- ಕುಂಬಳೂರಿನಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಹಳೇ ವಿದ್ಯಾರ್ಥಿಗಳು ಮತ್ತು ಗುರುಗಳು ಒಂದೆಡೆ ಸಮ್ಮಿಲನ ಆಗಿರುವುದು ಹಲವು ನದಿಗಳ ಸಂಗಮದಂತಾಗಿದೆ. ಸರ್ಕಾರ ನೀಡುವ ಗೌರವಕ್ಕಿಂತ ವಿದ್ಯಾರ್ಥಿಗಳು ಸಲ್ಲಿಸುವ ಈ ಗೌರವ ಕಿರೀಟಪ್ರಾಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ವಿ.ಎಸ್. ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.ಕುಂಬಳೂರಿನಲ್ಲಿ ಭಾನುವಾರ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ೧೯೮೦ ರಿಂದ ೨೦೦೦ ಸಾಲಿನಲ್ಲಿ ಶಿಕ್ಷಣ ಪಡೆದ ಹಳೇ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಡಿಮೆ ಫಲಿತಾಂಶ ಬಂದಾಗ ಎಚ್ಚರಿಸುವ ಗ್ರಾಮಸ್ಥರು ಇಲ್ಲಿದ್ದಾರೆ. ಬೋಧಕರಾದವರು ಕರ್ತವ್ಯ ನಿಷ್ಠೆ ತೋರಿ ಪಾಠ ಬೋಧಿಸಬೇಕಿದೆ. ನಮಗೆ ಗುರುಗಳು ನೀಡಿದ ಜ್ಞಾನವನ್ನೇ ಈ ವಿದ್ಯಾರ್ಥಿಗಳಿಗೂ ಧಾರೆ ಎರೆದಿದ್ದೇವೆ ಎಂದರು.
ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕ ಕೆ.ಚಂದ್ರಪ್ಪ ಮಾತನಾಡಿ, ಶಿಕ್ಷಣ ಹಾಗೂ ಸಂಸ್ಕಾರ ಕಲಿಸಿದ ಗುರುಗಳಿಗೆ ಗುರುವಂದನೆ ಸಲ್ಲಿಸುವ ಮೂಲಕ ನಮಗೆಲ್ಲ ಖುಷಿ ಮತ್ತು ತೃಪ್ತಿ ನೀಡಿದ್ದೀರಿ. ನಿಮ್ಮ ಬದುಕು ಬಂಗಾರವಾಗಲಿ ಎಂದು ಹಳೇ ವಿದ್ಯಾಥಿಗಳಿಗೆ ಶುಭ ಹಾರೈಸಿದರು.
ಬೆಂಗಳೂರು ನಗರ ಜಿಲ್ಲೆಯ ಡಯಟ್ ಹಿರಿಯ ಉಪನ್ಯಾಸಕಿ ಡಿ.ಎ. ಶ್ರೀದೇವಿ ಮಾತನಾಡಿ, ವೃತ್ತಿ ಜೀವನದ ಮೊದಲ ಗ್ರಾಮ ಇದಾಗಿದೆ. ಇಲ್ಲಿ ಪಾಠ ಮಾಡಿದ ಅನುಭವ, ಹಳೆಯ ವಿದ್ಯಾರ್ಥಿಗಳ ಗುರುಭಕ್ತಿಯ ತುಡಿತಕ್ಕೆ ಈ ಕಾರ್ಯಕ್ರಮವು ಸಾಕ್ಷಿಯಾಗಿದೆ ಎಂದರು.
ನಿವೃತ್ತ ಶಿಕ್ಷಕರಾದ ಎಂ.ವೈ ರಾಜವಾಡ್, ಕೆ.ಎ. ಅರಹುಣಸಿ, ಶಾಂತ ಮುಳಗುಂದ, ಕೆ.ರವಿ, ಎಚ್‌ಎಂ ನಿಂಗಪ್ಪ, ಸಾವಿತ್ರಮ್ಮ, ಜಿ.ಆರ್. ಶಿವಕುಮಾರ್, ಸರ್ವಮಂಗಳಮ್ಮ, ಪಿ.ಜಯಣ್ಣ, ಎಂ.ಡಿ. ಗದಿಗೆಪ್ಪ, ಡಿ.ರವೀಂದ್ರಪ್ಪ, ನಿವೃತ್ತ ಪ್ರಾಚಾರ್ಯ ವಿ.ಕೆ. ನಾಗರಾಜ್, ನಿವೃತ್ತ ಎಫ್‌ಡಿಎ ದೇವೇಂದ್ರಪ್ಪ, ಸಹಾಯಕ ದುರುಗಪ್ಪ ಮತ್ತಿತರರನ್ನು ಗೌರವಿಸಲಾಯಿತು.
- - -
ಕುಂಬಳೂರಿನಲ್ಲಿ ಭಾನುವಾರ ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ- ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.