ಶಿಗ್ಗಾಂವಿ: ಊಟ ಬೇಕಾದರೆ ನೀಡುತ್ತೇವೆ, ಆದರೆ ಕುಡಿಯುವ ನೀರು ಕೊಡಲು ಅಸಾಧ್ಯ...
ಗ್ರಾಮದಲ್ಲಿ 800ರಿಂದ 900 ಜನಸಂಖ್ಯೆ ಇದೆ. ಗ್ರಾಮಕ್ಕೆ ಜೆಜೆಎಂ ಯೋಜನೆಯಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗ್ರಾಮದಲ್ಲಿ ಸುಮಾರು ೫ ಕೊಳವೆಬಾವಿಗಳಿವೆ. ಅದರಲ್ಲಿ ಎರಡರಲ್ಲಿ ಅಂತರ್‌ಜಲ ಮಟ್ಟ ಕಡಿಮೆ ಆಗಿದೆ. ಇನ್ನೂ ಎರಡು ನೀರಿಲ್ಲದೆ ಸಂಪೂರ್ಣ ಬರಿದಾಗಿದೆ. ಒಂದೇ ಒಂದು ಕೊಳವೆಬಾವಿ ಕಾರ್ಯನಿರ್ವಹಿಸುತ್ತಿದೆ. ಜನರ ಆ ಕೊಳವೆಬಾವಿ ಮುಂದೆ ಸರತಿಯಲ್ಲಿ ನಿಂತು ನೀರು ತರುತ್ತಾರೆ.
ಟ್ಯಾಂಕ್‌ಗೆ ಹೋಗುವ ಒಂದು ಕೊಳವೆ ಬಾವಿಯಲ್ಲಿಯ ಮೋಟಾರು ಕೆಟ್ಟಿದ್ದು, ವಿದ್ಯುತ್ ಸಮಸ್ಯೆಯಾಗಿದೆ. ಇದರಿಂದ ಟ್ಯಾಂಕರ್‌ಗೆ ನೀರು ಎತ್ತಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಮೌಖಿಕವಾಗಿ ೬-೭ ದಿನಗಳಿಂದ ಪಿಡಿಒ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಿಸಿದ ತಾಪಂ ಕಾರ್ಯನಿರ್ವಾಕರಿಗೂ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.ಗ್ರಾಮದಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ಜಲ ನಿರ್ಮಲ ಯೋಜನೆಯಲ್ಲಿ ನೀರು ಸರಬರಾಜು ವ್ಯವಸ್ಥೆ ಮಾಡಿದ್ದರೂ ನಲ್ಲಿಯಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹೀಗೆಯೇ ಮುಂದುವರಿದರೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಜಿಪಂ ಅಧಿಕಾರಿಗಳು ತಕ್ಷಣ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಗ್ರಾಮಸ್ಥರಾದ ಕಲ್ಲಪ್ಪ ನಡಗೇರಿ, ಕೋಟೆಪ್ಪ ಸಂಜೀವಣ್ಣವರ, ರುದ್ರಪ್ಪ ಕಾಳಿ, ಹನುಮಂತಪ್ಪ ಈಟಿ ಇತರರು ಆಗ್ರಹಿಸಿದ್ದಾರೆ.