯ ಮಾಡಿದರೆ ಸುಮಾರು ೫ ಟಿಎಂಸಿ ನೀರನ್ನು ಸಂಗ್ರಹ ಮಾಡಬಹುದು. ಇದರಿಂದ ೫ ಸಾವಿರ ಎಕರೆ ಪ್ರದೇಶ ಮುಳುಗಡೆಯಾಗಲಿದೆ ಎಂದರು.ಈಗಾಗಲೇ ಹಾಸನ ಮಾರ್ಗವಾಗಿ ಪೈಪ್‌ಲೈನ್ ಕೆಲಸ ಪೂರ್ಣಗೊಂಡು ಇಲ್ಲಿಯವರೆಗೂ ಬಂದಿದೆ. ಮುಂದೆ ಕೋಲಾರ ಹಾಗೂ ಚಿಕ್ಕಬಳ್ಳಾಪುರಕ್ಕೆ ಪೈಪ್ ಲೈನ್ ಕೆಲಸ ಆರಂಭಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವನಾದ ಬಳಿಕ ಈ ಯೋಜನೆಯ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರದಲ್ಲಿ ಎಕರೆಗೆ ೩೨ ಲಕ್ಷ ಒಂದು ಬೆಲೆ, ಕೊರಟಗೆರೆ ಭಾಗದಲ್ಲಿ ೨೦ ಲಕ್ಷ ಒಂದು ಬೆಲೆ ನೀಡಲಾಗುತ್ತಿದೆ. ಪರಿಹಾರ ಸಮಾನವಾಗಿ ನೀಡಬೇಕು ಎಂದು ಈ ಭಾಗದ ರೈತರ ಬೇಡಿಕೆಯಾಗಿದೆ. ಈ ವಿಚಾರ ಬಗೆಹರಿಸಲು ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರಿಗೆ ನೀಡಿದ್ದೆವು ಎಂದು ಹೇಳಿದರು.ಕೋಲಾರ, ಚಿಕ್ಕಬಳ್ಳಾಪುರಕ್ಕೆ ನೀರು ತೆಗೆದುಕೊಂಡು ಹೋಗಲೇಬೇಕು. ನಿಮಗೆ ಭೂಮಿ ಬಿಟ್ಟುಕೊಡಲು ಇಚ್ಛೆ ಇಲ್ಲ. ಆದರೂ ಯೋಜನೆ ಮಾಡಲೇಬೇಕು. ಇದಕ್ಕೆ ಪರಿಹಾರ ಏನು ? ನಿಮಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ನಿಮ್ಮ ಜತೆ ಚರ್ಚಿಸಲು ಬಂದಿದ್ದೇನೆ. ನಿಮಗೆ ಸಹಾಯ ಮಾಡಲು ಬಂದಿದ್ದೇನೆ ಹೊರತು, ನಿಮಗೆ ತೊಂದರೆ ಮಾಡಲು ಬಂದಿಲ್ಲ. ಈ ಯೋಜನೆ ಜಾರಿಗೆ ನೀವೇ ಪರಿಹಾರ ಹೇಳಿ ಎಂದು ರೈತರಿಗೆ ಹೇಳಿದರು.
ಕಣಿವೆ ಪ್ರದೇಶದಲ್ಲಿ ಎರಡು ಅಣೆಕಟ್ಟು ನಿರ್ಮಿಸಿಈ ವೇಳೆ ಗ್ರಾಮಸ್ಥರು ಮಾತನಾಡಿ ಈ ಭಾಗದಲ್ಲಿರುವ ರೈತರು ಬಡವರು. ಎಲ್ಲರೂ ೧ ಅಥವಾ ೨ ಎಕರೆ ಭೂಮಿ ಹೊಂದಿರುವ ರೈತರು. ಹೀಗಾಗಿ ಇಲ್ಲಿ ಜಲಾಶಯ ನಿರ್ಮಾಣ ಮಾಡಬೇಡಿ. ಇನ್ನು ಮುಂದೆ ಕಣಿವೆ ಪ್ರದೇಶದಲ್ಲಿ ಎರಡು ಆಣೆಕಟ್ಟು ನಿರ್ಮಿಸಲು ಅವಕಾಶವಿದೆ ಜಲಾಶಯವನ್ನು ಬೇರೆಡೆ ನಿರ್ಮಿಸಿ ಎಂದು ಮನವಿ ಸಲ್ಲಿಸಿದರು.
ಕೋಟ್ಈ ಯೋಜನೆಗಾಗಿ ಈಗಾಗಲೇ ೧೭ ಸಾವಿರ ಕೋಟಿ ಬಂಡವಾಳ ಹಾಕಿದ್ದೇವೆ. ಬಹುತೇಕ ಕಡೆಗಳಲ್ಲಿ ಕಾಮಗಾರಿ ಮುಗಿದಿವೆ. ಹೀಗಾಗಿ ಈ ಯೋಜನೆ ಜಾರಿ ಮಾಡಲೇಬೇಕು. ನೀವು ಬೈದರೂ ಸರಿ, ಎರಡು ಏಟು ಹೊಡೆದರೂ ಕಲ್ಲು ಎಸೆದರೂ ಬೇಜಾರು ಮಾಡ್ಕೋಳ್ಳಲ್ಲ. ನಿಮ್ಮ ಮಾತನ್ನು ಆಲಿಸಿ, ನಿಮ್ಮ ಸಲಹೆ ಸ್ವೀಕರಿಸಲು ಬಂದಿದ್ದೇನೆ. ನಾವು ಇಲ್ಲಿ ಯಾರಿಂದಲೂ ಜಮೀನನ್ನು ಪುಕ್ಕಟೆಯಾಗಿ ಕಿತ್ತುಕೊಳ್ಳಲು ಬಂದಿಲ್ಲ. ನಿಮ್ಮನ್ನು ಬಲವಂತವಾಗಿ ಒಕ್ಕಲು ಎಬ್ಬಿಸುವುದಿಲ್ಲ. - ಡಿ.ಕೆ.ಶಿವಕುಮಾರ್ ಡಿಸಿಎಂ ಹಾಗೂ ಜಲ ಸಂಪನ್ಮೂಲ ಸಚಿವ