ಮುಂಡಗೋಡ: ದೇವಾಲಯ, ಚರ್ಚ್ ಹಾಗೂ ಮಸೀದಿಗಳಿಗೆ ಒಂದೊಂದು ಸಮುದಾಯದವರು ಹೋಗುತ್ತಾರೆ. ಆದರೆ ಶಿಕ್ಷಣ ದೇಗುಲಕ್ಕೆ ಮಾತ್ರ ಎಲ್ಲ ವರ್ಗದ ಮಕ್ಕಳು ಹೋಗುತ್ತಾರೆ. ಮಕ್ಕಳ ಭೌತಿಕ ಮಟ್ಟವನ್ನು ಹೆಚ್ಚಿಸಲು ಸಾಮಾಜಿಕ, ಸಾರ್ವಜನಿಕವಾದ ಈ ವಿದ್ಯಾ ದೇವಾಲಯದ ಗುಣಮಟ್ಟವನ್ನು ಹೆಚ್ಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ವಿಐಎನ್‌ಪಿ ಇನ್ಪ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಾಣವಾದ ತಾಲೂಕಿನ ಉಗ್ಗಿನಕೇರಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆಚ್ಚು ಮಕ್ಕಳ ಭೌತಿಕ ಶಿಕ್ಷಣ ಬೆಳವಣಿಗೆ ಹಾಗೂ ಜನರ ಆರೋಗ್ಯ ಉತ್ತಮವಾಗಿರಬೇಕು ಎಂಬ ದೃಷ್ಟಿಯಿಂದ ವಿದ್ಯೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಐಎನ್‌ಪಿ ಕಂಪನಿಯಿಂದ ಆದ್ಯತೆ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳು ಉನ್ನತೀಕರಣವಾಗಬೇಕಾದರೆ ಸರ್ಕಾರದ ಜತೆಗೆ ಸಮೂಹ ಸಂಸ್ಥೆಗಳ ಸಹಾಯ ಸಹಕಾರ ಅತ್ಯಗತ್ಯ ಎಂದರು.ವಿಐಎನ್‌ಪಿ ಸಂಸ್ಥೆ ಮುಖ್ಯಸ್ಥ ಹಾಗೂ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಮಾತನಾಡಿ, ಉಸಿರಿನೊಂದಿಗೆ ಭೂಮಿಗೆ ಬರುವ ನಾವು ಹೆಸರನ್ನು ಬಿಟ್ಟು ಹೋಗಬೇಕು ಎಂಬುದು ನಮ್ಮ ಧ್ಯೇಯ. ಸಾಮಾಜಿಕ ಕಳಕಳಿ ಇರುವವರೇ ನಿಜವಾದ ಜನನಾಯಕ. ಸಮಾಜದಿಂದ ಪಡೆದ ಲಾಭದ ಕೆಲವಷ್ಟು ಪಾಲನ್ನು ಸಮಾಜ ಸೇವೆಗಾಗಿ ನೀಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ ಮಾತನಾಡಿ, ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಂಡು, ಒಳ್ಳೆಯ ಮೌಲ್ಯಯುತ ಮಕ್ಕಳನ್ನು ಸಮಾಜಕ್ಕೆ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ನಂದಿಕಟ್ಟಾ ಗ್ರಾಪಂ ಅಧ್ಯಕ್ಷ ಸಂತೋಷ ಬೋಸಲೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಎಂ. ನಾಯ್ಕ, ಮಹಿಳಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾದ ಶಾರದಾ ರಾಠೋಡ, ಧರ್ಮರಾಜ ನಡಿಗೇರ, ಪ್ರಮುಖರಾದ ದೇವು ಪಾಟೀಲ್, ಬಸವರಾಜ ನಡುವಿನಮನಿ, ವೈ.ಪಿ. ಭುಜಂಗಿ, ಯುವ ಕಾಂಗ್ರೆಸ್ ಅಧ್ಯಕ್ಷ ರಾಜು ಕುಟ್ರಿ, ಎಸ್‌ಡಿಎಂಸಿ ಅಧ್ಯಕ್ಷ ಮೌಲಾಸಾಬ್ ನದಾಪ್. ಬಿಆರ್‌ಸಿ ಸಮನ್ವಯಾಧಿಕಾರಿ ರಮೇಶ ಅಂಬಿಗೇರ, ಎಸ್.ಸಿ. ಬಸನಗೌಡರ, ಸೋಮು ಮುಡೆಣ್ಣವರ, ಬಾಗುಬಾಯಿ ಪಟಕಾರೆ, ಸಾವಿತ್ರಿ ಕರ್ಲಕೊಪ್ಪ ಉಪಸ್ಥಿತರಿದ್ದರು. ಡಾ. ಪಿ. ನಾಗೇಂದ್ರ ಸ್ವಾಗತಿಸಿದರು. ರವಿಕುಮಾರ ಕಾರ್ಯಕ್ರಮ ನಿರೂಪಿಸಿದರು. ಜೈಬೂನ್ ಖಾಜಿ ವಂದಿಸಿದರು.