ಸಂಡೂರು: ಕ್ಷೇತ್ರದ ಅಭಿವೃದ್ಧಿಗೆ ನಾನು ಹಾಗೂ ಈ.ತುಕಾರಾಂ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ಬಡಜನರ ಸೇವೆಗಾಗಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಕೊನೆಯ ಉಸಿರು ಇರುವವರೆಗೂ ಜನರ ಸೇವೆ ಮಾಡುವೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಹೇಳಿದರು.
ಕ್ಷೇತ್ರದ ಜನತೆಗೆ ಅಗತ್ಯವಾದ ಕುಡಿಯುವ ನೀರು, ಉತ್ತಮ ರಸ್ತೆ, ಆಸ್ಪತ್ರೆ, ಶಾಲೆ ಮುಂತಾದ ಮೂಲ ಸೌಕರ್ಯಗಳನ್ನು ಕೊಡಲು ನಾನು ಮತ್ತು ಈ. ತುಕಾರಾಂ ಅವರು ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ. ತಾಲೂಕಿನಲ್ಲಿ ಎಲ್ಲ ಜನಾಂಗದವರು ಅಣ್ಣ-ತಮ್ಮಂದಿರಂತೆ ಬದುಕಿದ್ದೇವೆ. ಕಳೆದ ೨೫ ವರ್ಷಗಳಲ್ಲಿ ಕ್ಷೇತ್ರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಂಡು ಬಂದಿದ್ದೇವೆ. ಗಣಿ ಭಾಗದ ಜನತೆಗೆ ಅನುಕೂಲವಾಗಲೆಂದು ಆಗಿನ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆತಂದು, ಡಿಗ್ಗಿಂಗ್‌ಗೆ ಅವಕಾಶ ಕಲ್ಪಿಸಲಾಯಿತು. ಆದರೆ, ರೈತರ ಜಮೀನುಗಳಿಂದ ತೆಗೆದ ಸುಮಾರು ₹೭೦೦ ಕೋಟಿ ಬೆಲೆ ಬಾಳುವಷ್ಟು ಅದಿರನ್ನು ಬಿಜೆಪಿ ಸರ್ಕಾರ ಸೀಜ್ ಮಾಡಿಸಿತು ಎಂದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕಡು ಬಡವರಿಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಬಿಜೆಪಿಯವರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರು ಐದು ವರ್ಷಕ್ಕೊಮ್ಮೆ ಬರುತ್ತಾರೆ. ಅವರಿಗೆ ಇಲ್ಲಿನ ಅಭಿವೃದ್ಧಿಗಿಂತ ಇಲ್ಲಿನ ಸಂಪತ್ತಿನ ಮೇಲೆಯೇ ಹೆಚ್ಚಿನ ಆಸಕ್ತಿ. ಸಂಡೂರು ತಾಲೂಕಿನ ಸಂಪತ್ತು ಕ್ಷೇತ್ರದ ಜನತೆಗಾಗಿ ಸದ್ಬಳಕೆ ಆಗಬೇಕಿದೆ ಎಂದು ತಿಳಿಸಿದರು.ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಅವರನ್ನು ಬೆಂಬಲಿಸಿ, ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ಮತಯಾಚಿಸಿದರು. ಮುಖಂಡರಾದ ತುಮಟಿ ಲಕ್ಷ್ಮಣ, ಆಶಾಲತಾ ಸೋಮಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.